ಕಲಾಮಂದಿರ ನವೀಕರಣ ಹೆಸರಿನಲ್ಲಿ ಹಣ ಪೋಲು

KannadaprabhaNewsNetwork | Published : Oct 27, 2023 12:30 AM

ಸಾರಾಂಶ

ಕಲಾಮಂದಿರ ನವೀಕರಣಕ್ಕಾಗಿ ಹಣ ಪೋಲುಎರಡು ಬಾರಿ ಹೊಸ ರೂಪ ನೀಡಿದ್ದರೂ ಪ್ರಯೋಜನವಾಗಿಲ್ಲಹಣ ದುರುಪಯೋಗ ತಡೆಯದಿದ್ದರೆ ನವೀಕರಣ ವ್ಯರ್ಥ
- ಎರಡು ಬಾರಿ ಹೊಸ ರೂಪ ನೀಡಿದ್ದರೂ ಪ್ರಯೋಜನವಾಗಿಲ್ಲ - ಹಣ ದುರುಪಯೋಗ ತಡೆಯದಿದ್ದರೆ ನವೀಕರಣ ವ್ಯರ್ಥ ಮಂಡ್ಯ ಮಂಜುನಾಥ ಕನ್ನಡಪ್ರಭ ವಾರ್ತೆ ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರ ನವೀಕರಣ ಹೆಸರಿನಲ್ಲಿ ಹಣ ಪೋಲಾಗುತ್ತಿರುವುದು ಬಿಟ್ಟರೆ ಬೇರಾವುದೇ ಪ್ರಯೋಜನವಾಗುತ್ತಿಲ್ಲ. ಕಳೆದ ಹನ್ನೆರಡು ವರ್ಷಗಳಲ್ಲಿ ಎರಡು ಬಾರಿ ನವೀಕರಣಗೊಂಡಿದೆ. ಆದರೂ ಕಲಾ ಮಂದಿರದೊಳಗೆ ಇಂದಿಗೂ ಅವ್ಯವಸ್ಥೆ ತಾಂಡವವಾಡುತ್ತಲೇ ಇದೆ. ಇದೀಗ ಮತ್ತೊಮ್ಮೆ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಪ್ರಸ್ತುತ ಕಲಾ ಮಂದಿರ ನವೀಕರಣಕ್ಕೆ ೧.೬೦ ಕೋಟಿ ರು. ಅಂದಾಜು ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗಿದೆ. ಅದರಲ್ಲಿ ಈಗ ೬೩ ಲಕ್ಷ ರು. ಹಣ ಬಿಡುಗಡೆಯಾಗಿದೆ. ಇಲ್ಲಿಯೂ ಹಣ ದುರುಪಯೋಗವಾಗುವ ಅನುಮಾನಗಳು ಸಾರ್ವಜನಿಕರನ್ನು ಕಾಡುತ್ತಿವೆ. ಮೊದಲ ಹಂತದಲ್ಲಿ ಬಿಡುಗಡೆಯಾದ ಹಣದಲ್ಲಿ ಸ್ವಲ್ಪ ಕಾಮಗಾರಿ, ಆನಂತರ ಬಿಡುಗಡೆಯಾಗುವ ಹಣದಲ್ಲಿ ಉಳಿದರ್ಧ ಕಾಮಗಾರಿ ನಡೆಸುವುದರಿಂದ ಹಣ ಪೋಲಾಗುವುದಕ್ಕೆ ದಾರಿ ಮಾಡಿಕೊಟ್ಟಂತಾಗುವುದು ಎಂದು ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಾಲಿ ಕಲಾ ಮಂದಿರದೊಳಗೆ ಸೀಟುಗಳೆಲ್ಲವೂ ಕಿತ್ತುಬಂದಿವೆ. ಹಲವು ಆಸನಗಳು ಮುರಿದುಬಿದ್ದಿವೆ. ಸೌಂಡ್ ವ್ಯವಸ್ಥೆ ಕೆಟ್ಟುನಿಂತಿದೆ. ಬೆಳಕಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಗೋಡೆಗೆ ಅಳವಡಿಸಿರುವ ವುಡನ್ ಶೀಟ್‌ಗಳು, ಫಾಲ್ ಸೀಲಿಂಗ್‌ಗಳು ಕಳಚಿಬೀಳುತ್ತಿವೆ. ಕಲಾ ಮಂದಿರ ಮೇಲ್ಭಾಗದ ಕಲ್ನಾರ್ ಶೀಟ್‌ಗಳಲ್ಲಿ ಬಹುತೇಕ ಹಾಳಾಗಿವೆ. ಶೌಚಾಲಯ ವ್ಯವಸ್ಥೆ ಅವ್ಯವಸ್ಥೆಯಿಂದ ಕೂಡಿದೆ. ವುಡನ್ ಪ್ಲಾಟ್‌ಫಾರಂ ಹಾಳಾಗಿದೆ. ಅವ್ಯವಸ್ಥೆಯ ಹಾಳುಕೊಂಪೆಯಾಗಿ ಕಲಾಮಂದಿರ ಉಳಿದುಕೊಂಡಿದೆ. ಎರಡು ಬಾರಿ ನವೀಕರಣ: ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರ ಈಗಾಗಲೇ ಎರಡು ಬಾರಿ ನವೀಕರಣಗೊಂಡಿದೆ. ಪಿ.ಸಿ.ಜಾಫರ್ ಮತ್ತು ಡಾ.ಅಜಯ್ ನಾಗಭೂಷಣ್ ಜಿಲ್ಲಾಧಿಕಾರಿಗಳಾಗಿದ್ದ ವೇಳೆ ವುಡನ್ ಪ್ಲಾಟ್‌ ಫಾರಂ, ಸೀಟ್‌ಗಳ ರಿಪೇರಿ, ಶೌಚಾಲಯ ದುರಸ್ತಿ, ಸೌಂಡ್ ವ್ಯವಸ್ಥೆ ಸೇರಿದಂತೆ ಹಲವು ಕಾಮಗಾರಿ ನಡೆಸಲಾಗಿತ್ತು. ಸಮರ್ಪಕ ನಿರ್ವಹಣೆ ಕೊರತೆಯಿಂದಲೋ, ಕಳಪೆ ಕಾಮಗಾರಿಯಿಂದಲೋ ಮತ್ತೆ ಕಲಾ ಮಂದಿರದೊಳಗೆ ಎಲ್ಲವೂ ಕಿತ್ತುಬಂದಿವೆ. ಕಲಾ ಮಂದಿರವನ್ನು ೧.೧೦ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿ ೨೩ ವರ್ಷಗಳ ಹಿಂದೆ ಉದ್ಘಾಟನೆಗೊಳಿಸಲಾಗಿದೆ. ಇದೀಗ ಅದರ ನವೀಕರಣಕ್ಕೆ ೧.೬೦ ಕೋಟಿ ರು. ಖರ್ಚು ಮಾಡಲಾಗುತ್ತಿದೆ. ಕಲಾ ಮಂದಿರ ನವೀಕರಣಕ್ಕೆ ಖರ್ಚು ಮಾಡಿದ ಹಣದಲ್ಲಿ ಹೊಸ ಕಲಾ ಮಂದಿರವನ್ನೇ ನಿರ್ಮಿಸಬಹುದಾಗಿತ್ತು ಎಂದು ಸಾಹಿತಿಗಳು, ರಂಗಕಲಾವಿದರು ಹೇಳುವ ಮಾತಾಗಿದೆ. ರಂಗತಜ್ಞರು ಸಮಿತಿಯೊಳಗಿಲ್ಲ: ಕಲಾ ಮಂದಿರ ಪುನಶ್ಚೇತನಾ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ವಿವಿಧ ಇಲಾಖೆಯ ಅಧಿಕಾರಿಗಳು ಸದಸ್ಯರಾಗಿದ್ದಾರೆ. ರಂಗಮಂದಿರ ನವೀಕರಣ ಹೇಗಿರಬೇಕು ಎಂಬ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಂದಾಜುಪಟ್ಟಿ ತಯಾರಿಸಿದ್ದಾರೆ. ಸಮಿತಿಯೊಳಗೆ ರಂಗ ತಜ್ಞರು, ನಾಟಕ ಕಲೆಯ ಬಗ್ಗೆ ತಿಳಿವಳಿಕೆ ಇರುವವರಿಗೆ ಅವಕಾಶವನ್ನು ನೀಡದಿರುವುದು ವಿಪರ್ಯಾಸದ ಸಂಗತಿ. ರಂಗಸಜ್ಜಿಕೆ ಹೇಗಿರಬೇಕೆಂಬ ಪರಿಜ್ಞಾನ ರಂಗತಜ್ಞರಿಗೆ, ರಂಗಭೂಮಿ, ನಾಟಕಕಲೆಯ ಬಗ್ಗೆ ಅನುಭವವಿರುವವರಿಗೆ ಗೊತ್ತಿರುತ್ತದೆಯೇ ವಿನಃ ಅಧಿಕಾರಿಗಳಿಗೆ ಗೊತ್ತಿರುವುದಕ್ಕೆ ಹೇಗೆ ಸಾಧ್ಯ ಎನ್ನುವುದು ಹಲವರ ಪ್ರಶ್ನೆಯಾಗಿದೆ. ನವೀಕರಣ ಕಾಮಗಾರಿಯನ್ನು ಯಾವ ಇಲಾಖೆಯಾದರೂ ನಡೆಸಲಿ. ಅದರ ಬಗ್ಗೆ ಆಕ್ಷೇಪಣೆಗಳಿಲ್ಲ. ಆದರೆ, ರಂಗತಜ್ಞರು, ಬೆಳಕಿನ ವ್ಯವಸ್ಥೆ ಮಾಡುವ ತಂತ್ರಜ್ಞರ ಮಾರ್ಗದರ್ಶನ ಪಡೆದುಕೊಂಡರೆ ವೇದಿಕೆ, ಸೌಂಡ್ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ರಂಗ ವಿನ್ಯಾಸ ಸೇರಿದಂತೆ ಕಲಾಮಂದಿರದ ಒಳಾಂಗಣದ ನವೀಕರಣ ಕಾರ್ಯ ಉತ್ತಮವಾಗಿರುತ್ತದೆ ಎಂಬ ಅಭಿಪ್ರಾಯವನ್ನು ರಂಗಕರ್ಮಿಗಳು ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕವಾಗಿ ಬಹಿರಂಗಪಡಿಸಲಿ: ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದ ನವೀಕರಣ ಕಾಮಗಾರಿ ಹೇಗಿರಲಿದೆ. ಯಾವ್ಯಾವುದಕ್ಕೆ ಎಷ್ಟೆಷ್ಟು ಹಣ ಖರ್ಚು ಮಾಡಲಾಗುತ್ತಿದೆ. ಅಂದಾಜು ಪಟ್ಟಿಯಲ್ಲಿ ಯಾವ ಯಾವ ಕಾಮಗಾರಿಗಳಿಗೆ ಎಷ್ಟು ಹಣ ನಿಗದಿಪಡಿಸಲಾಗಿದೆ ಎನ್ನುವುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ. ಆಗ ನವೀಕರಣ ಕಾಮಗಾರಿಯಲ್ಲಿ ಎಲ್ಲಿ ಲೋಪಗಳಾಗುತ್ತಿವೆ ಎನ್ನುವುದು ಗೊತ್ತಾಗುತ್ತದೆ. ಯಾವುದೇ ವಿವರ ಬಹಿರಂಗಪಡಿಸದೆ ಕಾಮಗಾರಿಯನ್ನು ಕೈಗೊಳ್ಳುವುದಕ್ಕೆ ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಲಾ ಮಂದಿರ ನವೀಕರಣಕ್ಕೆ ೧.೬೦ ಕೋಟಿ ರು. ಹಣದ ಅಂದಾಜುಪಟ್ಟಿ ರೆಡಿಯಾಗಿದ್ದು, ಅದರಲ್ಲಿ ಸರ್ಕಾರ ೬೩ ಕೋಟಿ ರು. ಹಣ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸುವ ಬದಲು ಪೂರ್ತಿ ಹಣ ಬಿಡುಗಡೆಯಾದ ಬಳಿಕ ಒಂದೇ ಬಾರಿಗೆ ಸಮಗ್ರ ನವೀಕರಣ ಕಾರ್ಯ ಕೈಗೊಳ್ಳುವುದರಿಂದ ವೃಥಾ ಹಣ ಪೋಲಾಗುವುದನ್ನು ತಡೆಯಬಹುದು ಎಂದು ಹಲವರು ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. --------- ಕಲಾ ಮಂದಿರದ ಹಿನ್ನೆಲೆ ಮಂಡ್ಯ ನಗರದ ಹೃದಯಭಾಗದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರಕ್ಕೆ ೧೯೮೨ರಲ್ಲಿ ೧೭ ಲಕ್ಷ ರು. ಅಂದಾಜು ವೆಚ್ಚದಲ್ಲಿ ಅಡಿಗಲ್ಲು ಹಾಕಲಾಗಿತ್ತು. ಸ್ಥಳಕ್ಕೆ ಸಂಬಂಧಿಸಿದಂತೆ ಎಚ್.ಹೊಂಬೇಗೌಡ ಕಾನೂನು ಕಾಲೇಜಿನೊಂದಿಗೆ ೧೮ ವರ್ಷ ಕಾನೂನು ಸಮರ ನಡೆಸಿ ೨೯ ಜುಲೈ ೨೦೦೦ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಉದ್ಘಾಟನೆಗೊಳಿಸಿದ್ದರು. ೧೯೮೨ರಲ್ಲಿ ಮೈಸೂರಿನಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಅಂದಿನ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಪ್ರತಿ ಜಿಲ್ಲಾ ಕೇಂದ್ರದಲ್ಲೂ ಒಂದೊಂದು ಕಲಾ ಮಂದಿರವಿರಬೇಕೆಂಬ ಕನಸು ಕಂಡಿದ್ದರು. ಆ ಸಮಯದಲ್ಲಿ ಮಂಡ್ಯದಲ್ಲಿ ಕಲಾ ಮಂದಿರಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ೧೯೯೪ರಲ್ಲಿ ಮಂಡ್ಯದಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಉಳಿದಿದ್ದ ೨೪ ಲಕ್ಷ ರು. ಹಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರಕ್ಕೆ ೧೦ ಲಕ್ಷ ರು. ಹಣವನ್ನು ನೀಡಲಾಗಿತ್ತು. ------------- ಕಲಾ ಮಂದಿರ ನವೀಕರಣ ಹೆಸರಿನಲ್ಲಿ ಹಣ ದುರುಪಯೋಗಕ್ಕೆ ಅವಕಾಶ ನೀಡಬಾರದು. ಪಿಡಬ್ಲ್ಯುಡಿನವರೇ ಅಂದಾಜು ವೆಚ್ಚ ತಯಾರಿಸಿದ್ದಾರೆ. ಅವರೇ ಕಾಮಗಾರಿ ನಡೆಸಲಿ. ಆದರೆ, ರಂಗತಜ್ಞರು, ತಂತ್ರಜ್ಞರ ಮಾರ್ಗದರ್ಶನ ಪಡೆಯುವ ಅಗತ್ಯವಿದೆ. ಅವರಿಗೆ ಸೌಂಡ್ ಹಾಗೂ ಬೆಳಕಿನ ವ್ಯವಸ್ಥೆಯ ಪರಿಜ್ಞಾನವಿರುತ್ತದೆ. ಅರ್ಧಂಬರ್ಧ ಕಾಮಗಾರಿ ನಡೆಸುವುದಕ್ಕಿಂತ ೧.೬೦ ಕೋಟಿ ರು. ಹಣದಲ್ಲಿ ಸಮಗ್ರ ನವೀಕರಣ ಕಾರ್ಯ ಕೈಗೊಂಡರೆ ಉತ್ತಮ. - ಪ್ರೊ.ಬಿ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ ------------ ಕಲಾಮಂದಿರ ನವೀಕರಣಕ್ಕೆ ೬೩ ಲಕ್ಷ ರು. ಹಣ ಬಿಡುಗಡೆಯಾಗಿದೆ. ನಿರ್ಮಿತಿ ಕೇಂದ್ರದವರಿಂದ ನವೀಕರಣ ನಡೆಸಲು ಉದ್ದೇಶಿಸಿದ್ದೆವು. ಆದರೆ, ಜಿಲ್ಲಾಧಿಕಾರಿಗಳು ಪೂರ್ಣ ಹಣ ಬಂದ ನಂತರ ಒಟ್ಟಿಗೆ ಕಾಮಗಾರಿ ಕೈಗೊಂಡರೆ ಉತ್ತಮ ಎಂದು ಹೇಳುತ್ತಿದ್ದಾರೆ. ಹಾಗಾಗಿ ಇನ್ನೂ ಯಾವುದೂ ಅಂತಿಮ ತೀರ್ಮಾನವಾಗಿಲ್ಲ. - ಉದಯಕುಮಾರ್, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Share this article