ಕನ್ನಡಪ್ರಭ ವಾರ್ತೆ ಶಿವಮೊಗ್ಗ
2047ರಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಒಂದಾಗಬೇಕು ಎಂಬುದು ಮೋದಿಯ ವಿಕಸಿತ ಭಾರತ ಕಲ್ಪನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರದ ಎನ್.ಡಿ.ಎ. ನೇತೃತ್ವದ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದು 100 ದಿನಗಳಾದವು. ಕಾಕತಾಳೀಯ ಎಂಬಂತೆ ಇಂದು ಅವರ ಜನ್ಮದಿನವೂ ಹೌದು. ಪ್ರಧಾನಿಯವರು ವಿಕಸಿತ ಭಾರತಕ್ಕೆ ಸಂಕಲ್ಪ ತೊಟ್ಟಿದ್ದಾರೆ ಎಂದರು.
ಮಾತನಾಡುವುದೇ ಸಾಧನೆ ಆಗಬಾರದು ಸಾಧನೆ ಮಾತನಾಡಬೇಕು ಎಂದು ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆ, ಜಲಜೀವನ್ ಮಿಷನ್ ಭಾರತೀಯ ಕಾನೂನುಗಳ ಬದಲಾವಣೆ ಸೇರಿದಂತೆ ಮೋದಿ ಸರ್ಕಾರದ ಸಾಧನೆ ಹಲವಿವೆ ಎಂದು ತಿಳಿಸಿದರು.ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 17ನೇ ಕಂತನ್ನು ಅವರು ಬಿಡುಗಡೆ ಮಾಡಿದ್ದಾರೆ. ಸುಮಾರು 9.3 ಕೋಟಿ ರೈತರಿಗೆ ಸುಮಾರು 20 ಸಾವಿರ ಕೋಟಿ ರು. ಬಿಡುಗಡೆ ಮಾಡಿದ್ದಾರೆ. ಈಗಾಗಲೇ ವಿವಿಧ ಯೋಜನೆಗಳಡಿಯಲ್ಲಿ 12 ಕೋಟಿ ರೈತರಿಗೆ ನೆರವು ನೀಡಲಾಗಿದೆ. ರಸ್ತೆ ಅಭಿವೃದ್ಧಿಗಾಗಿ 50600 ಕೋಟಿ ರು. ಖರ್ಚುಮಾಡಲಾಗಿದೆ. ಬೆಂಗಳೂರಿನ ಮೆಟ್ರೋ ಮೂರನೇ ಹಂತದ ಯೋಜನೆಗೆ 8 ಹೊಸ ರೈಲು ಮಾರ್ಗಗಳನ್ನು ಮಂಜೂರು ಮಾಡಲಾಗಿದೆ. ಸುಮಾರು 2 ಕೋಟಿ ಗ್ರಾಮಗಳಿಗೆ ಸೌರಶಕ್ತಿ ನೀಡಲಾಗಿದೆ. 41 ಮಿಲಿಯನ್ ಯುವಕರಿಗೆ ಉದ್ಯೋಗ ನೀಡಲಾಗಿದ್ದು, ಇದಕ್ಕಾಗಿ 2 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಿಸಲಾಗಿದೆ ಎಂದರು.
ಆಯುಷ್ಮಾನ್ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. 70 ವರ್ಷದ ಮೇಲ್ಪಟ್ಟವರಿಗೂ ಈ ಯೋಜನೆ ವಿಸ್ತರಿಸ ಲಾಗಿದೆ. ಇದರಿಂದ ಸುಮಾರು 6 ಕೋಟಿ ಹಿರಿಯರಿಗೆ ಲಾಭವಾಗುತ್ತದೆ. 4.5 ಕೋಟಿ ಕುಟುಂಬಗಳಿಗೆ ಈ ಯೋಜನೆ ತಲುಪು ತ್ತಿದೆ. ಹಾಗೆಯೇ ಸ್ವಾತಂತ್ರ್ಯ ನಂತರ ಪ್ರಮುಖವಾಗಿ ಮೂರು ಕ್ರಿಮಿನಲ್ ಕಾಯ್ದೆಗಳನ್ನು ಬದಲಾಯಿಸಲಾಗಿದೆ. ಹೀಗೆ ಕೇವಲ 100 ದಿನಗಳಲ್ಲಿ ನರೇಂದ್ರ ಮೋದಿ ಸರ್ಕಾರ ಅಭಿವೃದ್ಧಿಯ ದಾಪುಗಾಲು ಹಾಕಿದೆ. ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯ ಗಳು. ದೇವರು ಅವರಿಗೆ ಹೆಚ್ಚಿನ ಆಯಸ್ಸನ್ನು ನೀಡಲಿ ಎಂದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಶಿವರಾಜ್, ಮಾಲತೇಶ್, ಕೆ.ವಿ.ಅಣ್ಣಪ್ಪ ಇದ್ದರು.