ಕಂಪ್ಲಿ: ತಾಲೂಕಿನ ಜವುಕು ಗ್ರಾಮದಲ್ಲಿ ಕಳೆದ ಹದಿನೈದು ದಿನಗಳಿಂದ ಕೋತಿಯೊಂದು ಗ್ರಾಮಸ್ಥರಿಗೆ ಭಾರಿ ತೊಂದರೆ ಉಂಟು ಮಾಡುತ್ತಿದೆ. ಎರಡು ದಿನಗಳ ಅವಧಿಯಲ್ಲಿ ಮೂವರಿಗೆ ಕಚ್ಚಿ ಗಾಯಗೊಳಿಸಿದ್ದು, ಗ್ರಾಮಸ್ಥರು ಆತಂಕದಲ್ಲಿ ಓಡಾಡುವ ಪರಿಸ್ಥಿತಿ ಉಲ್ಬಣವಾಗಿದೆ.
ಸೋಮವಾರ ಎಚ್.ಎಂ. ಸುರೇಶ್ ಎಂಬವರ ಬಲಗೈ ರಟ್ಟೆ ಬಳಿ ಕೋತಿ ಕಚ್ಚಿ ಗಾಯಗೊಳಿಸಿದ್ದು, ಅದೇ ದಿನ ಪಾಲಾಕ್ಷಿ ಎಂಬಾತನ ಮೇಲೆ ದಾಳಿ ಮಾಡಿದೆ. ಮಂಗಳವಾರ ನೆಲ್ಲೂಡಿ ತಿಮ್ಮಯ್ಯ ಅವರ ಎಡಗಾಲಿಗೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ.ಅದೇ ದಿನ ಸಂಜೆ ಬೈಕ್ ನಿಲ್ಲಿಸಿ ಮನೆ ಒಳಗೆ ಹೋಗುತ್ತಿದ್ದ ಎ. ಲೋಕೇಶ್ ಎಂಬಾತನ ಎಡ ಮೊಣಕೈಗೆ ಬಲವಾಗಿ ಕಚ್ಚಿದ ಪರಿಣಾಮ ಆತನಿಗೆ ಗಂಭೀರವಾದ ಗಾಯಗಳಾಗಿವೆ.
ಈ ಕುರಿತು ಲೋಕೇಶ್ ಮಾತನಾಡಿ, ಮೆಟ್ರಿ ಆಸ್ಪತ್ರೆಗೆ ಹೋಗಿ ಪ್ರಾಥಮಿಕ ಚಿಕಿತ್ಸೆ ಪಡೆದು ಚುಚ್ಚುಮದ್ದು ಹಾಕಿಸಿಕೊಂಡೆ. ನಂತರ ಶ್ರೀರಾಮರಂಗಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ಹೋಗಿ ಹೊಲಿಗೆ ಹಾಕಿಸಿಕೊಂಡು ಬಂದಿದ್ದೇನೆ. ಕೋತಿಯ ಹಾವಳಿ ಊರಿಗೇ ಸಂಕಟ ತಂದಿದೆ. ಮಕ್ಕಳು ಶಾಲೆಗೆ ಹೋಗುವುದಕ್ಕೂ ಭಯ ಪಡುವಂತಾಗಿದೆ.ಸುಮಾರು ಹದಿನೈದು ದಿನಗಳಿಂದ ಗ್ರಾಮದಲ್ಲಿ ಕರಿ ಕೋತಿ ಉಪಟಳ ಹೆಚ್ಚಾಗಿದ್ದು, ಬೀದಿಗಳಲ್ಲಿ ಸಂಚರಿಸುತ್ತಿರುವವರಿಗೆ, ಮನೆಯಲ್ಲಿ ಕೂರುವ ಹಿರಿಯರು, ಹೊಲಕ್ಕೆ ಹೋಗುವ ರೈತರು, ಶಾಲಾ ಮಕ್ಕಳು ಭಯದ ವಾತಾವರಣದಲ್ಲಿ ಓಡಾಡುವ ಪರಿಸ್ಥಿತಿ ಉಲ್ಬಣವಾಗಿದೆ. ಈ ಕುರಿತು ತಾಲೂಕು ಪಂಚಾಯಿತಿ ಇಒ ಆರ್.ಕೆ. ಶ್ರೀಕುಮಾರ್ ಹಾಗೂ ಪಿಡಿಒ ಬೀರಲಿಂಗ ಅವರ ಗಮನಕ್ಕೆ ತಂದಿದ್ದು, ಕರಿ ಕೋತಿಯನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಾದ ಎನ್. ಬಸವರಾಜ, ರಾಜನಗೌಡ್ರು, ಹಾಲ್ವಿ ಕುಮಾರಸ್ವಾಮಿ, ಜೆ. ಜಡೆಪ್ಪ, ನೀರಗಂಟಿ ವೀರೇಶ, ಸಿ. ಯಂಕಪ್ಪ, ಬಿ. ತಿಮ್ಮಾರೆಡ್ಡಿ, ಜೆ.ಸಿ. ಬಸವರಾಜ, ಅಂಗಡಿ ನಾಗರಾಜ ಒತ್ತಾಯಿಸಿದ್ದಾರೆ.