ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರಕ್ಕೆ ಅಡಿಗಲ್ಲು ಸಮಾರಂಭ ಉದ್ಘಾಟನೆಕನ್ನಡಪ್ರಭ ವಾರ್ತೆ ಹೊನ್ನಾವರ
ಕನ್ನಡ ಭಾಷೆಯನ್ನು ಉಳಿಸುವಲ್ಲಿ ಯಕ್ಷಗಾನದ ಪಾತ್ರ ದೊಡ್ಡದು. ಕೆರೆಮನೆ ರಂಗಮಂದಿರದಲ್ಲಿ ಯಕ್ಷಗಾನದ ಜೊತೆಗೆ ಉಳಿದೆಲ್ಲ ಕಲೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ನಡೆಯುತ್ತಿದೆ ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಹೇಳಿದರು.ತಾಲೂಕಿನ ಗುಣವಂತೆಯಲ್ಲಿ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರ ನವೀಕರಣ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಗಂಡುಮೆಟ್ಟಿನ ಕಲೆ ಎನಿಸಿಕೊಂಡಿರುವ ಯಕ್ಷಗಾನ ಕಲೆಯು ಇಂದು ನಿರ್ಲಕ್ಷಕ್ಕೆ ಒಳಗಾಗುತ್ತಿದೆ. ಯಕ್ಷಗಾನದ ಪರಿಪೂರ್ಣ ಅಧ್ಯಯನ ನಡೆಯಬೇಕು. ಕೆರೆಮನೆ ರಂಗಮಂದಿರದಲ್ಲಿ ಎಲ್ಲಾ ಕಲಾಪ್ರಕಾರಗಳಿಗೆ ಮನ್ನಣೆ ಸಿಗುತ್ತಿದ್ದು ಮುಂದೆ ಇನ್ನೂ ಹೆಚ್ಚಿನ ಕಲಾ ಚಟುವಟಿಕೆಗಳು ನಡೆಯಲಿ ಎಂದರು.
ಹೊರನಾಡು ಕ್ಷೇತ್ರದ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಶಿ ಮಾತನಾಡಿ, ಮನುಷ್ಯನ ಕೆಟ್ಟತನದ ಪರಿವರ್ತನೆಗೆ ಸ್ಪಷ್ಟವಾದ ಬೆಳಕು ಮತ್ತು ದಿಗ್ದರ್ಶನವನ್ನು ಕಲೆ ನೀಡುತ್ತದೆ. ಜನರು ಮನರಂಜನೆಯನ್ನು ಮಾತ್ರ ಸ್ವೀಕಾರ ಮಾಡುವ ಮನೋಭಾವನೆಯು ಬಂದಾಗ ಕಲೆಯ ಮೂಲ ಸತ್ವಕ್ಕೆ ಧಕ್ಕೆಯಾಗುತ್ತದೆ. ಚಪ್ಪಾಳೆಗಾಗಿ ವೇಷ ಮಾಡದೇ ಕಲೆಯ ಅಂತಃಸತ್ವವನ್ನು ಉಳಿಸುವ ಕೆಲಸ ಯಕ್ಷಗಾನ ಕಲಾವಿದನಿಂದ ಆಗಬೇಕು. ಕೆರೆಮನೆ ರಂಗಮಂದಿರದಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಚಿವ ಮಂಕಾಳ ವೈದ್ಯ ಮಾತನಾಡಿ, ಎಂಥಹ ಕೆಟ್ಟ ಮನುಷ್ಯನನ್ನೂ ಒಳ್ಳೆಯವನನ್ನಾಗಿ ಮಾಡುವ ಶಕ್ತಿ ಯಕ್ಷಗಾನಕ್ಕಿದೆ. ನಾಲ್ಕು ತಲೆಮಾರಿನಿಂದ ಯಕ್ಷಗಾನವನ್ನು ಉಳಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಶಿಕ್ಷಣಕ್ಕೆ ಎಷ್ಟು ಮಹತ್ವವಿದೆಯೋ ಯಕ್ಷಗಾನಕ್ಕೂ ಅಷ್ಟೇ ಮಹತ್ವವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಪೋಕ್ ಲ್ಯಾಂಡ್ ಅಧ್ಯಕ್ಷ ಜಯರಾಜನ್ ಮಾತನಾಡಿದರು.ಕಲಾಪೋಷಕ ವೆಂಕಟ್ರಮಣ ಹೆಗಡೆ ಕವಲಕ್ಕಿ, ಸಹಕಾರಿ ಧುರೀಣ ಗಣಪಯ್ಯ ಗೌಡ, ಲಕ್ಷ್ಮೀನಾರಾಯಣ ಕಾಶಿ, ನರಸಿಂಹ ಭಟ್ ಕೊಲ್ಲೂರು, ಎನ್. ರಾಮಚಂದ್ರ, ಶಾಮಸುಂದರ ಭಾಗವತ ಇದ್ದರು. ಕೆರೆಮನೆ ಶಿವಾನಂದ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕೆರೆಮನೆ ಶ್ರೀಧರ ಹೆಗಡೆ ವಂದಿಸಿದರು.