ಧಾರವಾಡ: ಹಿರಿಯ ಸಾಹಿತಿ ಪ್ರೊ. ಮೋಹನ್ ಹಬ್ಬು ಅವರ ಆಯ್ದ ಕಥೆಗಳ ಸಂಕಲನ ''''ಚಯನ'''' ಓದುಗರ ಮನವನ್ನು ಮುಟ್ಟುವಂತಿದ್ದು ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಆಡು ಭಾಷೆಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದರಿಂದ ಯಶಸ್ವಿ ಕಥೆಗಳಾಗಿ ಹೊರಹೊಮ್ಮಿವೆ ಎಂದು ಖ್ಯಾತ ಸಾಹಿತಿ ಡಾ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ನಿಸರ್ಗ ಸೌಂದರ್ಯ ತಮ್ಮನ್ನು ಮಂತ್ರಮುಗ್ದಗೊಳಿಸಿದ್ದು ನನಗೆ ಆತ್ಮೀಯವಾಗಿದೆ ಎಂದರು.
ಚಯನ ಕಥಾ ಸಂಕಲನದ ವಸ್ತು ವಿನ್ಯಾಸದ ಕುರಿತು ಮಾತನಾಡಿದ ಹಿರಿಯ ಸಾಹಿತಿ ಡಾ. ರಾಘವೇಂದ್ರ ಪಾಟೀಲ ಅವರು ಪ್ರೊ. ಮೋಹನ್ ಹಬ್ಬು ಅವರ ಕಥೆಗಳು ನವೋದಯ ಮತ್ತು ನವ್ಯ ಸಾಹಿತ್ಯಗಳ ಸಂಗಮವಾಗಿದೆ. ನವೋದಯದ ಸಮಷ್ಟಿ ಪ್ರಜ್ಞೆ ಮತ್ತು ನವ್ಯದ ವ್ಯಕ್ತಿತ್ವವಾದಗಳು ಒಳಗೊಂಡಿವೆ ಎಂದು ವರ್ಣಿಸಿದರು.ಮೋಹನ್ ಹಬ್ಬು ಅವರ ಕಥೆಗಳು ಗಟ್ಟಿ ಹೂರಣ ಹೊಂದಿದ್ದು ಸಾಮಾಜಿಕ ಕಾಳಜಿ ಹೊಂದಿವೆ. ಪ್ರತಿಯೊಂದು ಕಥೆಯೂ ಹೃದಯವನ್ನು ತಟ್ಟುತ್ತದೆ ಎಂದು ನುಡಿದರು. ಎಲ್ಲ ಕಥೆಗಳ ವಿಸ್ತೃತ ವಿಶ್ಲೇಷಣೆ ಮಾಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಮೋಹನ ಹಬ್ಬು ಅವರ ಎಲ್ಲ ಆರೂ ಸಹೋದರರ ಸಾಹಿತ್ಯ ಪ್ರೇಮ, ಒಗ್ಗಟ್ಟು ಹಾಗೂ ಪರಸ್ಪರ ಪ್ರೀತಿ ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದರು.ಚಯನ ಕಥೆಯನ್ನು ಸಮಗ್ರ ಅವಲೋಕನ ಮಾಡಿದ ಅವರು ಕಥೆಗಳು ಸಮಾಜದ ಸಾಂಕೇತಿಕ ನಿರೂಪಣೆಯಾಗಿದೆ ಎಂದರು.
ಕೃತಿಕಾರ ಪ್ರೊ. ಮೋಹನ್ ಹಬ್ಬು ಅವರು ತಮ್ಮ ಕುಟುಂಬದ ಹಿನ್ನೆಲೆಯನ್ನು ಭಾವುಕರಾಗಿ ನುಡಿದರು. ತಾವು ಬರೆದ ಕಥೆಗಳ ಹಿನ್ನೆಲೆಯನ್ನು ವಿವರಿಸಿದರು.ಮಾಜಿ ಶಾಸಕ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಮತ್ತು ಪರಿಚಯ ಮಾಡಿದ ಪತ್ರಕರ್ತ ಅರುಣಕುಮಾರ ಹಬ್ಬು ಅವರು, ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕದ ಮಧ್ಯೆ ಇರುವ ಅವಿನಾಭಾವ ಸಂಬಂಧವೇ ಅಂಕೋಲೆಯ ಮೋಹನ ಹಬ್ಬು ಅವರ ಕಥಾ ಸಂಕಲನ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬಿಡುಗಡೆಗೆ ಪ್ರೇರಣೆ ಎಂದರು.
ಪತ್ರಕರ್ತ ಗಣಪತಿ ಗಂಗೊಳ್ಳಿ ನಿರೂಪಿಸಿದರು. ಹಿರಿಯ ಪತ್ರಕರ್ತ ರಾಜು ವಿಜಾಪುರ ವಂದಿಸಿದರು.