ಕನ್ನಡಪ್ರಭ ವಾರ್ತೆ, ಬೆಂಗಳೂರು:
ಸರ್ಕಾರದ ಮುಖ್ಯಸ್ಥರಾದ ರಾಜ್ಯಪಾಲರು ಸಂವಿಧಾನದ 174ನೇ ವಿಧಿಯಡಿ ಅಧಿಕಾರ ಚಲಾಯಿಸಿ ಆ.13ರ ಗುರುವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಸಮಾವೇಶಗೊಳಿಸಲು ಆದೇಶ ಮಾಡಿದ್ದಾರೆ. ಈ ಆದೇಶಾನುಸಾರ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಅಧಿಸೂಚನೆ ಹೊರಡಿಸಿದೆ. ಇಲಾಖೆಯ ಸರ್ಕಾರದ ಕಾರ್ಯದರ್ಶಿ ಜೆ.ಶ್ರೀಧರ್, ಉಭಯ ಸದನಗಳ ಕಾರ್ಯದರ್ಶಿಗಳಿಗೆ ವಿವರವಾದ ತಾತ್ಕಾಲಿಕ ಕಾರ್ಯಕಲಾಪಗಳು ವೇಳಾಪಟ್ಟಿಯನ್ನು ರವಾನಿಸಿದ್ದಾರೆ. ಆ ಪ್ರಕಾರ, ಆ.13ರಿಂದ 27ರವರೆಗೆ ಸರ್ಕಾರಿ ರಜಾದಿನಗಳನ್ನು (ಆ.15, 16, 22, 23 ಮತ್ತು 26) ಹೊರತುಪಡಿಸಿ ಉಳಿದ 10 ದಿನ ಸರ್ಕಾರಿ ಕಲಾಪಗಳು, ಖಾಸಗಿ- ಸರ್ಕಾರಿ ಕಾರ್ಯ ಕಲಾಪಗಳು ಜರುಗಲಿವೆ.
ಹೊಸ ಸಚಿವರು ಭಾಗಿ?: ಸಚಿವ ಸಂಪುಟ ವಿಸ್ತರಣೆ ಜುಲೈ ಮೂರನೇ ವಾರದಲ್ಲಿ ನಡೆಯುವ ಸಾಧ್ಯತೆ ಇದ್ದುದ್ದರಿಂದ ಸರ್ಕಾರ ಆ.6ರಿಂದ ಅಧಿವೇಶನ ಆರಂಭಿಸಲು ಮುಂದಾಗಿತ್ತು. ಆದರೆ, ಸಂಪುಟ ವಿಸ್ತರಣೆ ವಿಳಂಬ ಆಗಿದ್ದರಿಂದ ಅಧಿವೇಶನವನ್ನು ಒಂದು ವಾರ ತಡವಾಗಿ ಆರಂಭಿಸಲು ನಿರ್ಧರಿಸಲಾಗಿತ್ತು. ಸದ್ಯದಲ್ಲೇ ಸಂಪುಟ ವಿಸ್ತರಣೆ ಆಗಲಿದ್ದು, ಅಧಿವೇಶನದಲ್ಲಿ ಹೊಸ ಸಚಿವರು ಭಾಗಿಯಾಗುವ ನಿರೀಕ್ಷೆ ಇದೆ. ಅಧಿವೇಶನದಲ್ಲಿ ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ?:ಈ ಬಾರಿಯ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ನಿತ್ಯ ವಾಗ್ವಾದ, ಜಟಾಪಟಿಗೆ ಕಾರಣವಾಗಿರುವ ಬಿಡದಿ ಟೌನ್‌ಶಿಪ್ ಯೋಜನೆ ವಿಚಾರ, ಕೆಪಿಎಸ್‌ಸಿ ನೇಮಕಾತಿ ಹಗರಣ, ಮಳೆ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿ, ರೈತರ ಸಂಕಷ್ಟ, ಆತ್ಮಹತ್ಯೆ ಪ್ರಕರಣಗಳು, ಪಂಚ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ, ಸರ್ಕಾರ ಭರವಸೆ ನೀಡಿರುವ 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ ವಿಚಾರಗಳು ಪ್ರಮುಖವಾಗಿ ಪ್ರತಿಪಕ್ಷಗಳು ಪ್ರಯೋಗಿಸುವ ಅಸ್ತ್ರಗಳಾಗಲಿವೆ. ಇದಕ್ಕೆ ಸರ್ಕಾರ ಸಮರ್ಥ ಉತ್ತರ ನೀಡುವ ಜೊತೆಗೆ ಪ್ರತಿಪಕ್ಷಗಳ ಮೇಲೆ ಆರ್‌ಎಸ್‌ಎಸ್ ನೋಂದಣಿ ವಿವಾದ, ನೀಟ್ ಹಗರಣ, ರಾಮಮಂದಿರ ದೇಣಿಗೆ ಕಳ್ಳತನದ ಅಸ್ತ್ರಗಳನ್ನು ಪ್ರಯೋಗಿಸುವ ಸಾಧ್ಯತೆ ಇದೆ.