ದೆಹಲಿ ಸ್ಫೋಟಕ್ಕೆ ಮೋದಿ, ಶಾ ಹೊಣೆ: ಕಾಂಗ್ರೆಸ್‌

KannadaprabhaNewsNetwork |  
Published : Nov 12, 2025, 02:00 AM IST
ಪ್ರಿಯಾಂಕ್‌ ಖರ್ಗೆ | Kannada Prabha

ಸಾರಾಂಶ

ದೆಹಲಿ ಕೆಂಪುಕೋಟೆ ಬಳಿ ಬಾಂಬ್‌ ಸ್ಫೋಟಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಸಚಿವರು ಮತ್ತು ಶಾಸಕರು, ದಾಳಿ ತಡೆಯಲು ವಿಫಲರಾದ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೆಹಲಿ ಕೆಂಪುಕೋಟೆ ಬಳಿ ಬಾಂಬ್‌ ಸ್ಫೋಟಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಸಚಿವರು ಮತ್ತು ಶಾಸಕರು, ದಾಳಿ ತಡೆಯಲು ವಿಫಲರಾದ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಅಮಿತ್‌ ಶಾ ಅವರು ದೇಶದ ಗೃಹ ಸಚಿವರಾಗಿ ಚುನಾವಣಾ ವೇದಿಕೆಯಲ್ಲಿ ಭಾರತಕ್ಕೆ ಬಾಂಗ್ಲಾದೇಶದವರು ಬರುತ್ತಿದ್ದಾರೆ ಎಂದು ಭಾಷಣ ಮಾಡುತ್ತಾರೆ. ಇಂತಹ ಅಸಮರ್ಥ ಗೃಹ ಸಚಿವ ಯಾರೂ ಇಲ್ಲ. ಉಗ್ರರ ದಾಳಿ ನಡೆದಾಗ ವಿರೋಧ ಪಕ್ಷದವರ ಬಗ್ಗೆ ಮಾತನಾಡುತ್ತಾರೆ. ಗೃಹ ಸಚಿವರಾಗಿ ಅವರಿಗೆ ಹೊಣೆಗಾರಿಕೆ ಇಲ್ಲವೇ? ಇವರ ಅಸಮರ್ಥತೆಯಿಂದ ಇನ್ನೂ ಎಷ್ಟು ಜನ ಪ್ರಾಣ ಕಳೆದುಕೊಳ್ಳಬೇಕು ಎಂದು ಹೇಳಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಉಗ್ರ ದಾಳಿಯಂಥ ಸಂದರ್ಭದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಇರಬೇಕು. ಆದರೆ, ಪುಲ್ವಾಮಾ, ಪಹಲ್ಗಾಂ ನಂತರ ದೆಹಲಿಯಲ್ಲಿ ಉಗ್ರರ ದಾಳಿ ನಡೆದಿದೆ. ಇದರಲ್ಲಿ ಯಾರದ್ದೇ ನ್ಯೂನತೆ ಇದ್ದರೂ ಒಪ್ಪಿಕೊಳ್ಳಬೇಕು. ನೇರವಾಗಿ ಪ್ರಧಾನಿ ಮೋದಿ ಅವರು ಘಟನೆ ಜವಾಬ್ದಾರಿ ಹೊರಬೇಕು. ಕೇಂದ್ರದ ಭದ್ರತಾ ವೈಫಲ್ಯ ಖಂಡನೀಯ ಎಂದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ವಾಗ್ದಾಳಿ ನಡೆಸಿದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ಅಮಿತ್‌ ಶಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದೇವೆ ಎಂದು ಪದೇ ಪದೆ ಹೇಳುತ್ತಾರೆ. ಆದರೂ, ಉಗ್ರರ ದಾಳಿ ತಡೆಯಲಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಜನರಿಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ವಸತಿ ಸಚಿವ ಜಮೀರ್‌ ಅಹಮದ್‌ ಮಾತನಾಡಿ, ರಾಷ್ಟ್ರ ರಾಜಧಾನಿಯಲ್ಲಿ ಉಗ್ರರ ದಾಳಿ ಖಂಡನೀಯ. ಕೇಂದ್ರ ಸರ್ಕಾರ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಈ ರೀತಿಯ ದುಷ್ಕೃತ್ಯ ನಡೆಯಬಾರದು. ಬಹಳ ನೋವಾಗಿದೆ. ಇದು ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯಿಸಿ, ಕೆಂಪು ಕೋಟೆ ದೆಹಲಿಯ ಕೇಂದ್ರಬಿಂದು. ಜನಸಂದಣಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ದೆಹಲಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಜೆಪಿಯದ್ದೇ ಆಗಿದೆ. ಪಹಲ್ಗಾಂ ಘಟನೆಯಿಂದ ಎಚ್ಚೆತ್ತುಕೊಂಡಿದ್ದರೆ ದೆಹಲಿ ದಾಳಿ ತಪ್ಪಿಸಬಹುದಿತ್ತು. ಈ ರೀತಿಯ ಘಟನೆ ನಿರಂತರವಾಗಿ ಆಗುತ್ತಿದೆ. ಇದರ ಬಗ್ಗೆ ಸರ್ಕಾರಗಳೇ ಹೊಣೆ ಹೊರಬೇಕು. ಮುಂದೆ ಈ ರೀತಿ ಘಟನೆ ಆಗದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ