ಹಣ ವಸೂಲಿ ಪ್ರಕರಣ: ತಪ್ಪಿತಸ್ಥರ ಅಮಾನತಿಗೆ ಆಗ್ರಹ

KannadaprabhaNewsNetwork |  
Published : Dec 19, 2025, 01:45 AM IST
ಕೆ ಕೆ ಪಿ ಸುದ್ದಿ 02:ಅಮಾಯಕ ವ್ಯಕ್ತಿಯಿಂದ ಹಣ ವಸೂಲಿ ಮಾಡಿದ ಪೋಲೀಸ್ ರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹ.  | Kannada Prabha

ಸಾರಾಂಶ

ಕನಕಪುರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಪರಭಾರೆ ಮಾಡಿ ವಂಚಿಸಿರುವ, ಸಾಕಷ್ಟು ಪ್ರಕರಣಗಳು ನಡೆದಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಿವೆ,

ಕನ್ನಡಪ್ರಭ ವಾರ್ತೆ ಕನಕಪುರ

ಸುಳ್ಳು ಪ್ರಕರಣದಲ್ಲಿ ಬೆದರಿಸಿ ಹಣ ವಸೂಲಿ ಮಾಡಿದ ಆರೋಪದಲ್ಲಿ ಪಿಎಸ್ಐ ಹರೀಶ್ ಮಾತ್ರ ಅಮಾನತು ಮಾಡಿದ್ದು, ಅವರಿಗೆ ಸಹಕರಿಸಿದ ಉಳಿದ ನಾಲ್ಕು ಮಂದಿ ಸಿಬ್ಬಂದಿಯನ್ನು ಅಮಾನತುಪಡಿಸಬೇಕೆಂದು ಪ್ರಕರಣದ ದೂರುದಾರ ರಾಜೇಶ್ ಒತ್ತಾಯಿಸಿದರು.

ನಗರದ ರಾಜಾರಾವ್ ರಸ್ತೆಯಲ್ಲಿರುವ ರೈತ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸರೇ ಅಧಿಕಾರ ದುರ್ಬಳಕೆ ಮಾಡಿ ಕೊಂಡು ಸುಳ್ಳು ಪ್ರಕರಣದಲ್ಲಿ, ಬಲವಂತವಾಗಿ ಕರೆದು ಕೊಂಡು ಹೋಗಿ ಹಣ ವಸೂಲಿ ಮಾಡಿದ್ದು ಪ್ರತಿಯೊಂದು ದಾಖಲೆ ನೀಡಿದ್ದೇವೆ, ಇಲಾಖೆಯು ಈ ಒಂದು ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

ಕನಕಪುರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಪರಭಾರೆ ಮಾಡಿ ವಂಚಿಸಿರುವ, ಸಾಕಷ್ಟು ಪ್ರಕರಣಗಳು ನಡೆದಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಿವೆ, ಸತ್ತ ವ್ಯಕ್ತಿ ಹೆಸರಿನಲ್ಲಿ, ಇಲ್ಲದ ವ್ಯಕ್ತಿ ಹೆಸರಿನಲ್ಲಿ ಆಧಾರ್ ಕಾರ್ಡ್, ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡಲಾಗಿದೆ, ಜಮೀನನ್ನು ಕಬಳಿಸಲಾಗಿದೆ,ಇಂತಹ ಪ್ರಕರಣಗಳ ತನಿಖೆ ನಡೆಸಿ ಅಕ್ರಮ ಮತ್ತು ವಂಚನೆ ಮಾಡಿದ ಆರೋಪಿಗಳನ್ನು ಬಂಧಿಸಿ ಶಿಕ್ಷೆ ನೀಡುತ್ತಿಲ್ಲ, ಯಾವುದೇ ತಪ್ಪು ಮಾಡದ ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಹೆದರಿಸಿ ಹಣ ವಸೂಲಿ ಮಾಡಿದ್ದಾರೆ ಎಂದು ದೂರಿದರು.

ಸಾಮಾಜಿಕ ಹೋರಾಟಗಾರ ಕುಮಾರಸ್ವಾಮಿ ಮಾತನಾಡಿ, ರಾಜೇಶ್ ಅವರ ಪ್ರಕರಣವನ್ನು ತನಿಖೆ ನಡೆಸಿರುವ ಡಿವೈಎಸ್‌ಪಿ ಕೆಂಚೇಗೌಡರು ವರದಿ ಮೇರೆಗೆ ಪಿಎಸ್ಐ ಹರೀಶ್ ಅಮಾನತು ಮಾಡಲಾಗಿದೆ. ಆದರೆ ಅದೇ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ನಾಲ್ಕು ಮಂದಿ ಸಿಬ್ಬಂದಿ ವಿರುದ್ಧವು ಕಾನೂನು ಕ್ರಮ ವಾಗಬೇಕೆಂದು ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಮಾಫಿಯಾಗಳ ಅಡ್ಡೆಯಾಗುತ್ತಿವೆ, ತಮಗೆ ಬೇಕಾದಂತೆ ರಾಜಿ ಪಂಚಾಯಿತಿ ಮಾಡಿ ಸೆಟಲ್ಮೆಂಟ್ ಮಾಡಿಕೊಳ್ಳುತ್ತಿದ್ದಾರೆ, ಇಲಾಖೆಯ ಉನ್ನತ ಅಧಿಕಾರಿಗಳು ಆದೇಶಗಳಿಗೆ ಇಲ್ಲಿ ಬೆಲೆ ಇಲ್ಲದಂತಾಗಿದೆ, ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ದೂರುಗಳನ್ನು ದಾಖಲಿಸಿ ಕರೆ ತಂದು ಠಾಣೆಯಲ್ಲಿ ಕೂರಿಸಿ ಅವರಲ್ಲಿ ಭಯ ಹುಟ್ಟಿಸಿ ಪ್ರಕರಣ ಆಗದಂತೆ ಮುಚ್ಚಿ ಹಾಕಲು ಇಂತಿಷ್ಟು ಹಣ ನೀಡಬೇಕೆಂದು ಬೇಡಿಕೆ ಇಟ್ಟು ಹಣವನ್ನು ವಸೂಲಿ ಮಾಡುತ್ತಿರುವುದರಿಂದ ಜನರಿಗೆ ಪೊಲೀಸ್ ಠಾಣೆಯ ಮೇಲಿನ ವಿಶ್ವಾಸವೇ ಇಲ್ಲದಂತಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜೇಶ್ ವಿರುದ್ಧ ಯಾವುದೇ ಪ್ರಕರಣ ಇಲ್ಲದಿದ್ದರೂ ಉದ್ದೇಶಪೂರ್ವಕವಾಗಿ ಅವರನ್ನು ಕರೆದುಕೊಂಡು ಹೋಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ಅವರಿಗೆ ಸಾಮಾಜಿಕವಾಗಿ ಅವಮಾನವಾಗಿದೆ, ಪೊಲೀಸ್ ಠಾಣೆಗಳಿಗೆ ಸರ್ಜರಿ ಆಗಬೇಕು, ಠಾಣೆಗಳಿಗೆ ಸಿಸಿಟಿವಿ ಅಳವಡಿಸುವುದರ ಜೊತೆಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬಾಡಿ ಕ್ಯಾಮರವನ್ನು ಅಳವಡಿಸಿ ಇಲಾಖೆಯಲ್ಲಿ ಪಾರದರ್ಶಕತೆಯನ್ನು ತರಬೇಕೆಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ ಪೊಲೀಸರೇ ಕಳ್ಳರಾದರೆ ಯಾರಿಂದ ನ್ಯಾಯ ನಿರೀಕ್ಷಿಸಲು ಸಾಧ್ಯ. ಪೊಲೀಸ್ ಇಲಾಖೆ ಶ್ರೀಮಂತರು ಮತ್ತು ಉಳ್ಳವರ ಪರ ವಾದರೆ ಬಡವರಿಗೆ ಮತ್ತು ಅಶಕ್ತರಿಗೆ ನ್ಯಾಯ ಕೊಡಿಸುವವರು ಯಾರು, ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳನ್ನು ಅಮಾನತು ಮಾಡುವುದು ನಾಮಕಾವಸ್ಥೆಯಾಗಿದೆ, ಅಮಾನತು ಆದವರು ಒಂದು ವಾರದಲ್ಲಿ ಬೇರೆ ಠಾಣೆಗೆ ವರ್ಗಾವಣೆ ಅಥವಾ ಅದೇ ಠಾಣೆಯಲ್ಲಿ ಕರ್ತವ್ಯ ಮಾಡುತ್ತಾರೆ, ಇದೊಂದು ಜನರ ಕಣ್ಣೊರಿಸುವ ತಂತ್ರವಾಗಿದ್ದು ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕೆಂದು ಮನವಿ ಮಾಡಿದರು.

ಕೆ ಕೆ ಪಿ ಸುದ್ದಿ ''''''''

ದೂರುದಾರ ರಾಜೇಶ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು