ಜಿ.ಡಿ. ಹೆಗಡೆ
ಬೇಸಿಗೆ ಆರಂಭವಾಗುತ್ತಿದ್ದಂತೆ ಉತ್ತರ ಕನ್ನಡದ ಕಾಡಂಚಿನ ಗ್ರಾಮಗಳಲ್ಲಿ ಮಂಗನ ಕಾಯಿಲೆ (ಕೆಎಫ್ಡಿ) ಆತಂಕ ಆರಂಭವಾಗಿದೆ. ಜನವರಿ ೨೦೨೪ರಿಂದ ಈ ವರೆಗೆ ಮೂರು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.
ಸಿದ್ದಾಪುರ ತಾಲೂಕಿನ ಬಿಳಗಿ, ಹಲಗೇರಿ, ಕೊರ್ಲಕೈ ಭಾಗದ ೩ ಜನರಿಗೆ ಈ ಬಾರಿ ಸೋಂಕು ಕಾಣಿಸಿಕೊಂಡಿದ್ದು, ಮೂವರು ಚೇತರಿಸಿಕೊಳ್ಳುತ್ತಿದ್ದಾರೆ. ಸಿದ್ದಾಪುರ ತಾಲೂಕಿನ ಬಿಳಗಿಯಲ್ಲಿ ಒಂದು ಮಂಗ ಮೃತಪಟ್ಟಿದೆ. ೨೦೨೩ರಲ್ಲಿ ಕೆಎಫ್‌ಡಿ ಸೋಂಕು ಕಂಡುಬಂದಿರಲಿಲ್ಲ. ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಮಲೆನಾಡಿನ ಪ್ರದೇಶದಲ್ಲಿ ಜನವರಿಯಲ್ಲೇ ಬಿಸಿಲು ಬೀಳಲು ಆರಂಭವಾಗಿದೆ. ಹೀಗಾಗಿ ಮಂಗನ ಕಾಯಿಲೆ ಆತಂಕ ಮತ್ತಷ್ಟು ಹೆಚ್ಚು ಮನೆ ಮಾಡಿದೆ. ಬೇಸಿಗೆಯ ಒಂದೆರಡು ತಿಂಗಳು ಮಾತ್ರ ಈ ವೈರಾಣು (ಉಣ್ಣೆ) ಜೀವಿತಾವಧಿಯಾಗಿದ್ದು, ಮಳೆ ಬೀಳುತ್ತಿದ್ದಂತೆ ಉಣ್ಣೆ(ಉಣಗು) ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದರಿಂದ ಕಾಯಿಲೆ ಆತಂಕ ಇರುವುದಿಲ್ಲ.ಪ್ರತಿ ವರ್ಷವೂ ಜನವರಿಯಿಂದ ಏಪ್ರಿಲ್ ಅವಧಿಯಲ್ಲಿ ಸಿದ್ದಾಪುರ, ಹೊನ್ನಾವರ ತಾಲೂಕಿನ ಕಾಡಂಚಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದು, ಉರುವಲು ತರಲು, ಜಾನುವಾರು ಮೇಯಿಸಲು, ಸೊಪ್ಪು ತರಲು ಹೀಗೆ ವಿವಿಧ ಕಾರಣಗಳಿಗೆ ಅರಣ್ಯಕ್ಕೆ ತೆರಳುವವರಿಗೆ ಉಣ್ಣೆ ಕಡಿದು ಜ್ವರದಿಂದ ಬಳಲುತ್ತಾರೆ. ನಿರ್ಲಕ್ಷ್ಯ ಮಾಡಿದರೆ ಜೀವಕ್ಕೆ ಅಪಾಯವಾಗುತ್ತದೆ.
೨೦೦೫, ೨೦೦೭ರಲ್ಲಿ ತಲಾ ೨ ಜನರಲ್ಲಿ ರೋಗ ಖಚಿತಪಟ್ಟಿತ್ತು. ೨೦೦೮ರಲ್ಲಿ ೧೨ ಜನರಲ್ಲಿ ಸೋಂಕು ಕಂಡಿತ್ತು. ೨೦೧೦ ಎರಡು ಜನರಲ್ಲಿ ರೋಗ ಕಾಣಿಸಿಕೊಂಡಿದ್ದು, ಒಬ್ಬರು ಮೃತಪಟ್ಟಿದ್ದರು. ೨೦೧೨ರಲ್ಲಿ ೮ ಜನರಲ್ಲಿ ಸೋಂಕು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದರು. ೨೦೧೩ರಲ್ಲಿ ೧೭ ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ೨೦೧೯ರಲ್ಲಿ ೮೬ ಜನರಲ್ಲಿ ಕೆಎಫ್‌ಡಿ ಪಾಸಿಟಿವ್ ಬಂದಿದ್ದು, ೩ ಜನರು ಸೋಂಕಿನಿಂದ ಮೃತಪಟ್ಟಿದ್ದರು. ೨೦೨೦ರಲ್ಲಿ ಒಬ್ಬರು ಮೃತಪಟ್ಟಿದ್ದರು.