-ಚಿತ್ರದುರ್ಗದಲ್ಲಿ ಮೆರವಣಿಗೆ ನಡೆಸಿದ ಮುಸ್ಲಿಂ ಬಾಂಧವರು । ಮುಸ್ಲೀಮರೇ ಇಲ್ಲದ ಬಚ್ಚಬೋರನಹಟ್ಟಿಯಲ್ಲಿ ಮೊಹರಂ ಸಂಭ್ರಮ
-----ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಭಕ್ತಿ, ಭಾವ, ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕೆಲವಡೆ ದುಃಖ, ಬಲಿದಾನ, ಶೋಕಾಚರಣೆಯ ದಿನವನ್ನಾಗಿ ಮೊಹರಂ ಆಚರಿಸಲಾಗುತ್ತಿದೆ. ಒಂಬತ್ತು ದಿನಗಳ ಕಾಲ ಆಚರಿಸುವ ಮೊಹರಂ ಹಬ್ಬದ ಕೊನೆ ಹತ್ತನೆ ದಿನವೇ ಪಂಜ ಮೆರವಣಿಗೆ, ಉಪವಾಸ ಆಚರಿಸುವ ಸಂಕಲ್ಪ ಮಾಡುವುದು ಹಬ್ಬದ ವಿಶೇಷ.ಚಿತ್ರದುರ್ಗ ಚೇಳುಗುಡ್ಡ, ಬುರುಜನಹಟ್ಟಿ, ಮಠದಕುರುಬರಹಟ್ಟಿಯಿಂದ ಮೆರವಣಿಗೆ ಮೂಲಕ ಬಂದ ಪಂಜಗಳು ಸೈಯದ್ ನಾ ಹಜರತ್ ಇಮಾಂ ಹಸ ಸೈಯದಾನಾ, ಹಜರತ್ ಇಮಾಂ ಹುಸೇನ್ ಅಶೋರಖಾನ ಇವರುಗಳ ದರ್ಗಾ ಬಳಿ ತೆರಳಿ ಪೂಜೆ ಸಲ್ಲಿಸಿದವು. ಗಾಂಧಿವೃತ್ತದಿಂದ ಹಿಡಿದು ದೊಡ್ಡಪೇಟೆಯವರೆಗೆ ರಸ್ತೆಯ ಎರಡು ಬದಿಗಳಲ್ಲಿ ಹಿಂದೂ-ಮುಸಲ್ಮಾನರು ಜಮಾಯಿಸಿ ಮೆರವಣಿಗೆ ವೀಕ್ಷಿಸಿದರು.
ಬೃಹದಾಕಾರವಾದ ಹಾರ, ಹೂವು ಮತ್ತು ಸುನೇರಿಗಳಿಂದ ಅಲಂಕರಿಸಿದ್ದ ಪಂಜಗಳ ಮೇಲೆ ಜನ ಮಂಡಕ್ಕಿ ತೂರಿ ಭಕ್ತಿ ಸಮರ್ಪಿಸುತ್ತಿದ್ದರೆ ಇನ್ನು ಕೆಲವರು ಕೆಳಗೆ ಬಿದ್ದ ಮಂಡಕ್ಕಿಗಳನ್ನು ಆಯ್ದುಕೊಳ್ಳುತ್ತಿದ್ದುದು ಮೊಹರಂ ಹಬ್ಬದ ವಿಶೇಷವಾಗಿತ್ತು.ಬಚ್ಚಬೋರನಹಟ್ಟಿಯಲ್ಲಿ ಸಂಭ್ರಮ:
ಮೊಹರಂನ್ನು ಹತ್ತು ದಿನಗಳ ಕಾಲ ಬಚ್ಚಬೋರನಹಟ್ಟಿಯಲ್ಲಿ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗಿದ್ದು, ಮೊಹರಂ ಹಬ್ಬಕ್ಕೆ ಬುಧವಾರ ಸಂಜೆ ತೆರೆಬಿದ್ದಿತು.ಮೊಹರಂ (ಪೀರಲ ಹಬ್ಬ) ಆಚರಿಸುವ ಗ್ರಾಮಗಳಲ್ಲಿ ಬಚ್ಚಬೋರನಹಟ್ಟಿ ಗ್ರಾಮ ಮುಂಚೂಣಿಯಲ್ಲಿದೆ. ಅಮಾವ್ಯಾಸೆಯ ಮೂರು ದಿನದ ನಂತರ ಪೀರಲ ದೇವರ ಪ್ರಾತಿಷ್ಠಾಪನೆ ಮಾಡುವ ಸ್ಥಳದ ಮುಂಭಾಗದ ಅಲ್ಲಾದ ಗುಣಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತದೆ. ನಂತರ ಪೆಟ್ಟಿಗೆಯಲ್ಲಿನ ದೇವರುಗಳನ್ನು ಹೊರತೆಗೆದು ಪ್ರತಿಷ್ಠಾಪಿಸಲಾಗುತ್ತದೆ. ಹೀಗೆ ಹತ್ತು ದಿನಗಳ ಕಾಲ ಹಲವು ಧಾರ್ಮಿಕ ವಿಧಿವಿಧಾನಗಳು ನಡೆಸಲಾಯಿತು.
ಪೀರಲ ಹಬ್ಬದ ಕೊನೆ ದಿನ ಮಂಗಳವಾರ ರಾತ್ರಿ ಹರಕೆ ಹೊತ್ತವರು ಅಲ್ಲಾದ ಗುಣಿಗೆ ಕಟ್ಟಿಗೆ ಹಾಕಿ, ಬೆಂಕಿ ಹಚ್ಚಿ ಕೆಂಡ ಮಾಡಲಾಯಿತು. ಭಕ್ತರು ದೇವರಿಗೆ ಮಂಡಕ್ಕಿ, ಸಕ್ಕರೆ, ಬೆಲ್ಲ, ಕೆಂಪುದಾರವನ್ನು ಅರ್ಪಿಸಿ, ಇಷ್ಠಾರ್ಥ ಈಡೇರಿಸುವಂತೆ ಕೋರಿದರು. ಮಂಗಳವಾರ ಬೆಳಗಿನ ಜಾವ 5.30ಕ್ಕೆ ಪೀರಲ ದೇವರನ್ನು ಹೊತ್ತು ಹರಕೆ ಹೊತ್ತವರು ಕೆಂಡಸೇವೆ ಸಲ್ಲಿಸಿದರು.ಬುಧವಾರ ಸಂಜೆ ದೇವರನ್ನು ಹೊತ್ತು ಕೆಂಡ ಸೇವೆ ಸಲ್ಲಿಸಿದ ನಂತರ ಮೆರವಣಿಗೆ ನಡೆಸಿ ನೀರಿಗೆ ಹಾಕುವ ಮೂಲಕ ಹಬ್ಬಕ್ಕೆ ತೆರೆಬಿದ್ದಿತು.ಮೊಹರಂ ಹಬ್ಬದ ಆಚರಣೆಯಲ್ಲಿ ವಿಶೇಷ ವೇಷಧಾರಿಗಳು ಗಮನಸೆಳೆದರು. ಹಬ್ಬದ ಅಂಗವಾಗಿ ಹೆಣ್ಣು ವೇಷ, ಅಳ್ಳಲ್ಲಿ ಬುಕ್ಕ, ಗಂಡ, ಹೆಂಡತಿ ವೇಷ ಸೇರಿದಂತೆ ಹಲವು ವೇಷಧಾರಿಗಳು ಮನೆ, ಮನೆಗೆ ಹೋಗಿ ಕಾಣಿಕೆ ಪಡೆದು ಹರಕೆ ತೀರಿಸಿದರು.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹಾಗೂ ಚಿತ್ರದುರ್ಗ ತಾಲೂಕಿನ ಭೀಮಸಮುದ್ರದಲ್ಲಿಯೂ ಪೀರಲ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.------------
ಪೋಟೋ:ಫೋಟೋ: 17 ಸಿಟಿಡಿ6 ಮೊಹರಂ ಹಬ್ಬದ ಪ್ರಯುಕ್ತ ಚಿತ್ರದುರ್ಗದ ಪ್ರಮುಖ ಬೀದಿಯಲ್ಲಿ ಪುಷ್ಪಾಲಂಕೃತ ಪಂಜಗಳ ಮೆರವಣಿಗೆ ನಡೆಯಿತು.--------
ಫೋಟೋ: 17 ಸಿಟಿಡಿ 7ಚಿತ್ರದುರ್ಗ ತಾಲೂಕಿನ ಬಚ್ಚಬೋರನಹಟ್ಟಿಯಲ್ಲಿ ಪೀರಲ ಹಬ್ಬದ ಪ್ರಯುಕ್ತ ವಿವಿಧ ವೇಷಧಾರಿಗಳು ಗಮನ ಸೆಳೆದರು.
-------ಫೋಟೋ: 17 ಸಿಟಿಡಿ 8
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಪೀರಲ ಹಬ್ಬದ ಪ್ರಯುಕ್ತ ಮೆರವಣಿಗೆಗೆ ಸಾಲಾಗಿ ಜೋಡಿಸಿದ್ದ ಪಂಜಗಳು