ಪ್ರಧಾನಿ ಮೋದಿಯವರಿಂದ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಮಂಜೂರು : ಸಂಸದ ಗೋವಿಂದ ಕಾರಜೋಳ

KannadaprabhaNewsNetwork |  
Published : Feb 25, 2025, 12:47 AM ISTUpdated : Feb 25, 2025, 01:18 PM IST
ಚಿತ್ರದುರ್ಗ ನಾಲ್ಕನೇ ಪುಟದ ಲೀಡ್ | Kannada Prabha

ಸಾರಾಂಶ

ಸಂಸದ ಗೋವಿಂದ ಕಾರಜೋಳ ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಲೇಸರ್ ಶಸ್ತ್ರಚಿಕಿತ್ಸಾ ಯಂತ್ರವನ್ನು ಲೋಕಾರ್ಪಣೆ ಮಾಡಿದರು.

ಚಿತ್ರದುರ್ಗ : ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿಯವರು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುನ್ನು ಮಂಜೂರು ಮಾಡಿರುವುದರಿಂದ ಬಡ ಕೂಲಿ ಕಾರ್ಮಿಕರ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲವಾಗಿದೆ ಎಂದು ಸಂಸದ ಗೋವಿಂದಕಾರಜೋಳ ಹೇಳಿದರು.

ಚಿತ್ರದುರ್ಗ ಧವಳಗಿರಿ ಬಡಾವಣೆಯ ಬಸವ ಭವನದಲ್ಲಿರುವ ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಧ್ಯ ಕರ್ನಾಟಕದಲ್ಲಿಯೇ ಪ್ರಪ್ರಥಮವಾದ ಕಿವಿ, ಮೂಗು, ಗಂಟಲು, ಶಸ್ತ್ರ ಚಿಕಿತ್ಸೆಯ ಅತ್ಯಾಧುನಿಕ ತಂತ್ರಜ್ಞಾನದ ನಿಖರಾತಿ ನಿಖರ ಲೇಸರ್ ಶಸ್ತ್ರಚಿಕಿತ್ಸಾ ಯಂತ್ರವನ್ನು ಸೋಮವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪ್ರತಿ ವರ್ಷ ಒಂದುವರೆ ಲಕ್ಷ ವೈದ್ಯರು ಹೊರಗಡೆ ಬರುತ್ತಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜು ಆಗುತ್ತಿರುವುದರಿಂದ ಬಡವರ ಮಕ್ಕಳು ಎಂಬಿಬಿಎಸ್ ಶಿಕ್ಷಣ ಪಡೆಯುವಂತಾಗಿದೆ ಎಂದರು.

ಆಯುಷ್ಮಾನ್ ಭಾರತ್ ಯೋಜನೆಯಡಿ ಈ ಆಸ್ಪತ್ರೆಯನ್ನು ನೊಂದಾಯಿಸಿಕೊಂಡರೆ ಬಡವರಿಗೆ ಇನ್ನು ಅನುಕೂಲವಾಗುತ್ತದೆ. ಭಾರತದಲ್ಲಿ ವೈದ್ಯರು, ಇಂಜಿನಿಯರ್‌ಗಳಿಗೆ ಕೊರತೆಯಿಲ್ಲ. ಆದರೆ ಇಲ್ಲಿ ಸೇವೆ ನೀಡಲು ಸಿದ್ದರಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ದಕ್ಷಿಣ ಭಾರತದಲ್ಲಿಯೇ ಇಲ್ಲದಂತಹ ಅತ್ಯಾಧುನಿಕ ತಂತ್ರಜ್ಞಾನದ ನಿಖರಾತಿ ನಿಖರತೆಯುಳ್ಳ ಲೇಸರ್ ಶಸ್ತ್ರಚಿಕಿತ್ಸಾ ಯಂತ್ರವನ್ನು ಡಾ.ಎನ್.ಬಿ.ಪ್ರಹ್ಲಾದ್ ಇಲ್ಲಿ ಅಳವಡಿಸಿರುವುದು ದೊಡ್ಡ ಸಾಧನೆ. ಬಡವರಿಗೆ ಈ ಸೇವೆ ಲಭಿಸಲಿ. ರಾಷ್ಟ್ರ ಮತ್ತು ಅಂತರಾಷ್ಟ್ರದ ಮಟ್ಟದಲ್ಲಿ ಹೆಸರು ಗಳಿಸಿರುವ ಡಾ.ಎನ್.ಬಿ.ಪ್ರಹ್ಲಾದ್ ಚಿತ್ರದುರ್ಗದಲ್ಲಿ ಇಂತಹ ಸೌಲಭ್ಯ ನೀಡಲು ಮನಸ್ಸು ಮಾಡಿರುವುದು ಈ ಭಾಗದ ಜನರ ಪುಣ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗದಲ್ಲಿ ಡಾ.ಎನ್.ಬಿ.ಪ್ರಹ್ಲಾದ್ ಇಂತಹ ಸೇವೆಗೆ ಮುಂದಾಗಿರುವುದು ನಿಜಕ್ಕೂ ಮೆಚ್ಚುವಂತದ್ದು.

ಕಿವಿ, ಮೂಗು, ಗಂಟಲು ಸಮಸ್ಯೆಯಿರುವವರು ದೊಡ್ಡ ದೊಡ್ಡ ನಗರಗಳಿಗೆ ಹೋಗಿ ಚಿಕಿತ್ಸೆ ಪಡೆಯುವುದು ಕಷ್ಟ. ಹಾಗಾಗಿ ಇಲ್ಲಿಯೇ ಇಂತಹ ಸಲಕರಣೆ ಅಳವಡಿಸಿರುವುದು ಶ್ಲಾಘನೀಯ. ಸಾಮಾಜಿಕ ಸಬಲೀಕರಣಕ್ಕೆ ಆಸ್ಪತ್ರೆಯನ್ನು ನೊಂದಾಯಿಸಿಕೊಂಡರೆ ಸರ್ಜರಿಗೆ ಪ್ರಧಾನಿ ಮೋದಿ 5 ಲಕ್ಷ ರು. ನೀಡುತ್ತಾರೆಂದು ಸಲಹೆ ಕೊಟ್ಟರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಬಡ ರೋಗಿಗಳಿಗೂ ಸುಲಭವಾಗಿ ಚಿಕಿತ್ಸೆ ಸಿಗಲಿ ಎನ್ನುವ ಸೇವಾ ಮನೋಭಾವದಿಂದ ಡಾ.ಎನ್.ಬಿ.ಪ್ರಹ್ಲಾದ್ ಚಿತ್ರದುರ್ಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಲೇಸರ್ ಶಸ್ತ್ರಚಿಕಿತ್ಸಾ ಯಂತ್ರವನ್ನು ಅಳವಡಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಗುಣಗಾನ ಮಾಡಿದರು.

ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡಾ.ಎನ್.ಬಿ.ಪ್ರಹ್ಲಾದ್ ಮಾತನಾಡಿ ಕೇವಲ ಹಣ ಗಳಿಸುವ ಉದ್ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನದ ಲೇಸರ್ ಶಸ್ತ್ರಚಿಕಿತ್ಸಾ ಯಂತ್ರವನ್ನು ಲೋಕಾರ್ಪಣೆಗೊಳಿಸಿಲ್ಲ. ಪ್ರತಿಯೊಬ್ಬರಿಗೂ ಇದರ ಪ್ರಯೋಜನ ತಲುಪುವಂತೆ ನೋಡಿಕೊಳ್ಳುವುದು ನನ್ನ ಉದ್ದೇಶ. ಕೆಲವು ದಿನಗಳು ಅಮೇರಿಕಾದಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಿದೆ. ಆದರೆ ಹುಟ್ಟಿದ ಊರಿನ ಜನರಿಗೆ ಚಿಕಿತ್ಸೆ ನೀಡಬೇಕೆಂಬ ಮಹದಾಸೆಯಿಂದ ವಾಪಸ್ ಹಿಂದಿರುಗಿದೆ. 120 ಕ್ಕೂ ಹೆಚ್ಚು ತರಬೇತಿಗಳನ್ನು ವೈದ್ಯರುಗಳಿಗೆ ಕೊಟ್ಟಿದ್ದೇನೆ. ಇದರಲ್ಲಿ 36 ವಿದೇಶಿ ವೈದ್ಯರುಗಳು ತರಬೇತಿ ಪಡೆದಿದ್ದಾರೆ. 54 ಕಾರ್ಯಾಗಾರಗಳನ್ನು ನಡೆಸಿದ್ದೇನೆ. ರೋಟರಿ ಸಹಯೋಗದೊಂದಿಗೆ 48 ಸಾವಿರಕ್ಕೂ ಹೆಚ್ಚು ಜನಕ್ಕೆ ಉಚಿತ ಚಿಕಿತ್ಸೆ ಕೊಡಲಾಗಿದೆ ಎಂದು ತಿಳಿಸಿದರು.

ಆಸ್ಪತ್ರೆಯ ಸಂಸ್ಥಾಪಕರಾದ ಕಮಲಮ್ಮ ಬಸವಂತಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಸುಮಿತ ಬಿ.ಎನ್. ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಐಎಂಎ ಅಧ್ಯಕ್ಷ ಡಾ.ಎಲ್.ಪಾಲಾಕ್ಷಯ್ಯ, ಡಾ.ಜಗದೀಶ್ ಕೆ. ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಎಂ.ವಿ.ದೇವಾನಂದನಾಯ್ಕ, ದೇವಾಲಯ ಸಂವರ್ಧನಾ ಸಮಿತಿ ಅಧ್ಯಕ್ಷ ಮಂಜುನಾಥ ಜಡೆಯಪ್ಪ ಮಠ, ಎಸ್.ಆರ್.ಗಿರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ವೀರಶೈವ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್, ನಗರಸಭೆ ಸದಸ್ಯ ಸುರೇಶ್, ಗ್ಯಾರೆಂಟಿ ಅನುಷ್ಟಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಇದ್ದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್