ಲಿಂಗಸುಗೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ರಾಂಪೂರ ಏತ ನೀರಾವರಿ ಯೋಜನೆಯ ನಾಲೆಗಳಿಗೆ ನೀರು ಬಾರದೇ ಹತ್ತಿ, ತೊಗರಿ, ಮೆಣಸಿಕಾಯಿ ಬೆಳೆಗಳು ಒಣಗುವ ಆತಂಕ ರೈತರಲ್ಲಿ ಉಂಟಾಗಿದೆ. ತಾಲೂಕಿನ ಗುಡದನಾಳ, ಕಡರಕಲ್, ಯಲಗಲದಿನ್ನಿ, ಹೊನ್ನಳ್ಳಿ, ಮೇದಿನಾಪುರ, ಕೋಠಾ, ಗೌಡೂರು, ನಿಲೋಗಲ್, ಹಟ್ಟಿ, ಸರ್ಜಾಪುರ, ಕುಪ್ಪಿಗುಡ್ಡ, ಕಸಬಾ ಲಿಂಗಸುಗೂರು ಗ್ರಾಮಗಳ ಕಾಲುವೆಗಳಿಗೆ ನೀರು ಬಾರದೇ ಬಿತ್ತನೆ ಮಾಡಿದ ಹತ್ತಿ, ತೊಗರಿ, ಮೆಣಸಿನಕಾಯಿ ಬೆಳೆಗಳು ಒಣಗುವ ಭೀತಿ ಎದುರಾಗಿದೆ. ನಾಲೆಗಳ ಎರಡು ಬದಿಗಳು ಹಾಳಾಗಿವೆ. ನೀರು ಬಾರದೇ ಕೆಲವಡೆ ನಾಲೆಗಳು ಮುಚ್ಚಿ ಹೋಗಿವೆ ಇನ್ನೂ ಮುಖ್ಯನಾಲೆಯಲ್ಲಿ ಅತ್ಯಂತ ಕಡಿಮೆ ನೀರು ಹರಿಯುತ್ತಿದೆ. ಪರಿಣಾಮ ರೈತರಿಗೆ ಬೆಳೆಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ನೀರಿಗಾಗಿ ರಾತ್ರಿಯಿಡಿ ರೈತರು ನಿದ್ದೆಗೆಟ್ಟು ಕಾಯುತ್ತಿದ್ದಾರೆ. ಆದರೆ ರಾಂಪೂರ ಏತ ನೀರಾವರಿ ಯೋಜನೆ ಮುಖ್ಯನಾಲೆಗಳಿಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಮನೆ ಮಾಡಿದೆ. ಗುಡದನಾಳ, ಲಿಂಗಸುಗೂರು, ಕರಡಕಲ್, ಯಲಗಲದಿನ್ನಿ, ಮೇದಿನಾಪುರ, ಯರಡೋಣಿ, ಹೊನ್ನಳ್ಳಿಗಳನ್ನು ಅನೇಕರು ರಾಂಪೂರ ಏತ ನೀರಾವರಿ ಯೋಜನೆ ನಾಲೆಗಳಿಗೆ ನೀರು ಬರುತ್ತವೆ ಎಂದು ನಂಬಿದ ರೈತರು ಲಕ್ಷಾಂತರ ಹಣ ವ್ಯಯಿಸಿ ಮೆಣಸಿನಕಾಯಿ, ಹತ್ತಿ ಬಿತ್ತನೆ ಮಾಡಿದ್ದು ಬಿಸಿಲಿನ ತಾಪಕ್ಕೆ ಬೆಳಗಳು ಬಾಡುತ್ತಿವೆ. ಹೇಗಾದರೂ ಮಾಡಿ ಬೆಳೆ ರಕ್ಷಿಸಿಕೊಳ್ಳಲು ರೈತರು ರಾಂಪೂರ ಏತ ನೀರಾವರಿ ನೀರು ಹರಿಸಿ ಬೆಳೆಗಳು ಬೆಳೆಯಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ನೀರು ಕಳ್ಳತನ ಆರೋಪ: ರಾಂಪೂರ ಏತ ನೀರಾವರಿ ಯೋಜನೆಯಿಂದ ರೈತರ ಜಮೀನುಗಳಿಗೆ ಹರಿಸುವ ನೀರನ್ನು ಮುಖ್ಯನಾಲೆ ಆರಂಭದಲ್ಲಿಯೇ ರಾಂಪೂರ ಏತ ನೀರಾವರಿ ಯೋಜನೆ ಅಧಿಕಾರಿಗಳು ನಿರ್ವಹಣೆ ನಿರ್ಲಕ್ಷ್ಯದಿಂದ ಹೆಚ್ಚಿನ ಪ್ರಮಾಣದ ನೀರು ಅರಂಭದಲ್ಲಿಯೆ ಪಡೆಯುತ್ತಿದ್ದಾರೆ. ಅಧಿಕಾರಿಗಳಿಗೆ ಕೇಳಿದರೆ ರೈತರು ನೀರು ಮುಂದೆ ಬಿಡದೇ ರಾತೋರಾತ್ರಿ ಅಕ್ರಮ ನೀರು ಪಡೆಯುತ್ತಿದ್ದರೆ ನಾವೇನು ಮಾಡೋಣ ಎಂದು ಹೇಳಿದರೆ, ಇನ್ನೂ ಕೆಲವರು ಅಧಿಕಾರಿಗಳು ನೀರು ಮಾರಾಟ ಮಾಡುತ್ತಿದ್ದು ಇದರಿಂದ ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಪಡೆಯುವ ರೈತರ ಮೇಲೆ ಯಾವುದೇ ಕ್ರಮ ವಹಿಸುತ್ತಿಲ್ಲ ಇದರಿಂದ ಕೊನೆಯ ಭಾಗಕ್ಕೆ ನೀರು ಬರುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.