)
ಮಂಗಳೂರು: ಮೊಗೇರ ಸಂಘ ಮಂಗಳೂರು ತಾಲೂಕು ನೇತೃತ್ವದಲ್ಲಿ ಮಂಗಳೂರು ನಗರದ ಕೂಳೂರು ಪಂಜಿಮೊಗರುವಿನ ಮುಖ್ಯ ರಸ್ತೆಯ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಭವನ, ಉದ್ದೇಶಿತ ಸ್ವಉದ್ಯೋಗ ತರಬೇತಿ ಕೇಂದ್ರ ಮತ್ತು ವಿದ್ಯಾರ್ಥಿ ನಿಲಯದ ಬಹುಮಹಡಿ ಕಟ್ಟಡ ‘ಮೊಗೇರ ಸೌಧ’ದ ಉದ್ಘಾಟನಾ ಸಮಾರಂಭ ಮೇ 10ರಂದು ನಡೆಯಲಿದೆ ಎಂದು ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ ಕೊಂಚಾಡಿ ತಿಳಿಸಿದರು.
ಅಂದು ಬೆಳಗ್ಗೆ 9.30ಕ್ಕೆ ಕೂಳೂರು ವೃತ್ತದಲ್ಲಿ ಆಕರ್ಷಕ ಶೋಭಾಯಾತ್ರೆಗೆ ಚಾಲನೆ, 10.30ಕ್ಕೆ ಮೊಗೇರ ಸೌಧ ಸಂಕೀರ್ಣದಲ್ಲಿ ವಿವಿಧ ವಿಭಾಗಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಸಮುದಾನ ಭವನ ಉದ್ಘಾಟಿಸುವರು. ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಮೊಗೇರ ಸೌಧ ಬಹುಮಹಡಿ ಸಂಕೀರ್ಣ ಉದ್ಘಾಟಿಸುವರು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ಕ್ಯಾ.ಬ್ರಿಜೇಶ್ ಚೌಟ ವಿದ್ಯಾರ್ಥಿ ನಿಲಯ ಉದ್ಘಾಟಿಸುವರು. ಮಾಜಿ ಸಚಿವ ನಾರಾಯಣ ಸ್ವಾಮಿ ಸ್ವಉದ್ಯೋಗ ಕೇಂದ್ರ ಉದ್ಘಾಟಿಸುವರು. ಶಾಸಕ ಡಾ.ಭರತ್ ಶೆಟ್ಟಿ ವೈ ಸಂಘದ ನೂತನ ಕಚೇರಿ ಉದ್ಘಾಟಿಸುವರು. ಮಾಜಿ ಸಚಿವ ಎಸ್.ಅಂಗಾರ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮೊಗೇರ ಜಾತಿ ಸಮೀಕ್ಷೆ ಆ್ಯಪ್‌ಗೆ ಚಾಲನೆ ನೀಡಿವರು. ಸಂಘದ ಅಧ್ಯಕ್ಷ ಸೀತಾರಾಮ ಕೊಂಚಾಡಿ ಅಧ್ಯಕ್ಷತೆ ವಹಿಸುವರು. ಜೊತೆಗೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸುವರು ಎಂದರು.
ಕರ್ನಾಟಕ ರಾಜ್ಯ ಮೊಗೇರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಂದರ ಮೇರ, ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಯಪ್ಪ ಎಸ್., ಕೋಶಾಧಿಕಾರಿ ನಾರಾಯಣ ಉಳ್ಳಾಲ್, ಉಪಾಧ್ಯಕ್ಷ ರಾಮ ಕೊಳಂಬೆ, ಮುಖಂಡರಾದ ಅಶೋಕ್ ಕೊಂಚಾಡಿ, ನಾಗೇಶ್ ಇದ್ದರು.