ಸಾಗರ: ನಗರಸಭೆಯ ಸ್ಯಾನಿಟರಿ ಸೂಪರ್‌ವೈಸರ್ ನಾಗರಾಜ ನಕಲಿ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ನೌಕರಿ ಪಡೆಯುವುದರ ಜೊತೆಗೆ ಅದನ್ನು ಬಳಸಿಕೊಂಡು ಬೇರೆ ನೌಕರರಿಗೆ ಮತ್ತು ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗುತ್ತಿರುವುದರಿಂದ ಅವರ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.ಪಟ್ಟಣದ ಎಸ್.ಎನ್. ನಗರದ ಎ.ಕೆ. ಕಾಲೋನಿ ನಿವಾಸಿ ನಾಗರಾಜ ಆದಿ ಕರ್ನಾಟಕ (ಎಸ್.ಸಿ.) ಜನಾಂಗದ ಪ್ರಮಾಣಪತ್ರ ಪಡೆದು ಕೆಲಸಕ್ಕೆ ಸೇರಿ ಸರ್ಕಾರದಿಂದ ಸಿಗುವ ಮುಂಬಡ್ತಿ ಸೌಲಭ್ಯ ಪಡೆದಿರುತ್ತಾನೆ. ನಮ್ಮ ಸಂಘಟನೆ ವತಿಯಿಂದ ನಾಗರಾಜ್ ಅವರ ಪೂರ್ವಾಪರ ವಿಚಾರಿಸಿದಾಗ ಇವರು ಅರುಂಧತಿಯಾರ್ ಎಂಬ ಜಾತಿಗೆ ಸೇರಿದ್ದಾರೆ. ಇವರ ಸಂಬಂಧಿ ಗಣಾಧೀಶ್ ಎಂಬುವವರು ಇದೇ ಜಾತಿಯಡಿ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಆದಿ ಕರ್ನಾಟಕ ಜಾತಿ ಪ್ರಮಾಣಪತ್ರ ಪಡೆದಿದ್ದಾಗ ಅದನ್ನು ರದ್ದುಪಡಿಸಲಾಗಿತ್ತು. ನಾಗರಾಜ್ ಅವರು ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ನೈಜ ಪರಿಶಿಷ್ಟ ಜಾತಿಯವರಿಗೆ ಸಿಗಬೇಕಾದ ಸೌಲಭ್ಯವವನ್ನು ಲಪಟಾಯಿಸುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.ತಕ್ಷಣ ನಾಗರಾಜ್ ಅವರಿಗೆ ನೀಡಿರುವ ಸುಳ್ಳು ಜಾತಿ ಪ್ರಮಾಣಪತ್ರವನ್ನು ರದ್ದು ಮಾಡಬೇಕು. ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ದಲಿತ ಸಂಘರ್ಷ ಸಮಿತಿ ಸಂಚಾಲಕ ಲಕ್ಷ್ಮಣ್ ಸಾಗರ್, ಪ್ರಮುಖರಾದ ಸುರೇಶ್, ರವಿ ಜಂಬಗಾರು, ನಾರಾಯಣಪ್ಪ ಇನ್ನಿತರರು ಹಾಜರಿದ್ದರು.