
ಕಾರವಾರ: ಜಿಲ್ಲೆಯಲ್ಲಿನ ಸಹಕಾರಿ ಸಂಘಗಳ ವ್ಯವಹಾರ ಮತ್ತು ಚಟುವಟಿಕೆಬಗ್ಗೆ ಹೆಚ್ಚಿನ ನಿಗಾವಹಿಸಿ ಯಾವುದೇ ಅವ್ಯವಹಾರಗಳು ನಡೆಯದಂತೆ ಆಗಾಗ್ಗೆ ತಪಾಸಣೆ ನಡೆಸಿ, ಸಾರ್ವಜನಿಕರ ಠೇವಣಿಗಳ ಮೊತ್ತಕ್ಕೆ ಭದ್ರತೆ ನೀಡುವಂತೆ ಜಿಲ್ಲೆಯ ಸಹಕಾರಿ ಸಂಘಗಳ ಉಪ ನಿಬಂಧಕರಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.
ಜಿಲ್ಲೆಯ ಮುಂಡಗೋಡ, ಹಳಿಯಾಳ ಮತ್ತಿತರ ತಾಲೂಕುಗಳಲ್ಲಿ ಖಾಸಗಿ ಫೈನಾನ್ಸ್‌ಗಳ ಹಾವಳಿ ಕುರಿತಂತೆ ದೂರುಗಳು ಬರುತ್ತಿದ್ದು, ಖಾಸಗಿ ಫೈನಾನ್ಸ್ ಗಳು ಆರ್.ಬಿ.ಐ. ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ನಡೆಯುತ್ತಿರುವ ಬಗ್ಗೆ ಮತ್ತು ಇವರು ವಿಧಿಸುವ ಬಡ್ಡಿ ದರಗಳ ಕುರಿತಂತೆ ಪರಿಶೀಲನೆ ನಡೆಸಬೇಕು. ಖಾಸಗಿ ಫೈನಾನ್ಸ್‌ಗಳು ಸೇರಿದಂತೆ ಹಣಕಾಸು ಸಂಸ್ಥೆಗಳಲ್ಲಿ ಸಾರ್ವಜನಿಕರು ಸುರಕ್ಷಿತ ವ್ಯವಹಾರ ನಡೆಸುವ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿನ ಖಾಸಗಿ ಫೈನಾನ್ಸ್ ಸಂಸ್ಥೆಗಳು ಆರ್.ಬಿ.ಐ. ಮಾರ್ಗಸೂಚಿಯಡಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿ, ಅನಧಿಕೃತ ಎಂದು ಕಂಡುಬಂದಲ್ಲಿ ಅಂತಹ ಸಂಸ್ಥೆಗಳ ವಿರುದ್ದ ತಕ್ಷಣ ಪ್ರಕರಣ ದಾಖಲು ಮಾಡುವಂತೆ ಸೂಚನೆ ನೀಡಿದರು.ಸಹಕಾರ ಸಂಘಗಳ ಅರ್ಥಿಕ ಅವ್ಯವಹಾರಗಳ ಕುರಿತು ಸಲ್ಲಿಕೆಯಾಗುವ ದೂರುಗಳನ್ನು ನಿಗದಿತ ಅವಧಿಯಲ್ಲಿ ವಿಲೇಗೊಳಿಸುವುದರ ಜೊತೆಗೆ ಅಂತಹ ಸಂಸ್ಥೆಗಳಲ್ಲಿ ಸಾರ್ವಜನಿಕರ ಠೇವಣಿ ಮೊತ್ತ ಸುರಕ್ಷಿತವಾಗಿರುವಂತೆ ಅಗತ್ಯ ಎಚ್ಚರವಹಿಸುವಂತೆ ಸೂಚಿಸಿದರು.