ಮಳೆಗಾಲ: ಡಿಸಿಯಿಂದ ಮಹಾನಗರ ರೌಂಡ್ಸ್‌

KannadaprabhaNewsNetwork |  
Published : May 16, 2024, 12:50 AM IST
15ಡಿಡಬ್ಲೂಡಿ1,2ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಧಾರವಾಡದ ಬಸ್ ಡಿಪೊ ಪಕ್ಕದ ರಾಜಕಾಲುವೆಯನ್ನು ಪರಿಶೀಲಿಸುತ್ತಿರುವ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿರುವ ಜಿಲ್ಲಾಧಿಕಾರಿ ದಿವ್ಯಪ್ರಭು.  | Kannada Prabha

ಸಾರಾಂಶ

ಮುಂಗಾರು ಪೂರ್ವ ಮಳೆಗಳಿಂದ ಮತ್ತು ಮಾನ್ಸೂನ್‌ ಮಳೆಗಳಿಂದ ಉಂಟಾಗುವ ಸಮಸ್ಯೆಗಳನ್ನು ತ್ವರಿತವಾಗಿ ಹಾಜರಾಗಿ, ಬಗೆಹರಿಸಲು ಮತ್ತು ಜನಜೀವನ ಅಸ್ತವ್ಯಸ್ತ ಆಗದಂತೆ ಮುನ್ನೆಚರಿಕೆವಹಿಸಲು ಪ್ರತಿ ವಲಯಕ್ಕೆ ಒಂದು ಕ್ಷೀಪ್ರ ಕಾರ್ಯಪಡೆ ರಚನೆ.

ಧಾರವಾಡ

ಮಳೆಗಾಲ ಆರಂಭವಾದರೆ ಚರಂಡಿಯಲ್ಲಿ ಕಸ, ಕಡ್ಡಿ, ಹೂಳು ತುಂಬಿ ಪ್ರವಾಹ ಪರಿಸ್ಥಿತಿ ಉಂಟಾಗುವ ಮತ್ತು ಜನಜೀವನ ಅಸ್ತವ್ಯಸ್ತಗೊಳಿಸುವ ಸಂಭಾವ್ಯ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆ ಕೈಗೊಂಡಿರುವ ಸ್ವಚ್ಛತಾ ಕಾರ್ಯ ಮತ್ತು ಸಾರ್ವಜನಿಕರ ಅಭಿಪ್ರಾಯ ತಿಳಿಯಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಬುಧವಾರ ನಗರದ ಹಲವು ಬಡಾವಣೆ, ನಗರಗಳಿಗೆ ಸ್ವತಃ ಭೇಟಿ ನೀಡಿ ಪರಿಶೀಲಿಸಿದರು.

ಆರಂಭದಲ್ಲಿ ಬಸ್ ಡಿಪೊ ಸರ್ಕಲ್, ಬಸ್ ಡಿಪೊ ಪಕ್ಕದ ರಾಜಕಾಲುವೆ, ಮದಿಹಾಳ, ನಿಜಾಮುದ್ದಿನ ಕಾಲನಿ, ಎಂ.ಆರ್. ನಗರ ನಾಲಾ ಪ್ರದೇಶಗಳಿಗೆ ಭೇಟಿ ನೀಡಿ, ನಾಲಾ ಸ್ವಚ್ಛಗೊಳಿಸಿದ್ದರೂ ಕೆಲವಡೆ ಮತ್ತೆ ಸಾರ್ವಜನಿಕರು ಕಸಕಡ್ಡಿ, ಪ್ಲಾಸ್ಟಿಕ್ ಚೆಲ್ಲಿರುವುದನ್ನು ಗಮನಿಸಿ, ಸಾರ್ವಜನಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು. ತಪ್ಪಿದಲ್ಲಿ ಮಹಾನಗರ ಪಾಲಿಕೆ ನಿಯಮಾವಳಿಗಳ ಪ್ರಕಾರ ದಂಡ ವಿಧಿಸಿ, ಹೆಚ್ಚುವರಿ ಟ್ಯಾಕ್ಸ್ ಹಾಕಿ ಎಂದು ಸೂಚಿಸಿದರು.

ಅಲ್ಲಿದ್ದ ಜನರಿಗೂ ತಿಳಿ ಹೇಳಿದ ಜಿಲ್ಲಾಧಿಕಾ, ಪ್ರತಿದಿನ ಮನೆ ಬಾಗಿಲಿಗೆ ಪಾಲಿಕೆಯಿಂದ ಕಸ, ತ್ಯಾಜ ಸಂಗ್ರಹ ಟಿಪ್ಪರ ಬರುತ್ತಿದೆ. ಆದರೂ ಕೆಲವರು ಕಸ ಚರಂಡಿಗೆ ಹಾಕುತ್ತಿರುವುದು ಸರಿಯಲ್ಲ. ಎಲ್ಲರಲ್ಲಿ ನಾಗರಿಕ ಪ್ರಜ್ಞೆ ಬೆಳೆಸಬೇಕು. ಸಾರ್ವಜನಿಕರ ಸಹಕಾರ, ನಮ್ಮ ನಗರವೆಂಬ ಹೆಮ್ಮೆ ಇದ್ದರೆ ಮಾತ್ರ ಸರ್ಕಾರದ ಅಭಿವೃದ್ಧಿ ಪ್ರಯತ್ನಗಳು ಯಶಸ್ವಿಯಾಗುತ್ತವೆ ಎಂದರು.

ನಂತರ ಜಿಲ್ಲಾಧಿಕಾರಿ, ಸಿಬಿ ನಗರ, ಭಾವಿಕಟ್ಟಿಪ್ಲಾಟ್, ಬಸವನಗರ ಪ್ರದೇಶಗಳಿಗೆ ಭೇಟಿ ನೀಡಿ, ನಾಲಾ ಮತ್ತು ರಾಜಕಾಲುವೆ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು. ಮಹಾನಗರಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ವಲಯ ಆಯುಕ್ತರಾದ ಸಂತೋಷ ಯರಂಗಳಿ, ಆನಂದ ಕಾಂಬಳೆ ಅವರು ಸ್ವಚ್ಛತಾ ಕಾರ್ಯ, ಚರಂಡಿ ದುರಸ್ತಿ ಕಾಮಗಾರಿಗಳ ಕುರಿತು ವಿವರಿಸಿದರು.

ಕ್ಷಿಪ್ರ ಕಾರ್ಯಪಡೆ ರಚಿಸಿ:

ಮುಂಗಾರು ಪೂರ್ವ ಮಳೆಗಳಿಂದ ಮತ್ತು ಮಾನ್ಸೂನ್‌ ಮಳೆಗಳಿಂದ ಉಂಟಾಗುವ ಸಮಸ್ಯೆಗಳನ್ನು ತ್ವರಿತವಾಗಿ ಹಾಜರಾಗಿ, ಬಗೆಹರಿಸಲು ಮತ್ತು ಜನಜೀವನ ಅಸ್ತವ್ಯಸ್ತ ಆಗದಂತೆ ಮುನ್ನೆಚರಿಕೆವಹಿಸಲು ಪ್ರತಿ ವಲಯಕ್ಕೆ ಒಂದು ಕ್ಷೀಪ್ರ ಕಾರ್ಯಪಡೆ ರಚಿಸಲು ಮತ್ತು ಈಗಾಗಲೇ ಇರುವ ಪಡೆಗಳಿಗೆ ಏರಿಯಾ ಹಂಚಿಕೆ ಮಾಡಿ, ಜನರ ದೂರು ಬಂದ ತಕ್ಷಣ ಅಟೆಂಡ್ ಮಾಡಲು ಸೂಚಿಸಿದರು. ಹೆಸ್ಕಾಂ ಅಧಿಕಾರಿಗಳಿಂದ ನಗರದ ಪ್ರತಿ ವಿದ್ಯುತ್ ಕಂಬದ ಶಿಥಿಲತೆ, ತಂತಿಗಳು ಜೊತು ಬಿದ್ದಿರುವುದು, ಸಾರ್ವಜನಿಕರಿಗೆ ತಲುಪುವಂತೆ ಇರುವ ಮತ್ತು ಓಪನ್ ಎಲೆಕ್ಟ್ರಿಕಲ್ ಬೋರ್ಡ್‌ಗಳ ಬಗ್ಗೆ ಪರಿಶೀಲಿಸಿ, ಮೇ ತಿಂಗಳ ಅಂತ್ಯದೊಳಗೆ ಸಾರ್ವಜನಿಕ ಹಾನಿ ಆಗದಂತೆ ದುರಸ್ತಿ, ಮುನ್ನೆಚ್ಚರಿಕೆ ಕ್ರಮವಹಿಸಿ, ವರದಿ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಮಹಾನಗರಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಸೂಚಿಸಿದರು.

ನಗರದ ಮುಖ್ಯ ರಸ್ತೆ, ಪಾರ್ಕ್‌, ಬಡಾವಣೆಗಳ ಇಕ್ಕೆಲುಗಳಲ್ಲಿ ಇರುವ ಹಳೆಯ ಮರ, ಒಣಗಿದ ಮರ, ಚಾಚಿದ ಮರದ ರೆಂಬೆಕೊಂಬೆ ಗುರುತಿಸಿ, ಪಾಲಿಕೆಯಿಂದ ಈಗಲೇ ಕಟಾವು ಮಾಡಬೇಕು. ಬಡಾವಣೆ ನಿವಾಸಿಗಳಿಗೂ ಈ ಕುರಿತು ಮಾಹಿತಿ ನೀಡಿ, ಎಲ್ಲ ವಲಯ ಅಧಿಕಾರಿಗಳು ಜಾಗೃತಿ ಮೂಡಿಸುವ ಐಇಸಿ ಕಾರ್ಯಕ್ರಮ ರೂಪಿಸುವಂತೆ ಅವರು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು.

ಅತಿಯಾದ ಮಳೆ, ಮಳೆ ಪ್ರವಾಹಗಳ ಕಾರಣದಿಂದಾಗಿ ಯಾವುದೇ ಜಾನುವಾರ, ಮಾನವ ಜೀವಹಾನಿ ಆಗದಂತೆ ಮತ್ತು ಸಾರ್ವಜನಿಕ ಸ್ವತ್ತು ಹಾನಿ ಆಗದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಕೈಗೊಳ್ಳುವುದು ಮಹಾನಗರ ಪಾಲಿಕೆ ಕರ್ತವ್ಯ. ಆಯುಕ್ತರು ನಿರಂತರ ನಿಗಾ, ಉಸ್ತುವಾರಿ ವಹಿಸಿ, ಸಾರ್ವಜನಿಕ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದ ಅವರು, ಪಾಲಿಕೆಯ ಎಲ್ಲ ವಲಯ ಆಯುಕ್ತರ ಮತ್ತು ಪಾಲಿಕೆಯ ಸಹಾಯವಾಣಿ ಸಂಖ್ಯೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!