ಯಾವುದೇ ಕ್ರಮ ಕೈಗೊಳ್ಳದ ವಕ್ಫ್ ಮಂಡಳಿ
ನಗರದ ಹಜರತ್ ನಾಡಬಂದ್ ಷಾವಲಿ ದರ್ಗಾದ ಹುಂಡಿಯ ಹಣ ಕಳವು ವಿಚಾರದ ಬಗ್ಗೆ ಈವರೆಗೆ ವಕ್ಫ್ ಮಂಡಳಿ ಅಧಿಕಾರಿಗಳಾಗಲಿ ದರ್ಗಾದ ಆಡಳಿತ ಮಂಡಳಿಯವರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದರ್ಗಾದ ಅರ್ಚಕ ಇಸ್ಮಾಯಿಲ್ ಸಾಬ್ ಮುಜಾವರ್ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ತಿಂಗಳ ಏ.18ರ ಬೆಳಗಿನ ಜಾವ ವಿಷಯ ಗೊತ್ತಾಗಿದೆ. ಏ.17ರಂದು ಹುಂಡಿಯಲ್ಲಿ ಹಣ ಸಂಪೂರ್ಣ ತುಂಬಿತ್ತು. ಏ.18ರಂದು ನೋಡಿದಾಗ ಖಾಲಿಯಾಗಿತ್ತು. ಆವರಣದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಬೇರೆಡೆ ತಿರುಗಿಸಿ ಮಧ್ಯರಾತ್ರಿ ವ್ಯವಸ್ಥಿತವಾಗಿ ಹುಂಡಿಯ ಹಣ ಕಳ್ಳತನ ಮಾಡಲಾಗಿದೆ ಎಂದರು.ನಗರದ ತುಂಗಭದ್ರ ನದಿಯ ಬಳಿ ಈ ದರ್ಗಾ ಇದೆ. ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಈ ದರ್ಗಾ ಒಂದು ಸೌಹಾರ್ದದ ಕೇಂದ್ರವಾಗಿದೆ. ಮಧ್ಯ ಕರ್ನಾಟಕದಲ್ಲಿ ಅನೇಕ ಭಕ್ತಾದಿಗಳು ಇದ್ದಾರೆ. ಖ್ಯಾತ ಸೂಫಿ ಸಂತರ ಸ್ಮರಣೆಯಲ್ಲಿರುವ ಈ ದರ್ಗಾ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಡಿಯಲ್ಲಿ ಬರುತ್ತದೆ ಎಂದರು.
ದಾವಣಗೆರೆಯಲ್ಲಿರುವ ವಕ್ಫ್ ಮಂಡಳಿ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದರೂ ಅವರು ಹಾರಿಕೆ ಉತ್ತರಗಳನ್ನು ನೀಡಿ, ಪರಿಶೀಲನೆ ಮಾಡೋಣ ಎಂದರು. ದರ್ಗಾದ ಆವರಣದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಫುಟ್‍ಯೇಜ್ ಸಂರಕ್ಷಿಸಿ, ಅದರ ಒಂದು ಕಾಪಿಯನ್ನು ನಮಗೆ ನೀಡಿರಿ ಎಂದು ಆರ್‌ಟಿಐ ಅಡಿ ಅರ್ಜಿ ನೀಡಿದರೂ ವಕ್ಫ್ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ ಎಂದು ವಿವರಿಸಿದರು.
ಮಕಾನ್ ಪ್ರದೇಶದ ನಿವಾಸಿ ಇರ್ಫಾನ್ ಮಾತನಾಡಿ, ಸಂಬಂಧಿತ ಅಧಿಕಾರಿಗಳ ಈ ನಿರ್ಲಕ್ಷ್ಯತನದ ವಿರುದ್ಧ ವಕ್ಫ್ ಮಂಡಳಿ ಮುಖ್ಯಸ್ಥರಿಗೆ, ಇಲಾಖೆಯ ಸಚಿವರಿಗೆ ದೂರು ನೀಡುತ್ತೇವೆ. ಸಾರ್ವಜನಿಕರ ಹಣ ರಕ್ಷಿಸಲು ಹೋರಾಟ ಮಾಡುತ್ತೇವೆ ಎಂದರು.