ನರೇಂದ್ರ ಮೋದಿ ಪ್ರಭಾವ ಕ್ಷಿಣೀಸುತ್ತಿದೆ. ಅಂತರಿಕ ವರದಿ ಮತ್ತು ಖಾಸಗಿ ಕಂಪನಿಗಳ ಸಮೀಕ್ಷೆ ಪ್ರಕಾರ ಮುಂದಿನ ದಿನಗಳಲ್ಲಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿ ಆಗಲಿದ್ದಾರೆ ಎಂದು ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ್ ಭವಿಷ್ಯ ನುಡಿದರು.
ಗುರುಮಠಕಲ್: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹವಾ ಇಲ್ಲ, ಅವರ ಪ್ರಭಾವ ದಿನಗಳದಂತೆ ಕ್ಷಿಣೀಸುತ್ತಿದೆ. ದೇಶದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಅಂತರಿಕ ವರದಿ ಮತ್ತು ಖಾಸಗಿ ಕಂಪನಿಗಳ ಸಮೀಕ್ಷೆ ಪ್ರಕಾರ ಮುಂದಿನ ದಿನಗಳಲ್ಲಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿ ಆಗಲಿದ್ದಾರೆ ಎಂದು ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ್ ಭವಿಷ್ಯ ನುಡಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸೋಮವಾರ ಉಪಾಧ್ಯಕ್ಷೆ ರೇಣುಕಾ ವೀರಪ್ಪ ಪಡಿಗೆ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಡಾ.ಮಲ್ಲಿಕಾರ್ಜುನ ಖರ್ಗೆ ಎಂದರೆ ಅಭಿವೃದ್ಧಿ, ಅಭಿವೃದ್ಧಿ ಎಂದರೆ ಖರ್ಗೆ ಎಂಬ ಅರ್ಥವಿದೆ. ದೇಶದ ಅಭಿವೃದ್ಧಿ ಅವರಿಂದಲೇ ಸಾಧ್ಯವಾಗುತ್ತದೆ ಎಂದರು.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಆಗುತ್ತಿದೆ. ಅವರಿಬ್ಬರೂ ನನ್ನ ಆಪ್ತರು. ನನ್ನನ್ನು ಗೆಲ್ಲಿಸಿದ್ದರೆ ಪ್ರಬಲ ಮಂತ್ರಿ ಆಗುತ್ತಿದ್ದೆ. 5 ಬಾರಿ ಶಾಸಕ, 6 ಬಾರಿ ಎಂಎಲ್‌ಸಿಯಾಗಿ ಹಲವು ಖಾತೆಗಳನ್ನು ನಿಭಾಯಿಸಿರುವ ಅನುಭವವಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ್ದರೆ, ಪ್ರಭಾವಿ ಮಂತ್ರಿಯಾಗಿ ಜನರ ಸೇವೆ ಮಾಡುತ್ತಿದ್ದೆ. ಎನ್ನುವ ಇಂಗಿತವನ್ನು ವ್ಯಕ್ತಪಡಿಸಿದರು.
ಮತದಾರರರೆ ನನಗೆ ಸರ್ವಸ್ವ. ಗುರುಮಠಕಲ್‌ನ್ನು ಅಮೇರಿಕಾ, ಸಿಂಗಾಪೂರ ತರಹ ಮಾಡುವ ಕನಸಿತ್ತು. ಸೇವೆಯೇ ನನ್ನ ಕೊನೆಯ ಆಸೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗಮದ ಅಧ್ಯಕ್ಷ ಸ್ಥಾನ ನೀಡಿ, ಸಂಪುಟ ಸ್ಥಾನಮಾನ ನೀಡಿದ್ದಾರೆ. 50 ವರ್ಷಗಳಿಂದ ಬಡವರ ಸೇವೆ ಮಾಡುತ್ತಿರುವೆ ಜೀವ ಮಾನದವರೆಗೆ ಸೇವೆ ಮಾಡುವೆ ಎಂದು ತಿಳಿಸಿದರು.
ತಮ್ಮ ಟಿಎಡಿಎ ಸಹ ದೇವಸ್ಥಾನ ಹಾಗೂ ಜನಗಳಿಗೆ ನೀಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಬೇಕು. ನನ್ನನ್ನು ಕಳೆದುಕೊಂಡು ಜನರು ದುಃಖದಲ್ಲಿದ್ದಾರೆ ಎಂದು ಹೇಳಿದರು.ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ ಮಾತನಾಡಿ, ಬಾಬುರಾವ್ ಚಿಂಚನಸೂರ್ ಅವರು ತಮ್ಮ ಅವಧಿಯಲ್ಲಿ 850 ಕೋಟಿ ರು.ಗಳ ಅನುದಾನ ತಂದಿದ್ದಾರೆ. ಗೆದ್ದಿದ್ದರೆ ಇನ್ನೂ ಅಭಿವೃದ್ಧಿ ಆಗುತ್ತಿತ್ತು. ಕ್ಷೇತ್ರದ ಅಭಿವೃದ್ಧಿಗೆ ಕಾಳಜಿ ಬೇಕು. ಎಂಪಿ ಅನುದಾನದಲ್ಲಿ 20 ಕೋಟಿ ರು.ಗಳ ಅನುದಾನ ಕ್ರಿಯಾಯೋಜನೆ ಸಿದ್ಧವಾಗುತ್ತಿದೆ. ಶೀಘ್ರವೇ ಸಂಸದರು ಕಾರ್ಯಕ್ರಮ ಆಯೋಜನೆಗೊಳ್ಳಲಿದೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಉಪಾಧ್ಯಕ್ಷೆ ರೇಣುಕಾ ಪಡಿಗೆ ಅವರನ್ನು ಸನ್ಮಾನಿಸಿದರು.ಪುರಸಭೆ ಅಧ್ಯಕ್ಷೆ ಜಯಶ್ರೀ ಆರ್. ಪಾಟೀಲ್, ಸದಸ್ಯರಾದ ಖಾಜಾ ಮೈನೊದ್ದೀನ್, ರವಿಂದ್ರರೆಡ್ಡಿ ಸೇರಿ, ಪಾಪಿರೆಡ್ಡಿ, ಬಾಬು ತಲಾರಿ, ಕೃಷ್ಣ ಮೇದಾ, ಆಶನ್ನ ಬುದ್ಧ, ನರ್ಮದಾ, ಪವಿತ್ರ ಮನ್ನೆ, ಪಂಚ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ ಪಲ್ಲಾ, ಪ್ರಮುಖರಾದ ಸಂಜೀವಕುಮಾರ್ ಚಂದಾಪೂರ್, ಆನಂದ ಬೋಯಿನಿ, ಭೀಮಾಶಂಕರ ಪಡಿಗೆ, ಫಯಾಜ್ ಅಹ್ಮದ್, ಚಾಂದ ಪಾಷಾ, ಅಶೋಕ ಸಂಜನೋಳ, ಶರಣಪ್ಪ ಕಲಾಲ್ ಗಾಜರಕೋಟ, ನರೇಶ ಮುದಿರಾಜ ಇತರರಿದ್ದರು.