ಹುಬ್ಬಳ್ಳಿ: ದೇಶಕ್ಕೆ ಭವಿಷ್ಯವಿದೆ ಎಂಬುದನ್ನು ತೋರಿಸಿಕೊಟ್ಟವರು ಪ್ರಧಾನಿ ನರೇಂದ್ರ ಮೋದಿ ಅವರು. ತಲೆಬುಡ ಇಲ್ಲದ ನಾಯಕ ಸಿದ್ದರಾಮಯ್ಯ ಇದೀಗ ಮೋದಿ ಅವರನ್ನು ಟೀಕಿಸುತ್ತಿದ್ದಾರೆ. ಮುಂದೆ ಅವರೇ ಮೋದಿ ಅವರ ಸಾಧನೆಯನ್ನು ಬೀದಿ ಬೀದಿಗಳಲ್ಲಿ ಹೇಳುವ ಕಾಲ ಬರುತ್ತದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಕೇಂದ್ರದ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಕಲ್ಪನೆಯಲ್ಲಿ ಹಲವಾರು ಯೋಜನೆಗಳ ಮೂಲಕ ಸಾಮಾನ್ಯರ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ದೇಶಕ್ಕೆ ತೊಂದರೆ ಕೊಟ್ಟವರಿಗೆ ನರೇಂದ್ರ ಮೋದಿ ನೇತೃತ್ವದಲ್ಲಿ ತಕ್ಕ ಉತ್ತರ ಕೊಡಲಾಗಿದೆ. ಇಡೀ ವಿಶ್ವ ಇಂದು ದೇಶದ ಜತೆಗೆ ಇದೆ. ಅದಕ್ಕೆ ಕಾರಣ ನರೇಂದ್ರ ಮೋದಿ ಅವರಾಗಿದ್ದಾರೆ. ವಿವಿಧ ದೇಶಕ್ಕೆ ಸರ್ವಪಕ್ಷಗಳ ನಿಯೋಗ ಕಳಿಸುವ ಮೂಲಕ ಭಯೋತ್ಪಾದನೆ ವಿರುದ್ಧ ವಿಶ್ವದ ಗಮನ ಸೆಳೆದರು. ಅಲ್ಲದೆ, ಜಾತಿ, ಕುಲ ಕೇಳದೆ ದೂರದೃಷ್ಟಿಯ ಮೂಲಕ ಎಲ್ಲ ವರ್ಗದವರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ ಎಂದರು.
ಬೆಂಗಳೂರು ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೈಗಾರಿಕೆ ಹಾಗೂ ಸೌಲಭ್ಯ ಹೊಂದಿರುವ ನಗರ ಹುಬ್ಬಳ್ಳಿಯಾಗಿದೆ. ಹೀಗಾಗಿ ಹುಬ್ಬಳ್ಳಿ ಧಾರವಾಡ ನಗರ ಜಗತ್ತಿನ ಭೂಪಟದಲ್ಲಿ ಮಿಂಚುತ್ತಿದೆ ಎಂದರು.ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಭಾರತ ದೇಶ ಏನು ಎಂದು ತೋರಿಸಿಕೊಟ್ಟವರೆಂದರೆ ಅವರು ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ. ದೇಶದ ಜನರಿಗಾಗಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಅಡಿಯಲ್ಲಿ ಹಲವಾರು ಯೋಜನೆ ತಂದಿದ್ದಾರೆ. ದೇಶಕ್ಕೆ ಪದೇ ಪದೇ ತೊಂದರೆ ಕೊಡುತ್ತಿದ್ದ ಪಾಕಿಸ್ತಾನಕ್ಕೆ ಆಪರೇಷನ್ ಸಿಂದೂರ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ನಾವೆಲ್ಲರೂ ಅವರ ಜತೆ ನಿಲ್ಲೋಣ ಎಂದರು.
ಹುಬ್ಬಳ್ಳಿ:
ಕೇಂದ್ರ ಸರ್ಕಾರ ಯಶಸ್ವಿ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರದ ಸಾಧನೆಗಳನ್ನು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
45 ಎಕರೆ ಅಷ್ಟೇ!: ಧಾರವಾಡ- ಬೆಳಗಾವಿ ರೈಲು ಮಾರ್ಗಕ್ಕೆ ಅಡ್ಡಿಯಾಗಿದ್ದ ಭೂ ಸ್ವಾಧೀನ ಅಡಚಣೆಯನ್ನು ರಾಜ್ಯ ಮೂಲಸೌಕರ್ಯ ಖಾತೆ ಸಚಿವ ಎಂ.ಬಿ. ಪಾಟೀಲ ನಿವಾರಿಸಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಪ್ರಕ್ರಿಯೆ ಸರಾಗವಾಗಿದೆ. ಧಾರವಾಡ ಜಿಲ್ಲೆಯಲ್ಲಿ 45 ಎಕರೆ ಸ್ವಾಧೀನ ಸಮಸ್ಯೆಯಿದ್ದು, ಕೆಲವೇ ದಿನಗಳಲ್ಲಿ ಬಗೆಹರಿಯಲಿದೆ. ನನ್ನ ಅವಧಿಯಲ್ಲಿಯೇ ಯೋಜನೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದರು.
₹3- 5 ಲಕ್ಷ ಕೋಟಿ ಬಂಡವಾಳ: 11 ವರ್ಷಗಳಲ್ಲಿ ರಾಜ್ಯದಲ್ಲಿ ₹3-5 ಲಕ್ಷ ಕೋಟಿ ಬಂಡವಾಳ ಹೂಡಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರೈಲ್ವೆ ಯೋಜನೆಗಳಿಗೆ ₹41 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಬೀದರ- ಹೈದರಾಬಾದ್ ನಡುವೆ ದ್ವಿಪಥ ಮಾರ್ಗ ನಿರ್ಮಿಸಲಾಗುವುದು. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ವಂದೇ ಭಾರತ್ ರೈಲುಗಳನ್ನು ಓಡಿಸುತ್ತೇವೆ ಎಂದರು.
ಈ ವಿಷಯದಲ್ಲಿ ಗೃಹ ಸಚಿವ ಡಾ. ಪರಮೇಶ್ವರ ದುಡುಕುವುದಿಲ್ಲ ಎಂಬ ವಿಶ್ವಾಸವಿದೆ. ಈ ವಿಚಾರದಲ್ಲಿ ನಾನು ಇನ್ನೂ ನಿಲುವು ತಳೆದಿಲ್ಲ. ಒಳ್ಳೆಯದಾದರೆ ಸಪೋರ್ಟ್ ಮಾಡುತ್ತೇನೆ, ಕೇಡು ಎನಿಸುವುದಾದರೆ ವಿರೋಧಿಸುತ್ತೇನೆ ಎಂದರು.
ಚರ್ಚೆಗೆ ಪಂಥಾಹ್ವಾನ: ಕೇಂದ್ರದ 11 ವರ್ಷಗಳ ಆಡಳಿತ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಝೀರೋ ಮಾರ್ಕ್ಸ್ ಕೊಡುವುದಾಗಿ ಹೇಳಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ವಿ. ಸೋಮಣ್ಣ, ಮೋದಿ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗಿಲ್ಲ ಎಂದರು.ಇಂಥ ಉಡಾಫೆ ಮಾತುಗಳನ್ನು ಬಿಡಬೇಕು. ಕಾಂಗ್ರೆಸ್‌ನವರಿಗೆ ಮಾತನಾಡಲು ನೈತಿಕತೆ ಇಲ್ಲ. ಕೈಲಾಗದವ ಮೈ ಪರಚಿಕೊಂಡರಂತೆ ಎನ್ನುವಂತೆ ಕಾಂಗ್ರೆಸ್ಸಿಗರು ವರ್ತಿಸುತ್ತಿದ್ದಾರೆ. ಇಂಥ ಮಾತುಗಳನ್ನು ಜನರ ಗಂಭೀರವಾಗಿ ಸ್ವೀಕರಿಸುವುದಿಲ್ಲ. ಮೊದಲಿನ ಸಿದ್ದರಾಮಯ್ಯ ಈಗಿಲ್ಲ. ಅವರು ಕಾಣೆಯಾಗಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಕೇಂದ್ರದ ಆಡಳಿತ, ಅಭಿವೃದ್ಧಿ ನೋಡಲು ಸಿಎಂ 8 ದಿನ ದೆಹಲಿಯಲ್ಲಿ ಕುಳಿತು ನೋಡಲಿ, ಅವರಿಗೆ ಜ್ಞಾನೋದಯವಾಗುತ್ತದೆ. ಅಭಿವೃದ್ಧಿ ಕುರಿತಾಗಿ ಸಿಎಂ ಬಹಿರಂಗ ಚರ್ಚೆಗೆ ಬರಲಿ ಎಂದು ಸಚಿವ ಸೋಮಣ್ಣ ಪಂಥಾಹ್ವಾನ ನೀಡಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಆರ್. ಪಾಟೀಲ, ಹು-ಧಾ ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಸಂಜಯ ಕಪಟಕರ, ಡಾ. ಕ್ರಾಂತಿ ಕಿರಣ ಹಾಗೂ ಇತರರು ಇದ್ದರು.