ಕನ್ನಡಪ್ರಭ ವಾರ್ತೆ ಮಂಗಳೂರುಭಾರತೀಯ ಪ್ರಜೆಗಳಿಗೆ ಸ್ವರಕ್ಷಣೆ ಜತೆಗೆ ಸಮಾಜದ ರಕ್ಷಣೆಯ ಜವಾಬ್ದಾರಿ ಅತ್ಯಗತ್ಯ. ಸದೃಢ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ನಾಗರಿಕ ಬಂದೂಕು ತರಬೇತಿ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಮಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಉಮೇಶ್ ಹೇಳಿದರು.
ನಾಗರಿಕ ಬಂದೂಕು ತರಬೇತಿಯಲ್ಲಿ ಬಂದೂಕು ನಿರ್ವಹಣೆ, ಗುರಿ, ಲೋಡಿಂಗ್ ಬಗ್ಗೆ ತರಬೇತಿ ಹಾಗೂ ಮಾಹಿತಿ ನೀಡುವುದರ ಜತೆಗೆ ನಾಗರಿಕನಿಗೆ ತನ್ನ ಜವಾಬ್ದಾರಿ ನೆನಪಿಸುವ ಕೆಲಸವನ್ನೂ ಮಾಡಲಾಗುತ್ತದೆ. ಅಪರಾಧ ಚಟುವಟಿಕೆ ತಡೆಯುವುದು ಪೊಲೀಸ್ ಇಲಾಖೆಯ ಜವಾಬ್ದಾರಿ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಂದೂಕು ತರಬೇತಿ ಪಡೆದ ಶಿಬಿರಾರ್ಥಿಗಳು ಪೋಲಿಸ್ ಇಲಾಖೆ ಜತೆಗೆ ಕೈಜೋಡಿಸಬೇಕು ಎಂದರು.
ನಗರ ಸಶಸ್ತ್ರ ಮೀಸಲು ಪಡೆಯ ಎಸಿಪಿ ಎಂ.ಎ.ಉಪಾಸೆ ಮಾತನಾಡಿ, ಒಂದು ವಾರ ನಡೆಯುವ ನಾಗರಿಕ ಬಂದೂಕು ತರಬೇತಿಯು ಕೇವಲ ಬಂದೂಕು ಪರವಾನಗಿ ಪಡೆಯಲು ನೀಡುವುದಲ್ಲ. ತುರ್ತು ಸಂದರ್ಭ ನಾಗರಿಕರ ಸ್ವರಕ್ಷಣೆಗಾಗಿ ತರಬೇತಿ ನೀಡುವುದಾಗಿದೆ. ಈ ಬಾರಿ 25ಕ್ಕೂ ಅಧಿಕ ಸಂಖ್ಯೆಯಲ್ಲಿ ನಾಗರಿಕರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಉತ್ತಮ ಬೆಳವಣಿಗೆ ಎಂದರು.ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕ ಮೂರ್ತಿ ನಾಯಕ್, ಪೊಲೀಸ್ ಉಪನಿರೀಕ್ಷಕ ಗಣೇಶ್, ಹೆಡ್ ಕಾನ್‌ಸ್ಟೆಬಲ್ ಪ್ರಮೋದ್ ಶೆಟ್ಟಿ, ಎಎಸ್‌ಐ ರೆಜಿ ಥಾಮಸ್ ಇದ್ದರು.