ಕನ್ನಡಪ್ರಭ ವಾರ್ತೆ ಹೊಸದುರ್ಗ
ಬೆಂಗಳೂರಿನ ವಿಕಾಸಸೌಧದಲ್ಲಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಕೆಲವರು ಕೇವಲ ಸಬ್ಸಿಡಿ ಪಡೆಯುವ ಉದ್ದೇಶದಿಂದ ಜವಳಿ ಪಾರ್ಕ್‍ಗೆ ಆಸಕ್ತಿ ತೋರಿಸುತ್ತಾರೆ. ನಂತರ ಅಭಿವೃದ್ಧಿ ಮಾಡುವ ಆಸಕ್ತಿ ಅವರಿಗೆ ಇರುವುದಿಲ್ಲ. ಅಂತಹ ಕಂಪನಿಗಳು ನಮಗೆ ಬೇಕಿಲ್ಲ. ಜವಳಿ ಕ್ಷೇತ್ರದಲ್ಲಿ ಸಾಧನೆ ಮಾಡುವ ಆಸಕ್ತರನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಿ ಉತ್ತೇಜನ ಕೊಡಿ ಎಂದು ಹೇಳಿದರು.
ಉದ್ದೇಶಿತ ಜವಳಿ ಪಾರ್ಕ್ ಸ್ಥಾಪನೆ ಯೋಜನೆ ಯಾವ ಹಂತದಲ್ಲಿ ಇದೆ ಎಂಬ ಬಗ್ಗೆ ಮಾಹಿತಿ ಪಡೆದ ಸಚಿವರು ಕ್ಷೇತ್ರದ ಶಾಸಕ ಗೋವಿಂದಪ್ಪ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಯೋಜನೆಯನ್ನು ತ್ವರಿತವಾಗಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಈಗಾಗಲೇ ಉದ್ಯಮ ಸ್ಥಾಪನೆಗೆ ಮುಂದೆ ಬಂದಿರುವ ಕಂಪನಿ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಹೀಗಾಗಿ ಬೇರೆ ಕಂಪನಿಗೆ ಅವಕಾಶ ನೀಡುವ ಬಗ್ಗೆ ಆಲೋಚನೆ ಮಾಡಿ. ವಿಳಂಬ ಮಾಡಿದರೆ ತ್ವರಿತವಾಗಿ ಉದ್ಯಮ ಸ್ಥಾಪನೆ ಮಾಡುವ ಆಸಕ್ತರಿಗೆ ಅವಕಾಶ ನೀಡಿ ಎಂದು ಹೇಳಿದರು.ಸಭೆಯಲ್ಲಿ ಭಾಗವಹಿಸಿದ್ದ ಹೊಸದುರ್ಗ ಕ್ಷೇತ್ರದ ಶಾಸಕ ಗೋವಿಂದಪ್ಪ ಅವರು, ನಾವು ಯಾವುದೇ ಕಂಪನಿಯನ್ನು ಶಿಫಾರಸ್ಸು ಮಾಡುವುದಿಲ್ಲ. ಇಲಾಖೆ ಯಾವುದೇ ಕಂಪನಿಗೆ ಅವಕಾಶ ಕೊಡಲಿ, ಕ್ಷೇತ್ರದಲ್ಲಿ ಜವಳಿ ಪಾರ್ಕ್ ಆಗಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಹೊಸದುರ್ಗ ತಾಲೂಕು ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಅತಿ ಹಿಂದುಳಿದ ತಾಲೂಕಾಗಿದ್ದು, 2011ರ ಜನಗಣತಿ ಪ್ರಕಾರ 30 ಸಾವಿರ ಯುವ ಪೀಳಿಗೆ ಇದೆ. 19 ಸಾವಿರ ಯುವಕರು ಬೆಂಗಳೂರು ಹಾಗೂ ಇತರ ಪ್ರದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. 11 ಸಾವಿರ ಯುವಕ, ಯುವತಿಯರು ನಿರುದ್ಯೋಗಿಗಳಿದ್ದಾರೆ. ಜವಳಿ ಪಾರ್ಕ್ ಸ್ಥಾಪನೆಯಿಂದ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ವಿವರಿಸಿದರು.
ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ತ್ವರಿತವಾಗಿ ಬಂಡವಾಳ ಹೂಡಿ, ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವವರಿಗೆ ಅವಕಾಶ ಕಲ್ಪಿಸಬೇಕು ಹಾಗೂ ಕ್ಷೇತ್ರದ ಶಾಸಕ ಗೋವಿಂದಪ್ಪ ಅವರಿಗೆ ಯೋಜನೆಯ ಪ್ರಗತಿಯ ಮಾಹಿತಿ ಹಂಚಿಕೊಳ್ಳುತ್ತಿರಬೇಕು ಎಂದು ಸಚಿವ ಶಿವಾನಂದ ಪಾಟೀಲ ಅವರು ಸೂಚನೆ ನೀಡಿದರು.