ಅಧ್ಯಯನವಾಗದೆ ಉಳಿದಿವೆ ಮೋಡಿ ಲಿಪಿ

KannadaprabhaNewsNetwork |  
Published : Oct 26, 2025, 02:00 AM IST
25ಡಿಡಬ್ಲೂಡಿ1ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಕಿತ್ತೂರು ಚೆನ್ನಮ್ಮ ಹಾಗೂ ಶಾಂತಾದೇವಿ ಮಾಳವಾಡ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಮರಾಠಾ ಪೇಶ್ವೇಗಳ ಆಡಳಿತಕ್ಕೆ ಒಳಪಟ್ಟ ಉತ್ತರ ಕರ್ನಾಟಕದ ಕಿತ್ತೂರು, ಸವಣೂರು, ರಾಮದುರ್ಗ ಹಾಗೂ ಜಮಖಂಡಿ ಸಂಸ್ಥಾನಿಕರ ಆಡಳಿತ ವ್ಯವಹಾರ, ಲೆಕ್ಕಪತ್ರ ಮತ್ತು ರಹಸ್ಯ ಮಾಹಿತಿಗಳು ಮೋಡಿ ಲಿಪಿಯಲ್ಲಿವೆ.

ಧಾರವಾಡ:

ಮೋಡಿ ಲಿಪಿಗೆ ಪೂರ್ಣ ವಿರಾಮಗಳಿಲ್ಲ. ಈ ಲಿಪಿಯಲ್ಲಿ ಮರಾಠಿ, ಪರ್ಶಿಯನ್ ಹಾಗೂ ಅರೇಬಿಕ್ ಶಬ್ದಗಳನ್ನು ಕಾಣಬಹುದು. ಈ ಮೋಡಿ ಲಿಪಿ ಓದುವುದು ಕ್ಲಿಷ್ಟ. ಆದರೆ, ಓದಲು ಅದಕ್ಕೆ ತಾಳ್ಮೆ ಮತ್ತು ವ್ಯವಧಾನ ಬೇಕಾಗುತ್ತದೆ ಎಂದು ಮೋಡಿ ಲಿಪಿ ತಜ್ಞ ಡಾ. ಎಂ.ವೈ. ಸಾವಂತ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು ಶಾಂತಾದೇವಿ ಮಾಳವಾಡ ದತ್ತಿ ಅಂಗವಾಗಿ ಆಯೋಜಿಸಿದ್ದ ಕಿತ್ತೂರ ಚೆನ್ನಮ್ಮ ವಿಜಯೋತ್ಸವ ದಿನಾಚರಣೆಯಲ್ಲಿ ‘ಮೋಡಿ ದಾಖಲೆಗಳಲ್ಲಿ ಕಿತ್ತೂರಿನ ಇತಿಹಾಸ’ ಕುರಿತು ಉಪನ್ಯಾಸ ನೀಡಿದರು.

ಮರಾಠಾ ಪೇಶ್ವೇಗಳ ಆಡಳಿತಕ್ಕೆ ಒಳಪಟ್ಟ ಉತ್ತರ ಕರ್ನಾಟಕದ ಕಿತ್ತೂರು, ಸವಣೂರು, ರಾಮದುರ್ಗ ಹಾಗೂ ಜಮಖಂಡಿ ಸಂಸ್ಥಾನಿಕರ ಆಡಳಿತ ವ್ಯವಹಾರ, ಲೆಕ್ಕಪತ್ರ ಮತ್ತು ರಹಸ್ಯ ಮಾಹಿತಿಗಳು ಮೋಡಿ ಲಿಪಿಯಲ್ಲಿವೆ. ಕಿತ್ತೂರು ಸಂಸ್ಥಾನ ಒಂದರಲ್ಲಿಯೇ ಸುಮಾರು ನೂರು ರುಮಾಲುಗಳ, ಒಂದು ರುಮಾಲಿನಲ್ಲಿ ಸಾವಿರಾರು ಮೋಡಿ ದಾಖಲೆ ಪತ್ರಗಳು ಇರುವುದು ಕಂಡುಬಂದಿದೆ. ಈ ಎಲ್ಲ ದಾಖಲೆಗಳು ಪುಣೆಯ ಪತ್ರಾಗಾರ ಇಲಾಖೆಯಲ್ಲಿ ಹಾಗೂ ಡೆಕ್ಕನ್ ಕಾಲೇಜಿನ ಇತಿಹಾಸ ವಸ್ತು ಪ್ರದರ್ಶನದಲ್ಲಿ ಸಂರಕ್ಷಿಸಿ ಇಡಲಾಗಿದೆ. ಈ ಕೆಲವು ದಾಖಲೆಗಳನ್ನು ಇನ್ನೂ ಯಾರೂ ಮುಟ್ಟದ ಹಾಗೂ ಅಧ್ಯಯನವಾಗದೆ ಉಳಿದಿವೆ ಎಂದರು. ಕಿತ್ತೂರ ಸಂಸ್ಥಾನದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಆಡಳಿತ ವ್ಯವಸ್ಥೆಯ ವೈಜ್ಞಾನಿಕ ಅಧ್ಯಯನದ ಅವಶ್ಯಕತೆ ಇದೆ. ಮೋಡಿ ಲಿಪಿ ಓದುವುದಿರಲಿ, ಅದನ್ನು ನೋಡಿದವರೇ ಬಹು ವಿರಳ. ಈ ಲಿಪಿಯನ್ನು ಕರ್ನಾಟಕದಲ್ಲಿ ಕೆಲವೇ ಕೆಲವು ತಜ್ಞರು ಅಧ್ಯಯನ ಮಾಡಿದ್ದಾರೆ. ಮುಂದಿನ ಪೀಳಿಗೆಗೆ ಮೋಡಿ ಲಿಪಿಯ ಜ್ಞಾನ ಉಂಟಾಗಲೆಂದು ಧಾರವಾಡದಲ್ಲಿ ಒಂದು ಅಧ್ಯಯನ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ. ಜತೆಗೆ ಮೋಡಿ ಲಿಪಿಯನ್ನು ಇತ್ತೀಚೆಗೆ ಡಿಜಿಟಿಲೀಕರಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಸಾವಂತ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಸಂಜೀವ ಕುಲಕರ್ಣಿ, ಮೋಡಿ ಲಿಪಿ ಮಧ್ಯಕಾಲದ ಒಂದು ಜ್ಞಾನದ ನಿಧಿ. ನಮ್ಮ ಇತಿಹಾಸ ಹಾಗೂ ಪರಂಪರೆಯನ್ನು ಅರ್ಥ ಮಾಡಿಕೊಳ್ಳಲು ಮೋಡಿ ಲಿಪಿ ಅಧ್ಯಯನ ಅವಶ್ಯ. ಯುವಕರು ಇತಿಹಾಸ ಅರಿಯದೆ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಗುರು ಹಿರೇಮಠ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಪ್ರೊ. ಧನವಂತ ಹಾಜವಗೋಳ ವಂದಿಸಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ