ಮಂಗಳೂರು: ಕಾವೂರಿನ ಸರ್ಕಾರಿ ಪಿಯು ಕಾಲೇಜು ಹಾಗೂ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 300 ವಿದ್ಯಾರ್ಥಿನಿಯರಿಗೆ ಶನಿವಾರ ಕಾವೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಮಾಸಿಕ ಆರೋಗ್ಯ ಮತ್ತು ಸ್ವಚ್ಛತೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಯಿತು. ಈ ಜಾಗೃತಿ ಕಾರ್ಯಕ್ರಮವನ್ನು ಮಹಿಳಾ ಸಂಶೋಧನಾ ಕೇಂದ್ರ ಹಾಗೂ ಆಂತರಿಕ ಗುಣಮಟ್ಟ ಭರವಸೆ ಘಟಕ (ಐಕ್ಯೂಎಸಿ) ಸಂಯುಕ್ತವಾಗಿ ಆಯೋಜಿಸಿತ್ತು. ಎರಡು ತಿಂಗಳಿಗೆ ಒಂದರಂತೆ ವರ್ಷಪೂರ್ತಿ ಇಂತಹ ಜಾಗೃತಿ ಕಾರ್ಯಕ್ರಮಗಳು ಹಾಗೂ ಉಚಿತ ಪ್ಯಾಡ್ ವಿತರಣೆಯನ್ನು ನಡೆಸಲಾಗುವುದು. ಈ ಕಾರ್ಯಕ್ರಮಗಳ ಸಂಪೂರ್ಣ ವೆಚ್ಚವನ್ನು ಅಮೆರಿಕದಲ್ಲಿ ನೆಲೆಸಿರುವ ದಂಪತಿ ವಿನಯ್ ಕುಮಾರ್ ಮತ್ತು ಡಾ. ಸೌಮ್ಯ ರಾವ್ ಹಾಗೂ ಎನ್‌ಜಿಒ‘ಕೋಡ್ ಕ್ರಿಮ್ಸನ್’ ಪ್ರಾಯೋಜಿಸಿದ್ದಾರೆ ಎಂದು ಮಹಿಳಾ ಸಂಶೋಧನಾ ಕೇಂದ್ರದ ನಿರ್ದೇಶಕಿ ಪ್ರಮೀಳಾ ರಾವ್ ಮಾಹಿತಿ ನೀಡಿದರು.
ಮಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ವಿಭಾಗದ ಜಂಟಿ ನಿರ್ದೇಶಕಿ ಕವಿತಾ ಕೆ.ಆರ್., ದಾನಿಗಳ ಈ ಮಾನವೀಯ ಸೇವೆ ವಿದ್ಯಾರ್ಥಿನಿಯರಿಗೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಲು ಪ್ರೇರಣೆಯಾಗಬೇಕು. ವಿದ್ಯಾರ್ಥಿನಿಯರು ಜೀವನದಲ್ಲಿ ಉನ್ನತ ಸ್ಥಾನಕ್ಕೇರಿದ ಬಳಿಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಮುಂಬೈಯ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಸಹಾಯಕ ಅಧೀಕ್ಷಕಿ ಡಾ. ಅಂಕಿತಾ ಸರ್ಕಾರ್ ಹಾಗೂ ‘ಕೋಡ್ ಕ್ರಿಮ್ಸನ್’ನ ಅನುಜಾ ಸರ್ಕಾರ್ ಮಾತನಾಡಿ, ನಾಲ್ಕು ಗಂಟೆಗೆ ಒಮ್ಮೆ ಪ್ಯಾಡ್ ಬದಲಾಯಿಸುವ ಅಗತ್ಯ, ಪಿರಿಯಡ್ ಟ್ರ್ಯಾಕಿಂಗ್ ಮಹತ್ವ ಹಾಗೂ ಬಳಸಿದ ಪ್ಯಾಡ್‌ಗಳ ಅಸಮರ್ಪಕ ವಿಲೇವಾರಿಯಿಂದಾಗುವ ಪರಿಣಾಮಗಳ ಕುರಿತು ವಿವರಿಸಿದರು. ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥೆ ಮಮತಾ ಯು., ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಸಂತೋಷ್ ಪಿಂಟೋ, ಐಕ್ಯೂಎಸಿ ಮತ್ತು ಗ್ರಾಹಕ ಕ್ಲಬ್ ಸಂಯೋಜಕಿ ಡಾ. ತೆರೆಸ್ ಪಿರೇರಾ ಇದ್ದರು. ವಿದ್ಯಾರ್ಥಿನಿ ಲಾವಣ್ಯಾ ನಿರೂಪಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಜ್ಯೋತಿ ಶೆಟ್ಟಿ ವಂದಿಸಿದರು.