ಬ್ಯಾಡಗಿ: ಮೃತರ ಹೆಸರಿನಲ್ಲಿ ಗೃಹಲಕ್ಷ್ಮೀ ಹಣ ಪಡೆದಿರುವ ಗಮನಕ್ಕೆ ಬಂದಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹1.10 ಕೋಟಿ ನಷ್ಟವಾಗಿದ್ದು ಪತ್ತೆಯಾಗಿದೆ. ಮೃತ ಮಹಿಳೆಯರ ಪತ್ತೆ ಮಾಡಿ ಹಣವನ್ನು ಮರಳಿ ಪಡೆದು ಅರ್ಹ ಫಲಾನುಭವಿಗಳಿಗೆ ನೀಡುವುದಾಗಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.
ಪ್ರಾಮಾಣಿಕತೆ ತೋರಬೇಕು: ಫಲಾನುಭವಿಗಳು ಮೃತರಾಗಿದ್ದಲ್ಲಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಕ್ಕೆ (ಪಿಡಿಒ) ತಿಳಿಸುವುದು ಕುಟುಂಬದ ಜವಾಬ್ದಾರಿ, ಇದಕ್ಕೆ ತಪ್ಪಿದಲ್ಲಿ ಸೂಕ್ತ ಕಾನೂನು ರೀತ್ಯ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ, ರಾಜ್ಯಾದ್ಯಂತ ಸಮಗ್ರ ಪರಿಶೀಲನೆ ಕೈಗೊಳ್ಳಲಾಗಿದ್ದು, ಸುಮಾರು 1.40 ಲಕ್ಷ ಫಲಾನುಭವಿಗಳ ಐಟಿ ರಿಟರ್ನ್ಸ್ ಹಾಗೂ ಜಿಎಸ್‌ಟಿ ನೋಂದಣಿ ಹೊಂದಿರುವ ಕುಟುಂಬಗಳ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದರು.
1859 ಫಲಾನುಭವಿಗಳ ಸಾವು: ಹಾವೇರಿ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ಆರಂಭಗೊಂಡು 3 ವರ್ಷದಲ್ಲಿ 2026ರ ಏಪ್ರಿಲ್ ಅಂತ್ಯದ ವರೆಗೆ 1859 ಫಲಾನುಭವಿಗಳು ಮೃತಪಟ್ಟಿರುವುದು ದೃಢಪಟ್ಟಿದೆ. ಜಿಲ್ಲೆಯ ವಿವಿಧ ತಾಲೂಕುಗಳ ಬ್ಯಾಂಕ್ ಖಾತೆಗಳಿಗೆ 548 ಕಂತುಗಳ ರೂಪದಲ್ಲಿ ಸುಮಾರು ₹10.96 ಲಕ್ಷ ಹಣ ಜಮೆಯಾಗಿದ್ದು, ಇದರಲ್ಲಿ 95 ಫಲಾನುಭವಿಗಳ ಖಾತೆಗಳಿಂದ ಹಣ ಸರ್ಕಾರಕ್ಕೆ ಮರಳಿಸಲಾಗಿದೆ ಎಂದರು.ಬಿಪಿಎಲ್ ಆದಾಯ ಮಿತಿ ಹೆಚ್ಚಳ: ಪ್ರಸ್ತುತ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ವಾರ್ಷಿಕ ಆದಾಯ ಮಿತಿ ₹1.20 ಲಕ್ಷ ನಿಗದಿಯಾಗಿದೆ. ಇದನ್ನು ಹೆಚ್ಚಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಆದಾಯ ಮಿತಿ ಕುರಿತು ಕೆಲ ಗೊಂದಲಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಸಂಬಂಧಿತ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.