ಮೋದಿ ಭೇಟಿ: ಜಿಲ್ಲಾದ್ಯಂತ ಸಂಚಲನ

KannadaprabhaNewsNetwork |  
Published : Apr 28, 2024, 01:19 AM IST
ಮೋದಿ | Kannada Prabha

ಸಾರಾಂಶ

ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಸೇರದ ಲಕ್ಷಾಂತರ ಜನರು ಜಿಲ್ಲೆಯಲ್ಲಿದ್ದಾರೆ. ನರೇಂದ್ರ ಮೋದಿ ಆಗಮನದಿಂದ ಅಂತಹ ಮತಗಳು ಬಿಜೆಪಿಯತ್ತ ತಿರುಗಲಿವೆ ಎನ್ನುವುದು ಬಿಜೆಪಿಗರ ಅಭಿಪ್ರಾಯವಾಗಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಪ್ರಧಾನಿ ನರೇಂದ್ರ ಮೋದಿ ಶಿರಸಿಗೆ ಇಂದು ಆಗಮಿಸುತ್ತಿರುವುದು ಜಿಲ್ಲಾದ್ಯಂತ ಸಂಚಲನ ಮೂಡಿಸಿದೆ.

ಮೋದಿ ಆಗಮನವನ್ನು ಬಿಜೆಪಿಗರು ಸಂಭ್ರಮಿಸುತ್ತಿದ್ದರೆ, ಮೋದಿ ಭೇಟಿ ಚುನಾವಣೆ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವುದನ್ನು ಕಾಂಗ್ರೆಸ್ಸಿಗರು ಲೆಕ್ಕಹಾಕುತ್ತಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ಈ ಎರಡೂ ಪಕ್ಷಗಳಿಗೂ ಅದರದ್ದೇ ಆದ ವೋಟ್ ಬ್ಯಾಂಕ್ ಇದೆ. ಯಾರು ಬಂದರೂ ಈ ವೋಟ ಬ್ಯಾಂಕ್ ಬದಲಾವಣೆ ಆಗಲಾರದು. ಆದರೆ, ಈ ಎರಡೂ ಪಕ್ಷಕ್ಕೆ ಸೇರದ ಲಕ್ಷಾಂತರ ಜನರು ಇದ್ದಾರೆ. ನರೇಂದ್ರ ಮೋದಿ ಆಗಮನದಿಂದ ಅಂತಹ ಮತಗಳು ಬಿಜೆಪಿಯತ್ತ ತಿರುಗಲಿವೆ ಎನ್ನುವುದು ಬಿಜೆಪಿಗರ ಅಭಿಪ್ರಾಯವಾಗಿದೆ.

ನರೇಂದ್ರ ಮೋದಿ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಕೇಂದ್ರದಲ್ಲಿ ಸುಭದ್ರ ಸರ್ಕಾರ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ಅವರ ವರ್ಚಸ್ಸು ಇನ್ನಷ್ಟು ಹೆಚ್ಚಿದೆ. ಜಾಗತಿಕ ಮಟ್ಟದಲ್ಲಿ ಭಾರತವನ್ನು ಬಲಾಢ್ಯಶಕ್ತಿಯಾಗಿ ರೂಪಿಸಿದ್ದಾರೆ. ಇದರಿಂದ ನರೇಂದ್ರ ಮೋದಿ ಅವರ ಮಾತಿಗೆ ಜಿಲ್ಲೆಯ ಜನತೆ ಬೆಲೆ ಕೊಟ್ಟೇ ಕೊಡುತ್ತಾರೆ ಎನ್ನುವುದು ಬಿಜೆಪಿ ಮುಖಂಡರ ವಾದವಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಮೋದಿ ಅಂಕೋಲಾಕ್ಕೆ ಬಂದು ಚುನಾವಣಾ ಪ್ರಚಾರ ನಡೆಸಿದ್ದರು. ಆದರೆ, ಆ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಸೋಲನ್ನು ಅನುಭವಿಸಬೇಕಾಯಿತು. ಹೀಗಾಗಿ ಮೋದಿ ಭೇಟಿಯಿಂದ ಚುನಾವಣೆ ಮೇಲೆ ಯಾವುದೆ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ನ ಕೆಲವರು ಅಭಿಪ್ರಾಯಪಡುತ್ತಿದ್ದಾರೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಬಂದರೂ ಬಿಜೆಪಿಯ ಮುಖಂಡರೆ ಕಾಲೆಳೆದಿದ್ದರಿಂದ ಬಿಜೆಪಿ ನಾಲ್ಕು ಕ್ಷೇತ್ರವನ್ನು ಕಳೆದುಕೊಳ್ಳಬೇಕಾಯಿತು ಎಂದು ಸೋತ ಅಭ್ಯರ್ಥಿಗಳು ಬಿಡಿ, ಗೆದ್ದ ಬಿಜೆಪಿ ಶಾಸಕರೂ ಅಲವತ್ತುಕೊಳ್ಳುತ್ತಿದ್ದಾರೆ.

ವಿಧಾನಸಭೆ ಚುನಾವಣೆಯೇ ಬೇರೆ. ಲೋಕಸಭೆ ಚುನಾವಣೆಯೇ ಬೇರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸದೆ ಇರಲು ಯಾವುದೇ ಕಾರಣಗಳಿಲ್ಲ ಎನ್ನುವ ವಾದವನ್ನು ಬಿಜೆಪಿ ಮುಂದಿಡುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಅಸ್ತ್ರವನ್ನು ಪ್ರಯೋಗಿಸಿದರೆ, ಬಿಜೆಪಿ ಮೋದಿ ಅಸ್ತ್ರವನ್ನು ಪ್ರಯೋಗಿಸುತ್ತಿದೆ. ಈಗ ಸ್ವತಃ ನರೇಂದ್ರ ಮೋದಿ ಅವರೇ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ನಡೆಸುತ್ತಿರುವುದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಏನಿದ್ದರೂ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರನ್ನೇ ನೆಚ್ಚಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲೆಗೆ ಆಗಮಿಸಿ ಪ್ರಚಾರ ನಡೆಸಲಿದ್ದಾರೆ. ಅದು ಕಾಂಗ್ರೆಸ್ ಗೆ ವರದಾನವಾಗಲಿದೆ ಎನ್ನುವುದು ಕಾಂಗ್ರೆಸ್ ಮುಖಂಡರ ವಾದ.

ಶಿರಸಿ ನರೇಂದ್ರ ಮೋದಿ ಪ್ರಚಾರ ಸಭೆಗೆ ಸಂಪೂರ್ಣ ಸಜ್ಜಾಗಿದೆ. 80 ಸಾವಿರದಷ್ಟು ಜನತೆ ಸೇರುವ ನಿರೀಕ್ಷೆ ಇದೆ. ಭಾನುವಾರ ಜಿಲ್ಲೆಯಲ್ಲಿ ಮೋದಿ ಮೇನಿಯಾ ಉಂಟಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಳಸಾ-ಬಂಡೂರಿ: ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಲಿ: ಸಿ.ಸಿ. ಪಾಟೀಲ
ಉತ್ತಮ ಪ್ರತಿಭೆ ಗುರುತಿಸಲು ಕಲಾ ಪ್ರತಿಭೋತ್ಸವ ಕಾರ್ಯಕ್ರಮ ಸಹಕಾರಿ