ಚಂದ್ರು ಕೊಂಚಿಗೇರಿ
ಆರಂಭದಲ್ಲಿ ಮುಂಗಾರು ಮಳೆ ಅಬ್ಬರಿಸಿದ್ದು, ವಾಡಿಕೆ ಮಳೆಗಿಂತ ಹೆಚ್ಚು ಮಳೆ ಸುರಿದಿತ್ತು. ಜೂ.1ರಿಂದ 14 ರವರೆಗೂ 36 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 18 ಮಿ.ಮೀ ಮಳೆ ಮಾತ್ರ ಆಗಿದ್ದು, ಶೇ.50ರಷ್ಟು ಮಳೆ ಕೊರತೆ ಉಂಟಾಗಿದೆ. ಈವರೆಗೂ ತಾಲೂಕಿನಲ್ಲಿ 17137 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, ಹೈಬ್ರೀಡ್ ಜೋಳ, ತೊಗರಿ, ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇನ್ನಿತರ ಬೆಳೆಗಳು ಸೇರಿ ಶೇ.30ರಷ್ಟು ಮಾತ್ರ ಬಿತ್ತನೆಯಾಗಿದೆ.
ಮಲೆನಾಡು ಪ್ರದೇಶದಲ್ಲಿ ಮಳೆ ಇಲ್ಲದ ಹಿನ್ನೆಲೆಯಲ್ಲಿ ಬ್ಯಾರೇಜ್‌ಗೆ, ನೀರಿನ ಒಳಹರಿವು ಸಂಪೂರ್ಣ ಕಡಿಮೆಯಾಗಿದೆ. ದಿನಕ್ಕೆ 1 ಸಾವಿರ ಕ್ಯೂಸೆಕ್ ಮಾತ್ರ ಒಳಹರಿವು ಇದೆ. ಅಷ್ಟೇ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಈಗ ಬ್ಯಾರೇಜ್‌ನಲ್ಲಿ 507.5 ಮೀಟರ್‌ನಷ್ಟು ನೀರು ಸಂಗ್ರಹವಾಗಿದೆ. ಮುಂಬರುವ ದಿನಗಳಲ್ಲಿ 507.80 ಮೀಟರ್‌ಗೆ ನೀರು ನಿಲುಗಡೆ ಮಾಡುವ ಉದ್ದೇಶ ಹೊಂದಲಾಗಿದೆ. ನೀರಾವರಿ ಸೌಲಭ್ಯಕ್ಕಿಂತ ಕುಡಿವ ನೀರನ್ನು ಸಂಗ್ರಹಿಸುವುದು ಮುಖ್ಯ ಉದ್ದೇಶವಿದೆ.ಸಿಂಗಟಾಲೂರು ಬ್ಯಾರೇಜ್‌ನಿಂದ ವಿಜಯನಗರ, ಗದಗ, ಕೊಪ್ಪಳ ಜಿಲ್ಲೆಗಳ ಕಾಲುವೆಗಳಿಗೆ ಜೂ.15ರಿಂದ ಕಾಲುವೆಗಳಿಗೆ ನೀರು ಹರಿಸಬೇಕಿತ್ತು. ಆದರೆ ಬ್ಯಾರೇಜ್‌ನಲ್ಲಿ ಕಾಲುವೆಗಳಿಗೆ ನೀರು ಹರಿವಷ್ಟು ನೀರಿನ ಪ್ರಮಾಣವಿಲ್ಲ, 1 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಇದೆ. ಬ್ಯಾರೇಜ್ ಕೆಳ ಭಾಗದಲ್ಲಿ ಬಹುಗ್ರಾಮ ಕುಡಿವ ನೀರಿನ ಯೋಜನೆಗಳಿಗೆ 1 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.
ಸಿಂಗಟಾಲೂರು ಬ್ಯಾರೇಜ್‌ಗೆ ದಿನಕ್ಕೆ 1 ಸಾವಿರ ಕ್ಯೂಸೆಕ್ ನೀರು ಒಳಹರಿವಿದೆ. ಅದೇ ಪ್ರಮಾಣದ ನೀರನ್ನು ಬ್ಯಾರೇಜ್ ಕೆಳಗಿರುವ ಬಹುಗ್ರಾಮ ಕುಡಿವ ನೀರಿನ ಯೋಜನೆಗಳಿಗೆ ಹರಿಸಲಾಗುತ್ತಿದೆ. ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆ ಸುರಿದರೆ ಕಾಲುವೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಮೊದಲು ಕುಡಿವ ನೀರಿನ ಆದ್ಯತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಇಇ ಐಗೋಳ್ ಪ್ರಕಾಶ.
ಮಳೆ ಮತ್ತು ಕಾಲುವೆ ನೀರನ್ನು ನಂಬಿಕೊಂಡು ಮೆಕ್ಕೆಜೋಳ ಬಿತ್ತನೆ ಮಾಡಿದ್ದೇವೆ. ಆದರೆ ಮಳೆ ಇಲ್ಲದೇ ಬೆಳೆಗಳು ಬಾಡುತ್ತಿವೆ. ಅಧಿಕಾರಿಗಳು ಶೀಘ್ರದಲ್ಲೇ ಕಾಲುವೆಗಳಿಗೆ ನೀರು ಹರಿಸಿ ರೈತರಿಗೆ ಆಸರೆಯಾಗಬೇಕು ಎನ್ನುತ್ತಾರೆ ಅಚ್ಚುಕಟ್ಟು ಪ್ರದೇಶದ ರೈತರು.