ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ನಗರದ ಸಹಾಯಕ ಕೃಷಿ ನಿದೇರ್ಶಕ ಕಚೇರಿಯಲ್ಲಿ ಮಂಗಳವಾರ ಪತ್ರಿಕೆಯೊಂದಿಗೆ ಮಾತನಾಡಿ, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಪ್ರಸ್ತುತ ಇಂದಿನವರೆಗೆ ಸಾಮಾನ್ಯ ಮಳೆ 111.4 ಮಿಮಿ ಇದ್ದು, ಈ ಹದವಾದ ಮಳೆಯು ಭೂಮಿ ಸಿದ್ಧತೆಗೆ ಹಾಗೂ ಹಸಿರೆಲೆ ಗೊಬ್ಬರ ಬೀಜ ಬಿತ್ತನೆ ಮಾಡಲು ಅನುಕೂಲವಾಗಿದೆ. ಜೂನ್ ಮಾಹೆಯಲ್ಲಿ ನೆಲಗಡಲೆ, ತೊಗರಿ, ಮುಸುಕಿನ ಜೋಳ ಮತ್ತು ದೀರ್ಘಾವಧಿ ರಾಗಿ ಬಿತ್ತನೆ ಮಾಡಲು ಸೂಕ್ತವಾಗಿದೆ ಎಂದರು.
ಅಲ್ಪಾವಧಿ ರಾಗಿ ಬೆಳೆಯುವ ರೈತರು ಪ್ರಸ್ತುತ ಹಸಿರೆಲೆ ಬೀಜ (ಸೆಣಬು) ಹಾಗೂ ಹುರಳಿ ಅಥವಾ ಅಲಸಂದಿ ಮಿಶ್ರಣ ಮಾಡಿ ಬೆಳೆಯುವುದರಿಂದ ಜುಲೈ 2 ನೇ ವಾರದ ನಂತರ ಬಿತ್ತನೆ ಮಾಡುವ ಮೊದಲೆ ಹಸಿರೆಲೆ ಗೊಬ್ವರವನ್ನು ಮಣ್ಣಿಗೆ ಸೇರಿಸುವುದರಿಂದ ಸಾಕಷ್ಟು ಸಾವಯವ ಅಂಶವನ್ನು ಭೂಮಿಗೆ ಸೇರುತ್ತದೆ. ಮಣ್ಣಿನ ಫಲವತ್ತತೆ ಹಾಗೂ ಗುಣಮಟ್ಟದಲ್ಲಿ ಬದಲಾವಣೆಯಾಗುತ್ತದೆ. ಪ್ರಸ್ತುತ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸೆಣಬು ಬೀಜಗಳನ್ನು ದಾಸ್ತಾನು ಮಾಡಲಾಗಿದೆ.2026 ರ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಮತ್ತು ಎಲ್ಲಾ ಕೃಷಿ ಪರಿಕರಗಳನ್ನು ಕ್ಯೂಆರ್ ಕೋಡ್ ಮುಖಾಂತರ ಕೆ-ಕಿಸಾನ್ ಬೀಜ ಮಾಹಿತಿ ತಂತ್ರಾಂಶದಲ್ಲಿ, ಅಗತ್ಯ ಮಾಹಿತಿ ತುಂಬಿ ತಂತ್ರಾಂಶದಲ್ಲಿಯೇ ರಸೀದಿ ನೀಡುವ ಮೂಲಕ ವಿತರಿಸಲಾಗುತ್ತದೆ. ತಾಲೂಕಿನ ವಿವಿಧ ಅಧಿಕೃತ ಖಾಸಗಿ ಮತ್ತು ಸಹಕಾರ ಸಂಘಗಳಲ್ಲಿ ಯೂರಿಯಾ-538.65 ಟನ್, ಕಾಂಪ್ಲೆಕ್ಸ್ ರಸಗೊಬ್ಬರಗಳು 2294.98 ಟನ್ ಒಟ್ಟಾರೆ 3576.405 ಟನ್ ದಾಸ್ತಾನು ಇದ್ದು ರೈತಬಾಂಧವರು ತಮ್ಮ ಆಧಾರ್ ಪ್ರತಿಯನ್ನು ರಸಗೊಬ್ಬರ ಮಳಿಗೆಗಳಲ್ಲಿ ಸಲ್ಲಿಸಿ ಪಿ.ಓ.ಎಸ್ ಯಂತ್ರದ ಮೂಲಕವೇ ರಸಗೊಬ್ಬರ ಖರೀದಿಸಬೇಕಾಗಿದೆ. ರೈತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂರ್ಪಕಿಸಲು ಮನವಿ ಮಾಡಿದರು.