ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಗೆ ಸಹಕಾರ ನೀಡಿ

KannadaprabhaNewsNetwork |  
Published : Jul 04, 2026, 02:15 AM IST
ಪೋಟೊ3.3: ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ನಡೆದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಜಾಥಾ ನಡೆಯಿತು. | Kannada Prabha

ಸಾರಾಂಶ

ಪ್ರತಿಯೊಂದು ಮನೆಗೂ ಮೂರು ಬಾರಿ ಭೇಟಿ ನೀಡಲಿರುವ ಅಧಿಕಾರಿಗಳಿಗೆ ಸಾರ್ವಜನಿಕರು ಅಗತ್ಯ ದಾಖಲೆ ಹಾಗೂ ಮಾಹಿತಿ ಒದಗಿಸಿ ಸಹಕರಿಸಬೇಕು

ಕೊಪ್ಪಳ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಬೂತ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಸಂಗ್ರಹಿಸಲಿದ್ದು, ಪ್ರತಿಯೊಬ್ಬ ಅರ್ಹ ಮತದಾರರೂ ಕಡ್ಡಾಯವಾಗಿ ಅಗತ್ಯ ಮಾಹಿತಿ ಹಾಗೂ ಎಸ್‌ಐಆರ್ ಅರ್ಜಿ ಸಲ್ಲಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಮಹೇಶ್ ಹೇಳಿದರು.

ತಾಲೂಕಿನ ಅಳವಂಡಿ ಗ್ರಾಮದಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ನಡೆದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಮತದಾರರ ಪಟ್ಟಿಗೆ ಹೊಸದಾಗಿ ಅರ್ಹರನ್ನು ಸೇರ್ಪಡೆಗೊಳಿಸುವುದು, ಮರಣ ಹೊಂದಿರುವವರು, ಸ್ಥಳಾಂತರಗೊಂಡಿರುವವರು, ನಕಲು ಹೆಸರುಗಳು ಹಾಗೂ ಇತರ ಅನರ್ಹ ಮತದಾರರ ವಿವರಗಳನ್ನು ಪರಿಶೀಲಿಸಿ ಪಟ್ಟಿ ನಿಖರಗೊಳಿಸುವ ಉದ್ದೇಶದಿಂದ ಈ ವಿಶೇಷ ಪರಿಷ್ಕರಣೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜೂ.30ರಿಂದ ಜುಲೈ 29ರವರೆಗೆ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರ ಪರಿಶೀಲಿಸಲಿದ್ದಾರೆ. ಪ್ರತಿಯೊಂದು ಮನೆಗೂ ಮೂರು ಬಾರಿ ಭೇಟಿ ನೀಡಲಿರುವ ಅಧಿಕಾರಿಗಳಿಗೆ ಸಾರ್ವಜನಿಕರು ಅಗತ್ಯ ದಾಖಲೆ ಹಾಗೂ ಮಾಹಿತಿ ಒದಗಿಸಿ ಸಹಕರಿಸಬೇಕು. ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಇದು ಉತ್ತಮ ಅವಕಾಶವಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.

ಜಾಗೃತಿ ಜಾಥಾದಲ್ಲಿ ಅಳವಂಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಮತದಾನದ ಮಹತ್ವ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಕಾಲೇಜಿನಿಂದ ಆರಂಭವಾದ ಜಾಥಾ ಗ್ರಾಮದ ಪ್ರಮುಖ ಬೀದಿ, ಅಗಸಿ ಮಾರ್ಗ, ಓಣಿಗಳು, ಬಸವೇಶ್ವರ ವೃತ್ತ ಹಾಗೂ ಬನ್ನಿಕಟ್ಟೆವರೆಗೆ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿ ಬಳಿಕ ಕಾಲೇಜು ಆವರಣದಲ್ಲಿ ಸಮಾಪ್ತಿಯಾಯಿತು.

ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ನವೀನ ಇನಾಮದಾರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೊಟ್ರಪ್ಪ ಅಂಗಡಿ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಅಂಗನವಾಡಿ ಮೇಲ್ವಿಚಾರಕಿ ರಹಮತ್‌ಬೀ, ಉಪನ್ಯಾಸಕ ಅಮರೇಶ, ಎಸ್.ಎಸ್. ಅಂಗಡಿ, ಗ್ರಾಪಂ ಕಾರ್ಯದರ್ಶಿ ಬಸವರಾಜ, ಸಂಜೀವಿನಿ ಯೋಜನೆಯ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಕೊಟ್ಟ ಮುಂಗಾರು; ಗುರ್ಜಿ ಆಟ, ಪ್ರಾರ್ಥನೆ
ಸೌರ ಶಕ್ತಿ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿ: ಶಾಸಕ ಭೀಮಣ್ಣ