ರಾಮನಗರದಲ್ಲಿ ನೀರಿನ ಮಾಸಿಕ ದರ ಶೇ.60ರಷ್ಟು ಹೆಚ್ಚಳ

KannadaprabhaNewsNetwork |  
Published : Jul 02, 2026, 01:15 AM IST
1ಕೆಆರ್ ಎಂಎನ್ 1.ಜೆಪಿಜಿರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಅಧ್ಯಕ್ಷತೆಯಲ್ಲಿ ಸಾಮಾನ್ಯಸಭೆ ನಡೆಯಿತು. | Kannada Prabha

ಸಾರಾಂಶ

ಇದಕ್ಕೆಲ್ಲ ಅಧ್ಯಕ್ಷ ಶೇಷಾದ್ರಿ ಮತ್ತು ಎಇಇ ಪುಟ್ಟಯ್ಯ ಉತ್ತರ ನೀಡಿದರಾದರೂ ಸದಸ್ಯರು ತೃಪ್ತರಾಗದೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದರು. ಕೊನೆಗೆ ಶೇಷಾದ್ರಿರವರು ನೀರು ಸರಬರಾಜು ನಿರ್ವಹಣೆ ಜವಾಬ್ದಾರಿಯನ್ನು ನಗರಸಭೆಗೆ ಹಸ್ತಾಂತರಿಸುವ ವಿಷಯವನ್ನು ಮುಂದಿನ ಸಭೆಯಲ್ಲಿ ತೆಗೆದುಕೊಳ್ಳೋಣ ಎಂದು ಹೇಳಿ ಚರ್ಚೆಯನ್ನು ಮೊಟಕುಗೊಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಆಡಳಿತ ಪಕ್ಷದವರ ಅಪಸ್ವರದ ನಡುವೆಯೂ ನಗರಸಭಾ ವ್ಯಾಪ್ತಿಯಲ್ಲಿ ಗೃಹ, ಗೃಹೇತರ ಹಾಗೂ ವಾಣಿಜ್ಯ- ಕೈಗಾರಿಕೆ ಬಳಕೆ ನೀರಿನ ಮಾಸಿಕ ದರವನ್ನು ಶೇಕಡ 60ರಷ್ಟು ಹೆಚ್ಚಿಸಲು ಬುಧವಾರ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ನಗರಸಭೆಯ ಪ್ರಶಸ್ತಿ ಭವನದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯು ನೀರಿನ ಮಾಸಿಕ ದರವನ್ನು ಶೇಕಡ 75ರಷ್ಟು ಪರಿಷ್ಕರಿಸಿ ಹೆಚ್ಚಿಸುವಂತೆ ಸಲ್ಲಿಸಿರುವ ಪ್ರಸ್ತಾಪ ಕುರಿತು ಚರ್ಚೆ ನಡೆದು ಅಂತಿಮವಾಗಿ ಶೇಕಡ 60ರಷ್ಟು ಪರಿಷ್ಕೃತ ದರ ನಿಗದಿ ಪಡಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಜಲ ಮಂಡಳಿ ಎಇಇ ಪುಟ್ಟಯ್ಯರವರು ಕಳೆದ 9 ವರ್ಷಗಳಿಂದ ನಗರಸಭಾ ವ್ಯಾಪ್ತಿಯಲ್ಲಿ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಸರ್ಕಾರದ ನಿಯಮಗಳ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ದರ ಪರಿಷ್ಕರಿಸಬೇಕು. ನೀರಿನ ಕರ ವಸೂಲಿಯು ಕೇವಲ ಸಿಬ್ಬಂದಿ ವೇತನಕ್ಕಾಗಿ ಸರಿದೂಗಿಸಲಾಗುತ್ತಿದೆ. ನಿರ್ವಹಣಾ ವೆಚ್ಚ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನೀರಿನ ದರವನ್ನು ಶೇ.75ರಷ್ಟು ಪರಿಷ್ಕರಿಸುವಂತೆ ಪ್ರಸ್ತಾಪಿಸಿದರು.

2017ರ ಸಾಲಿನ ಮಾಸಿಕ ದರಕ್ಕೆ ಶೇಕಡ 75 ರಷ್ಟು ಪರಿಷ್ಕರಿಸಿ ದರ ನಿಗದಿ ಮಾಡಬೇಕು. ಅದರಂತೆ ಮೀಟರ್ ಸಂಪರ್ಕ ಹೊಂದದಿದ್ದರೆ ಮಾಸಿಕ ದರ ಗೃಹ ಬಳಕೆದಾರರಿಗೆ ₹382, ಗೃಹಯೇತರ ಬಳಕೆದಾರರಿಗೆ ₹765 ಹಾಗೂ ವಾಣಿಜ್ಯ - ಕೈಗಾರಿಕಾ ಬಳಕೆಗಾಗಿ ₹1392 ನಿಗದಿ ಪಡಿಸುವಂತೆ ಮನವಿ ಮಾಡಿದರು.

ಈ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಬೈರೇಗೌಡ, ನಗರದಲ್ಲಿ ಶೇ.25ರಷ್ಟು ಮನೆಗಳಿಗೆ ಕೊಳಾಯಿ ಸಂಪರ್ಕವೇ ಇಲ್ಲ. ಹೀಗಿರುವಾಗ ಮಾಸಿಕ ದರ ಪರಿಷ್ಕೃತ ಮಾಡುವುದರಲ್ಲಿ ಅರ್ಥವಿಲ್ಲ. ನೀರು ಪೂರೈಕೆ ಮತ್ತು ನೀರಿನ ಕರ ವಸೂಲಿ ಜವಾಬ್ದಾರಿ ನಗರಸಭೆಗೆ ಹಸ್ತಾಂತರವಾದ ಮೇಲೆ ನೀರಿನ ಮಾಸಿಕ ದರ ನಿಗದಿ ಮಾಡೋಣ ಎಂದು ಸಲಹೆ ನೀಡಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ನಿಜಾಮುದ್ದೀನ್ ಈ ವಿಚಾರವನ್ನು ಮುಂದಿನ ಸಭೆಯಲ್ಲಿ ಚರ್ಚೆ ನಡೆಸೋಣ. ಈಗ ಬೇಡ ಎಂದು ಹೇಳಿದರು. ಮತ್ತೊಬ್ಬ ಸದಸ್ಯ ಅಕ್ಲಿಂರವರು ದೀಪಾವಳಿ ಹಬ್ಬದ ನಂತರ ಒಳ್ಳೆಯ ದಿನ ನೋಡಿ ದರ ಹೆಚ್ಚಿಸೋಣ ಎಂದು ಸಲಹೆ ನೀಡಿದರು.

ಆಗ ಅಧ್ಯಕ್ಷ ಕೆ.ಶೇಷಾದ್ರಿ, ಕಳೆದ ಆರು ತಿಂಗಳಿಂದ ನಾನೇ ಮಾಸಿಕ ದರ ಪರಿಷ್ಕರಿಸುವ ಪ್ರಸ್ತಾಪವನ್ನು ಮುಂದೂಡುತ್ತಾ ಬಂದಿದ್ದೇನೆ. ಈಗ ಮತ್ತಷ್ಟು ತಡ ಮಾಡಿದರೆ ಸಂಸ್ಥೆಗೆ ನಷ್ಟವಾಗುತ್ತದೆ. ಅಲ್ಲದೆ, ನಗರದಲ್ಲಿ ಸುಮಾರು 1600 ರಿಂದ 1700 ಫಿಲೇಚರಿಗಳಿದ್ದು, ಅವುಗಳನ್ನು ವಾಣಿಜ್ಯ ಉದ್ದೇಶವೆಂದು ಪರಿಗಣಿಸಿದರೆ ನಾಲ್ಕು ಪಟ್ಟು ಹೆಚ್ಚಿನ ದರ ನಿಗದಿ ಮಾಡಬೇಕಾಗುತ್ತದೆ. ಅದನ್ನು ಎರಡು ಪಟ್ಟು ಹೆಚ್ಚಳ ಮಾಡಲಾಗುವುದು. ಶೇಕಡ 75ರ ಬದಲು ಶೇಕಡ 60ರಷ್ಟು ಪರಿಷ್ಕೃತ ದರ ನಿಗದಿ ಪಡಿಸೋಣ ಎಂದು ಹೇಳಿದಾಗ ಸಭೆ ಒಪ್ಪಿಗೆ ಸೂಚಿಸಿತು.

ಆದರೆ, ವಿಪಕ್ಷದ ಯಾವೊಬ್ಬ ಸದಸ್ಯನೂ ನೀರಿನ ದರ ಹೆಚ್ಚಳದ ವಿರುದ್ಧ ಧ್ವನಿ ಎತ್ತಲೇ ಇಲ್ಲ. ಕೊನೆಗೆ ಸಭೆಯ ನಿರ್ಣಯದಂತೆ ನೀರಿನ ಮಾಸಿಕ ದರ ಶೇಕಡ 60ರಷ್ಟು ಪರಿಷ್ಕರಿಸಿ ನಿಗದಿ ಪಡಿಸಲಾಯಿತು. ಅದರಂತೆ ಮೀಟರ್ ಅಳವಡಿಸದೆ ಇರುವ ಪ್ರತಿ ಸಂಪರ್ಕಕ್ಕೆ ಮಾಸಿಕ ಕನಿಷ್ಠ ದರ ಗೃಹ ಬಳಕೆದಾರರಿಗೆ ₹348 , ಗೃಹಯೇತರ ಬಳಕೆದಾರರಿಗೆ ₹696 ಹಾಗೂ ವಾಣಿಜ್ಯ - ಕೈಗಾರಿಕಾ ಬಳಕೆಗಾಗಿ ₹1392 ಪರಿಷ್ಕೃತ ದರ ನಿಗದಿ ಮಾಡಲಾಯಿತು.

ಇನ್ನು ಮೀಟರ್ ಅಳವಡಿಸಿದ್ದರೆ ಪ್ರತಿ ತಿಂಗಳಿಗೆ 8 ಸಾವಿರ ಲೀಟರ್ ಉಪಯೋಗಿಸಿದರೆ ಗೃಹ ಬಳಕೆದಾರರಿಗೆ ಪ್ರತಿ ಲೀಟರ್ ಗೆ ₹20.80 ಪೈಸೆಯಂತೆ ₹166 , ಗೃಹಯೇತರ ಬಳಕೆದಾರರಿಗೆ ಪ್ರತಿ ಲೀಟರ್ ಗೆ ₹41.60 ಪೈಸೆಯಂತೆ ₹333 ಹಾಗೂ ವಾಣಿಜ್ಯ- ಕೈಗಾರಿಕಾ ಉದ್ದೇಶಕ್ಕಾಗಿ ಪ್ರತಿ ಲೀಟರ್ ಗೆ ₹83.20 ಪೈಸೆಯಂತೆ ₹666 ದರ ನಿಗದಿಯಾಗಲಿದೆ ಎಂದು ಪುಟ್ಟಯ್ಯ ವಿವರಿಸಿದರು.

ಇದಕ್ಕೂ ಮುನ್ನ ನೆಟ್ಕಲ್ ಯೋಜನೆ ಅಡಿಯಲ್ಲಿ ನೀರು ಸರಬರಾಜು ಮತ್ತು ನೀರಿನ ಕರ ವಸೂಲಿ ಜವಾಬ್ದಾರಿಯನ್ನು ಜಲಮಂಡಳಿಯಿಂದ ನಗರಸಭೆಗೆ ಹಸ್ತಾಂತರಿಸುವ ಕುರಿತು ಚರ್ಚೆ ನಡೆಯಿತು. ಸದಸ್ಯರಾದ ಬೈರೇಗೌಡ, ಅಜ್ಮತ್, ನಿಜಾಮುದ್ದೀನ್ ಹಾಗೂ ಮಂಜುನಾಥ್ ರವರು, ದಿನದ 24 ಗಂಟೆ ನೀರು ಎಲ್ಲಿ ಪೂರೈಕೆಯಾಗುತ್ತಿದೆ. ಶೇಕಡ 25ರಷ್ಟು ಮನೆಗಳಿಗೆ ಇನ್ನೂ ಕೊಳಾಯಿ ಸಂಪರ್ಕ ಇಲ್ಲ. ಮೀಟರ್ ಗಳನ್ನು ಅಳವಡಿಸಿಲ್ಲ. ಹೊಸ ಸಂಪರ್ಕಕ್ಕೆ ಮನಬಂದಂತೆ ಹಣ ಪಡೆಯುತ್ತಿದ್ದೀರಿ. ಹಳೇಯ ನೀರಿನ ಬಿಲ್ ಗೆ ಬಡ್ಡಿ ಸೇರಿಸಿ ಲಕ್ಷಾಂತರ ರುಪಾಯಿ ಆಗಿದ್ದು, ಬಾಕಿ ವಸೂಲಿಯಾಗಿಲ್ಲ. ಅದಕ್ಕೆ ಜವಾಬ್ದಾರರು ಯಾರು. ಬಾಕಿ ಮೊತ್ತವನ್ನು ಮನ್ನಾ ಮಾಡಲು ಕ್ರಮ ವಹಿಸಿ. ನೀರು ಸರಬರಾಜು ನಿರ್ವಹಣೆ ನಗರಸಭೆಗೆ ಹಸ್ತಾಂತರವಾದ ಮೇಲೆ ಜಲಮಂಡಳಿ ಕೆಲಸ ಏನಿರುತ್ತದೆ. ಆ ಜವಾಬ್ದಾರಿ ನಿರ್ವಹಣೆ ಮಾಡಲು ನಗರಸಭೆ ಸನ್ನದ್ಧವಾಗಿದಿಯೇ ಎಂದು ಪ್ರಶ್ನೆಗಳನ್ನು ಕೇಳಿದರು.

ಇದಕ್ಕೆಲ್ಲ ಅಧ್ಯಕ್ಷ ಶೇಷಾದ್ರಿ ಮತ್ತು ಎಇಇ ಪುಟ್ಟಯ್ಯ ಉತ್ತರ ನೀಡಿದರಾದರೂ ಸದಸ್ಯರು ತೃಪ್ತರಾಗದೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದರು. ಕೊನೆಗೆ ಶೇಷಾದ್ರಿರವರು ನೀರು ಸರಬರಾಜು ನಿರ್ವಹಣೆ ಜವಾಬ್ದಾರಿಯನ್ನು ನಗರಸಭೆಗೆ ಹಸ್ತಾಂತರಿಸುವ ವಿಷಯವನ್ನು ಮುಂದಿನ ಸಭೆಯಲ್ಲಿ ತೆಗೆದುಕೊಳ್ಳೋಣ ಎಂದು ಹೇಳಿ ಚರ್ಚೆಯನ್ನು ಮೊಟಕುಗೊಳಿಸಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಆಯುಕ್ತ ಡಾ.ಜಯಣ್ಣ ಉಪಸ್ಥಿತರಿದ್ದರು.

ವಾಟರ್ ಟ್ಯಾಂಕ್ ವೃತ್ತಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರಿಲು ಅನುಮೋದನೆ:

ರಾಮನಗರ: ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ)ರವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯಸಭೆ ಐಜೂರಿನಲ್ಲಿರುವ ನಾಗನಕಟ್ಟೆ ಮತ್ತು ಯಾರಬ್ ನಗರದಲ್ಲಿನ ಗೆಜ್ಜಲಗುಡ್ಡೆಯನ್ನು ಕೊಳಗೇರಿ ಪ್ರದೇಶವೆಂದು ಘೋಷಿಸಲು ಹಾಗೂ ವಾಟರ್ ಟ್ಯಾಂಕ್ ವೃತ್ತವನ್ನು ಕಿತ್ತೂರು ರಾಣಿ ಚನ್ನಮ್ಮ ವೃತ್ತ ಎಂದು ಹೆಸರಿಡಲು ಅನುಮೋದನೆ ನೀಡಿತು.

ರಾಜ್ ಕುಮಾರ್ ಕಾಂಪ್ಲೆಕ್ಸ್ ನಲ್ಲಿರುವ 19 ಮಳಿಗೆಗಳು, ರಂಗ ಮಂದಿರ, ಕುಮುಂದಾನ್ ಮೊಹಲ್ಲಾದಲ್ಲಿರುವ 6 ಮಳಿಗೆಗಳಿಗೆ ಮಾಹೆಯಾನ ನಿಗದಿ ಪಡಿಸಿರುವ ಬಾಡಿಗೆ ಮೊತ್ತದಲ್ಲಿ ಶೇ.25ರಷ್ಟು ಕಡಿಮೆ ಮಾಡಿ ಮಾಹೆಯಾನ ಬಾಡಿಗೆಯನ್ನು ನಿಗದಿ ಪಡಿಸಲು, ಹರೀಸಂದ್ರ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ₹29.50 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸಭೆ ಒಪ್ಪಿಗೆ ಸೂಚಿಸಿತು.

ಎಸ್ ಬಿಎ - 2.0ರಡಿ ಅಧ್ಯಯನ ಪ್ರವಾಸಕ್ಕಾಗಿ ಮೀಸಲಿಟ್ಟಿರುವ ಅನುದಾನದ ಜೊತೆ ಕೊರತೆಯಿರುವ ಅನುದಾನವನ್ನು 2026-27ನೇ ಸಾಲಿನ ನಗರಸಭಾ ಆಯವ್ಯಯದಲ್ಲಿ ಮೀಸಲಿಟ್ಟಿರುವ ಮೊತ್ತವನ್ನು ಹೊಂದಾಣಿಕೆ ಮಾಡಿಕೊಳ್ಳಲು ಹಾಗೂ ಅಸಂಘಟಿತ ಕಾರ್ಮಿಕರು - ಇತರೆ ಬಡವರಿಗೆ ವಿಮೆ , ಉದ್ಯೋಗ ಮೇಳಾ, ಟೋಪೋಲಾಜಿಕಲ್ ಸಮೀಕ್ಷೆ , ಇತರೆ ಕಾರ್ಯಕ್ರಮಗಳಿಗೆ ಮಾಡಿರುವ ಖರ್ಚು ವೆಚ್ಚಗಳನ್ನು ನಗರಸಭಾ ನಿಧಿಯಿಂದ ಭರಿಸಲು ಸಭೆ ಸಮ್ಮತಿ ಸೂಚಿಸಿತು.

----

-

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯಿಂದ ಮತದಾನದ ಹಕ್ಕು ಕಸಿಯುವ ಕುತಂತ್ರ
ನಕಲಿ ಜಾತಿ ಪ್ರಮಾಣಪತ್ರ ರದ್ಧತಿಗೆ ಒತ್ತಾಯ