ಕನ್ನಡಪ್ರಭ ವಾರ್ತೆ ಮೈಸೂರು
ಸಮಾಜ ಸೇವೆ, ಶಿಕ್ಷಣ, ಯಜ್ಞ ಇವುಗಳ ಜೊತೆ ಮಠ ಮಾನ್ಯಗಳಿಗೆ ಗ್ರಾಮಸೇವೆ, ಅಭಿವೃದ್ಧಿ ಬಗ್ಗೆ ಚಿಂತನೆ ಕಡಿಮೆ. ಆದ್ದರಿಂದ ಮಠ ಮಾನ್ಯಗಳು ಸಮಾಜದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲೆಯ ಬಯಲು ರಂಗಮಂದಿರದಲ್ಲಿ ಶುಕ್ರವಾರ ಶ್ರೀರಾಮಕೃಷ್ಣ ಆಶ್ರಮದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರು ಸಮಾಜ ಯಾರನ್ನು ಅಲಕ್ಷ್ಯ, ಅಗೌರವದಿಂದ ಕಾಣುವುದೋ ಅವರನ್ನು ದೇವರೆಂದು ಭಾವಿಸಿ ಎಂದಿದ್ದಾರೆ. ಈ ಸಂದೇಶ, ಆದೇಶ ಇವತ್ತಿನ ದಿನಕ್ಕೂ ಮಹತ್ವಪಡೆದಿದೆ. ಏಕೆಂದರೆ ಅವರ ತತ್ತ್ವದಂತೆ ಪ್ರತಿ ಜೀವಿಯಲ್ಲಿಯೂ ನಾವು ದೇವರನ್ನು ಕಾಣಬೇಕು. ಆಶ್ರಮದ ಕಾರ್ಯಕ್ರಮಗಳ ಮೂಲಕ ಚಾರಿತ್ರ್ಯ ನಿರ್ಮಾಣವಾಗಿದೆ. ಒತ್ತಡ ಕಡಿಮೆಗೊಳಿಸಲು ಏನು ಮಾಡಬೇಕು ಎಂಬುದಕ್ಕೆ ಮೈಸೂರು ಆಶ್ರಮ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಯಾವ ಆಶ್ರಮ, ಸಂಘಟನೆ ನೈತಿಕತೆ ಬೋಧಿಸುವುದಿಲ್ಲವೋ ಯಾವ ಸಂಸ್ಥೆ ಸಮಾಜದ ಹಿತ ಬಯಸುವುದಿಲ್ಲವೋ, ಆ ಸಂಸ್ಥೆಯಿಂದ ಏನೂ ಉಪಯೋಗವಿಲ್ಲ ಎಂದರು.ಈ ಆಶ್ರಮ ಕುವೆಂಪು ಹೇಳಿದಂತೆ ಸರ್ವ ಜನಾಂಗದ ತೋಟದಂತಿದೆ. ಈ ಸಂದರ್ಭದಲ್ಲಿ ಸ್ವಾಮೀಜಿಗೆ ಎಲ್ಲರ ಪರವಾಗಿ ಅಭಿನಂದಿಸುತ್ತೇನೆ. ವೈಯಕ್ತಿಕವಾಗಿ ಪರಮಹಂಸರು, ವಿವೇಕಾನಂದರು ಭಾವನಾತ್ಮಕ ಸಂಬಂಧ. ನಮ್ಮ ಅಜ್ಜ ಪರಮಹಂಸರ ಸಂದೇಶ ಪ್ರಭುದ್ಧ ಭಾರತವನ್ನು ಬಯಸಿದ್ದರು. ಈ ಆಶ್ರಮ ನಮ್ಮ ತಂದೆ ಮೇಲೆ ಬಹುದೊಡ್ಡ ಪ್ರಭಾವ ಬೀರಿತು. ತತ್ತ್ವ ಸಿದ್ಧಾಂತ, ಚೌಕಟ್ಟಿನ ಬಗ್ಗೆ ಗೌರವ ಹೊಂದಿದ್ದರು. ಪರಮಹಂಸರ ಹೆಸರಿನಲ್ಲಿ ಗ್ರಾಮದಲ್ಲಿ ಶಾಲೆ ಪ್ರಾರಂಭಿಸಿದ್ದಾಗಿ ಅವರು ಹೇಳಿದರು.
ಗೌತಮಾನಂದಜೀ ಅವರು ಈ ಸ್ಥಾನಕ್ಕೇರಿರುವುದು ನಮಗೆ ಗರ್ವ ತಂದಿದೆ. ಈ ವೇಳೆಯಲ್ಲಿ ಶತಮಾನೋತ್ಸವ ಖುಷಿ ಹೆಚ್ಚಿಸಿದೆ. ಇವರನ್ನು ರೈಲಿನಲ್ಲಿ ಮೊದಲು ಭೇಟಿಯಾಗಿದ್ದೆ. ನನ್ನ ತಲೆಯಲ್ಲಿದ್ದ ಸಂಶಯಗಳನ್ನು ಪರಿಹರಿಸಿಕೊಂಡಿದ್ದೆ. ಹದಿನೈದು ನಿಮಿಷ ಜ್ಞಾನ ದೀಕ್ಷೆ ನೀಡಿದರು ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.ಶ್ರೀರಾಮಕೃಷ್ಣ ಆಶ್ರಮದ ಶತವಾನೋತ್ಸವದಲ್ಲಿ ಪಾಲ್ಗೊಳ್ಳುವುದೇ ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ. ನೂರು ವರ್ಷಗಳಲ್ಲಿ ಏನು ಸಾಧಿಸಿದೆ, ಎಷ್ಟು ಶ್ರಮ ವಹಿಸಿದೆ. ಸೇವಾಯಜ್ಞವೇ ಇಲ್ಲಿನ ಪ್ರಮುಖ ಅಂಶ. ಈ ಆಶ್ರಮ ವಿವೇಕಾನಂದರ ಆಶಯ ಅನುಷ್ಠಾನಗೊಳಿಸಿದೆ. ವೈಯಕ್ತಿಕ ಅಭಿಪ್ರಾಯದಲ್ಲಿ ಕುವೆಂಪು ಅವರು ಇಷ್ಟು ಎತ್ತರಕ್ಕೆ ಏರಬೇಕಾದರೆ ಆಶ್ರಮದ ಪ್ರಭಾವ, ಅನುಭವ, ಭಾಷೆ ಪ್ರಬುದ್ಧಗೊಳಿಸಿದೆ. ಕುವೆಂಪು ಅವರನ್ನು ರಾಷ್ಟ್ರಕವಿ ಮಾಡುವಲ್ಲಿ ಆಶ್ರಮದ ಕೊಡುಗೆ ಮಹತ್ತರವಾದುದು. ವಿವೇಕಾನಂದರು ಬಡವ ದೇವೋಭವ, ರೋಗಿ, ಪಾಪಿ ದೇವೋಭವ ಎಂದಿರುವುದಾಗಿ ಹೇಳಿದರು.
ಅಂಚೆ ಲಕೋಟೆ ಬಿಡುಗಡೆಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ವಿವೇಕಾನಂದರು ಹಾಗೂ ಪರಮಹಂಸರನ್ನು ಭೇಟಿಯಾಗಿದ್ದರು. ಅಸ್ಪೃಶ್ಯತೆಯನ್ನು ವಿವೇಕಾನಂದರು ನಿಕೃಷ್ಟವಾಗಿ ಖಂಡಿಸಿದ್ದರು. ಮಾನವ ಸಮಾಜ ನಿರ್ಮಾಣದ ಸ್ಪಷ್ಟ ಆಶಯ ಅವರಲ್ಲಿತ್ತು. ಸ್ವಾಮಿ ವಿವೇನಾಂದರ ಗುರುಗಳು ಪರಮಹಂಸರು ಆಧ್ಯಾತ್ಮಿಕ ಪ್ರೇರಣಾ ಶಕ್ತಿಯಾಗಿದ್ದಾರೆ. 19ನೇ ಶತಮಾನದಲ್ಲಿ ಈ ಸಂಸ್ಥೆ ಆರಂಭವಾಗಿದ್ದು. ತಮ್ಮ ಸ್ವಂತ ಮೋಕ್ಷ ಹಾಗೂ ಜಗತ್ತಿನ ಕಲ್ಯಾಣ ಧ್ಯೇಯ, ತಾತ್ವಿಕ ನೆಲೆಗಟ್ಟಿನಲ್ಲಿ ಸಂಸ್ಥೆ ಆರಂಭವಾಗಿದೆ ಎಂದರು.ಬಳಿಕ ಶಿಕ್ಷಣ, ಆರೋಗ್ಯ, ಸಮಾಜ ಸೇವೆ, ಆಧ್ಯಾತ್ಮಿಕ, ಪರ್ಸನಾಲಿಟಿ, ಇಮೇಜ್ ಬಿಲ್ಡಿಂಗ್ ವಿವಿಧ ಸೇವೆ. ಈಗ ಎರಡು ಪ್ರಮುಖ ಕ್ಷೇತ್ರಗಳಾಗಿ ಒಂದು ಮಠ ಹಾಗೂ ಮಿಷನ್ ಆಗಿ. ಆಧ್ಯಾತ್ಮ ಮತ್ತು ಧಾರ್ಮಿಕ ಹಾಗೂ ಸಮಾಜ ಸೇವೆಯಾಗಿದೆ ಎಂದು ಹೇಳಿದರು.
ಶಿಕ್ಷಣ ಹುಲಿಯ ಹಾಲು ಕುಡಿದಂತೆ. ಕುಡಿದವರು ಘರ್ಜಿಸಲೇಬೇಕು. ಸೈದ್ಧಾಂತಿಕ, ಸಾಮಾಜಿಕ, ಶೈಕ್ಷಣಿಕವಾಗಿ ನಡೆದು ಬಂದ ಹಾದಿ ಪ್ರಶಂಸನೀಯ. ಮಕ್ಕಳಲ್ಲಿ, ಯುವಕರಲ್ಲಿ ನೈತಿಕ, ಮೌಲ್ಯಾಧಾರಿತ ಶಿಕ್ಷಣ ದೋರಕಬೇಕು ಎಂಬ ಆಶಯದೊಂದಿಗೆ ರಾಮಕೃಷ್ಣ ಆಶ್ರಮದಲ್ಲಿ ಅಸ್ಪೃಶ್ಯರು, ಪೌರಕಾರ್ಮಿಕರ ಮಕ್ಕಳಿಗೂ ಕಡಿಮೆ ದರದಲ್ಲಿ ಶಿಕ್ಷಣ ನೀಡಲಾಗಿದೆ ಎಂದರು.ವಿವೇಕಾನಂದರು ಹಾಗೂ ಪರಮಹಂಸರು ಶ್ರೇಷ್ಠ ಸಂತರು. 1985ರಲ್ಲಿ ಮೊದಲ ಬಾರಿಗೆ ಶಾಸಕನಾದಾಗ ವಿಧಾನಸಭೆಯಲ್ಲಿ ಇದೇ ಮಾತನಾಡಿದ್ದೆ. ಈ ಸಂಸ್ಥೆ ಇನ್ನೂ ಹೆಚ್ಚಿನ ಸೇವೆ ನೀಡಲು ಎಲ್ಲರ ಸಹಕಾರ ಅಗತ್ಯ. ನಮ್ಮ ಮಕ್ಕಳು ಏನೇ ಆಗಲಿ ಉತ್ತಮ ಪ್ರಜೆಗಳಾಗಬೇಕು. ಸಾಂಸ್ಕೃತಿಕ, ನೈತಿಕ ನೆಲೆಗಟ್ಟಿನಲ್ಲಿ ಬೆಳೆಯಬೇಕು ಎಂದರು.
ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಮೂಲ ಉದ್ದೇಶವಿಟ್ಟುಕೊಂಡು ಧ್ಯೇಯ ಸಾಧನೆಯಲ್ಲಿ ಎಷ್ಟು ಸಾಗಿದ್ದೇವೆ ಎಂಬ ಸಿಂಹಾವಲೋಕನ ಸಂದರ್ಭವಿದು. ಶೈಕ್ಷಣಿಕ, ಸಾಹಿತ್ಯ, ಚಾರಿತ್ರ್ಯ ನಿರ್ಮಾಣ, ಗ್ರಾಮೀಣಾಭಿವೃದ್ಧಿಯಲ್ಲಿ ಸೇವೆ, ಮುಖ್ಯವಾಗಿ ಧಾರ್ಮಿಕ ಸೇವೆಯಲ್ಲಿ ಆಶ್ರಮವನ್ನು ಗುರುತಿಸಲಾಗುತ್ತದೆ. ಅನನ್ಯವಾದ ಆಧ್ಯಾತ್ಮಿಕ ಸೇವೆ ಸಲ್ಲಿಸಿಕೊಂಡು ಬಂದಿದೆ ಎಂದರು.1890ರಲ್ಲಿ ವಿವೇಕಾನಂದರು ಪರಿಚಾರಕರಾಗಿ ಮೈಸೂರಿಗೆ ಬಂದು ಕೆಲ ದಿನಗಳ ಕಾಲ ತಂಗಿದ್ದ ಪವಿತ್ರ ತಾಣ, ಚಾಮುಂಡೇಶ್ವರಿ ಕೃಪೆ, ದಿವ್ಯ ತ್ರಯರ ಕೃಪೆ, ಹಿತೈಷಿಗಳ ಸಹಕಾರದಿಂದ ಸಿಕ್ಕಿದೆ. ಹತ್ತು ವರ್ಷಗಳ ಸಾತ್ವಿಕ ಹೋರಾಟ, ಪ್ರಯತ್ನದಿಂದ ದಕ್ಕಿದ ದಿವ್ಯ ತಾಣದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಮಾಡಲು ಸಾದ್ಯವಾಗಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳ ಪರಿವರ್ತನೆಗಾಗಿ ಸೇವಾಮಂದಿರದ ಮೂಲಕ ಕೆಲಸವಾಗಿದೆ. ಧರ್ಮ ಎಂದರೆ ಸತ್ಯ ಶೋಧನೆ. ಪ್ರತಿಯೊಬ್ಬರ ಆತ್ಮದಲ್ಲೂ ಭಕ್ತಿಯ ಕಿಡಿ ಇದೆ. ನಿತ್ಯ ಕರ್ಮಗಳನ್ನು ಪೂಜೆ ರೂಪದಲ್ಲಿ ಮಾಡಬೇಕು. ಎಲ್ಲರೂ ಆಶ್ರಮದ ಸೇವಾ ಯಜ್ಞದಲ್ಲಿ ಕೈಜೋಡಿಸಬೇಕು. ಸ್ವಂತ ಆಶ್ರಮ ಎಂದು ತಿಳಿದು ಎಲ್ಲಾ ಕೈಂಕರ್ದಲ್ಲೂ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.ಊಟಿ ಆಶ್ರಮದ ಅಧ್ಯಕ್ಷಸ್ವಾಮಿ ರಾಘವೇಶಾನಂದಜಿ, ಮೈಸೂರು ಆಶ್ರಮದ ಸೇವಾ ಕಾರ್ಯ ವಿವರಿಸಿದರು. ಬೇಲೂರು ಮಠ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಗೌರವಾಧ್ಯಕ್ಷ ಸ್ವಾಮಿ ಗೌತವಾನಂದಜಿ ಮಹಾರಾಜ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ, ಕರ್ನಾಟಕ ಅಂಚೆ ವೃತ್ತ ಮುಖ್ಯ ಅಂಚೆ ಅಧೀಕ್ಷಕ ಕೆ. ಪ್ರಕಾಶ್ ಇದ್ದರು.
ಶತಮಾನೋತ್ಸವದ ಹಿನ್ನೆಲೆಯಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ಚಿತ್ರವುಳ್ಳ ಅಂಚೆ ಚೀಟಿ ಹಾಗೂ ಅರಮನೆ ಚಿತ್ರವುಳ್ಳ ಸ್ಟ್ಯಾಂಪ್ ಅನ್ನು ಬಿಡುಗಡೆಗೊಳಿಸಲಾಯಿತು.