ಮೋದೀಜಿ, ನೀವು ಚಿತ್ರದುರ್ಗದಲ್ಲಿ ನಿಂತು ಕೊಟ್ಟ ಮಾತು ಉಳಿಸಿಕೊಳ್ಳಿ: ರೈತರ ಆಕ್ರೋಶ

KannadaprabhaNewsNetwork |  
Published : Feb 06, 2024, 01:34 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಕೋಟೆನಾಡು ಚಿತ್ರದುರ್ಗದಲ್ಲಿ ರೈತ ಸಂಘದ ನೇತೃತ್ವದಲ್ಲಿ ಸಂಘಟಿತರಾಗಿ ಜಿಲ್ಲೆಯ ವಿವಿಧ ಭಾಗಗಳಿಂದಆಗಮಿಸಿದ್ದ ಐದುನೂರಕ್ಕೂ ಹೆಚ್ಚು ಮಂದಿ ಐತಿಹಾಸಿಕ ನೆಲದಲ್ಲಿ ಘರ್ಜಿಸಿದರು. ಶಾಲುಗಳನ್ನು ಗಾಳಿಯಲ್ಲಿ ತಿರುಗಿಸಿ ಒಗ್ಗಟ್ಟು ಪ್ರದರ್ಶಿಸಿದರು. ಇದೇ ವೇಳೆ ವಾಕ್ಯ ಪರಿಪಾಲನೆ ಮಾಡುವಂತೆ ಪ್ರಧಾನಿ ಮೋದಿಗೆ ಸಲಹೆ ಮಾಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ, ಚಿತ್ರದುರ್ಗದ ನೆಲದಲ್ಲಿ ನಿಂತು ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ 5300 ಕೋಟಿ ರು. ಅನುದಾನ ಬಿಡುಗಡೆ ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳಿ. ವಿಶ್ವ ಗುರುವಾಗುವುದಕ್ಕಿಂತ ಮೊದಲು ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬ ಗೋವಿನ ಹಾಡು ನೆನಪಿಸಿಕೊಳ್ಳಿ.

ಕೋಟೆ ನಾಡು ಚಿತ್ರದುರ್ಗದಲ್ಲಿ ಸೋಮವಾರ ಅನ್ನದಾತರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಕ್ಕೊರಲಿನಿಂದ ಆಗ್ರಹಪಡಿಸಿದ ಬಗೆಯಿದು. ಜಿಲ್ಲೆಯ ವಿವಿಧ ಭಾಗಗಳಿಂದ ರೈತ ಸಂಘದ ನೇತೃತ್ವದಲ್ಲಿ ಸಂಘಟಿತರಾಗಿ ಆಗಮಿಸಿದ್ದ ಐದುನೂರಕ್ಕೂ ಹೆಚ್ಚು ಮಂದಿ ಐತಿಹಾಸಿಕ ನೆಲದಲ್ಲಿ ಘರ್ಜಿಸಿದರು. ಶಾಲುಗಳನ್ನು ಗಾಳಿಯಲ್ಲಿ ತಿರುಗಿಸಿ ಒಗ್ಗಟ್ಟು ಪ್ರದರ್ಶಿಸಿದರು. ವಾಕ್ಯ ಪರಿಪಾಲನೆ ಮಾಡುವಂತೆ ಪ್ರಧಾನಿಗೆ ಸಲಹೆ ಮಾಡಿದರು.ಭದ್ರಾ ಮೇಲ್ದಂಡೆ ಶೀಘ್ರ ಕಾರ್ಯಾನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ತಾಲೂಕುಗಳ ಬಂದ್ ಮಾಡಿ ಸರ್ಕಾರದ ಗಮನ ಸೆಳೆಯುತ್ತಿದ್ದರೆ, ಇತ್ತ ರೈತ ಸಂಘ ಕೇಂದ್ರ ಸಚಿವ ಹಾಗೂ ಸಂಸದ ಎ.ನಾರಾಯಣಸ್ವಾಮಿ ಅವರ ಕಚೇರಿ ಮುಂಭಾಗ ಅನಿರ್ಧಿಷ್ಠಾವಧಿ ಧರಣಿ ಆರಂಭಿಸಿ ಅನುದಾನ ಬಿಡುಗಡೆಗೆ ಆಗ್ರಹಿಸಿದೆ. ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಉರಿ ಬಿಸಿಲನ್ನೂ ಲೆಕ್ಕಿಸದೆ ಮೆರವಣಿಗೆಯಲ್ಲಿ ಬಂದ ರೈತರು ಸಂಗೊಳ್ಳಿ ರಾಯಣ್ಣ, ಗಾಂಧಿ, ಎಸ್‌ಬಿಐ, ಒನಕೆ ಓಬವ್ವ, ಮದಕರಿನಾಯಕ ವೃತ್ತದ ಮಾರ್ಗವಾಗಿ ಸಂಚರಿಸಿ ಸಂಸದರ ಕಚೇರಿ ತಲುಪಿದರು. ಮಾರ್ಗಮಧ್ಯೆ ಪ್ರವಾಸಿ ಮಂದಿರದ ಬಳಿ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ , ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮೆರವಣಿಗೆಗೆ ಸೇರ್ಪಡೆಯಾದರು.

ಇದಕ್ಕೂ ಮುನ್ನ ಮಾತನಾಡಿದ ರೈತ ಸಂಘದ ರಾಜ್ಯ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಈ ಯೋಜನೆ ಅನುಷ್ಠಾನಕ್ಕೆ 4 ದಶಕಗಳಿಂದ ಹೋರಾಟ ಮುಂದುವರೆದಿದ್ದರೂ ಪ್ರಯೋಜನವಾಗಿಲ್ಲ. ಕಾಮಗಾರಿಗೆ ಅನುದಾನ ಬಿಡುಗಡೆ ಮಾಡದೆ ಸರ್ಕಾರಗಳು ಸತಾಯಿಸುತ್ತಿವೆ. ರಾಜಕಾರಣಿಗಳು ಮೂಗಿಗೆ ತುಪ್ಪ ಸವರುತ್ತ ಗೆದ್ದು ಹೋಗಿದ್ದಾರೆಯೇ ಹೊರತು, ರೈತರಿಗಾಗಿ ಸಮಗ್ರ ನೀರಾವರಿ ತರಲು ಪ್ರಯತ್ನಿಸುತ್ತಿಲ್ಲ ಎಂದು ದೂರಿದರು. ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಅನುದಾನದಲ್ಲಿ ಮೊದಲ ಕಂತಾಗಿ ಸಾವಿರ ಕೋಟಿ ರುಪಾಯಿ ಬಿಡುಗಡೆ ಮಾಡಬೇಕು. ಅಲ್ಲಿಯ ತನಕ ಸಂಸದರ ಕಚೇರಿ ಬಿಟ್ಟು ಕದಲವು ವಿದಿಲ್ಲವೆಂದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟ ಸಿದ್ಧವೀರಪ್ಪ ಮಾತನಾಡಿ, ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ನೀರಾವರಿಯ ಕನಸು ನನಸಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. 4 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಾಗ್ದಾನ 15 ವರ್ಷ ಕಳೆದರೂ ಆಗಿಲ್ಲ. ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತುಂಗಾದಿಂದ ಭದ್ರಾಕ್ಕೆ ನೀರು ಹರಿಸುವ ಕಾಮಗಾರಿಗೆ ವೇಗ ನೀಡಬೇಕು. ಚಿತ್ರದುರ್ಗದ ಏಕೈಕ ಅಕ್ಷಯ ಪಾತ್ರೆ ವಾಣಿವಿಲಾಸ ಸಾಗರಕ್ಕೆ 5 ಟಿಎಂಸಿ ನೀರು ಖಾತ್ರಿ ಪಡಿಸಬೇಕು. ಜಿಲ್ಲೆಯ ಎಲ್ಲ ಕೆರೆಗಳಿಗೆ ಸಾಸಿವೆಹಳ್ಳಿ ಏತ ನೀರಾವರಿ, ಎತ್ತಿನಹೊಳೆ, ಹೇಮಾವತಿ ನದಿ ನೀರನ್ನು ಬಳಸಿ ಸಮಗ್ರ ನೀರಾವರಿ ಯೋಜನೆ ಕೈಗೊಳ್ಳಬೇಕು. 5 ತಿಂಗಳೊಳಗೆ ಪೂರ್ಣಗೊಳಿಸಬೇಕು. ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳ ಮಾದರಿಯಲ್ಲಿ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಸೋಮಗುದ್ದು ರಂಗಸ್ವಾಮಿ, ಕೆ.ಟಿ.ತಿಪ್ಪೇಸ್ವಾಮಿ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ರೊಕ್ಕದ ನಿಜಲಿಂಗಪ್ಪ, ಚಿಕ್ಕಬ್ಬಿಗೆರೆ ನಾಗರಾಜ್, ಬಯಲಪ್ಪ, ಸದಾಶಿವಪ್ಪ, ಮುರುಗೇಂದ್ರಪ್ಪ, ರಾಮರೆಡ್ಡಿ, ಎನ್.ರಮೇಶ್, ಹೊನ್ನೂರು ಮುನಿಯಪ್ಪ, ಮಂಜುನಾಥ್ ಮುದ್ದಾಪುರ, ಬಸ್ತಿಹಳ್ಳಿ ಸುರೇಶ್ ಬಾಬು, ಹಂಪಯ್ಯನಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಲಿಂಗಾವರಹಟ್ಟಿ ಕಾಂತರಾಜ್, ಸಿದ್ದರಾಮಣ್ಣ, ವೈ.ಶಿವಣ್ಣ, ಮೀಸೆ ರಾಮಣ್ಣ, ಮೀಸೆ ಗೌಡಪ್ಪ, ಕರುನಾಡ ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಂಸದರ ಕಚೇರಿ ಮುಂದೆ ಧರಣಿ

ಅಡುಗೆ ಮಾಡುವ ದಿನಸಿ, ತರಕಾರಿ, ಅನಿಲದ ಸಿಲಿಂಡರ್ ಸಮೇತ ಮಹಿಳೆಯರೊಂದಿಗೆ ಆಗಮಿಸಿದ್ದ ರೈತ ಸಂಘದ ಕಾರ್ಯಕರ್ತರು ಆರಂಭದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಒಳ ಆವರಣದಲ್ಲಿ ದಿನಸಿ ಇಟ್ಟು ನಂತರ ಪ್ರತಿಭಟನೆಗೆ ಮುಂದಾದರು. ಸಂಸದ ಕಚೇರಿಯತ್ತ ಸಾಗಲು ಯತ್ನಿಸಿದ ರೈತರ ತಡೆಯಲು ಪೊಲೀಸರು ಮುಂದಾದರಾದರೂ ಸಾಧ್ಯವಾಗಲಿಲ್ಲ. ಪೊಲೀಸರ ತಡೆಗೋಡೆ ಬೇಧಿಸಿ ನೇರವಾಗಿ ಹೋಗಿ ಸಂಸದರ ಕಚೇರಿ ಮುಂದೆ ಧರಣಿ ಕುಳಿತರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ