ಸೂಳೆಕೆರೆ ಒತ್ತುವರಿ ತೆರವಿಗೆ 2 ತಿಂಗಳ ಗಡುವು

KannadaprabhaNewsNetwork |  
Published : Apr 30, 2025, 02:05 AM IST
29ಕೆಡಿವಿಜಿ8-ದಾವಣಗೆರೆಯಲ್ಲಿ ಮಂಗಳವಾರ ಪಾಂಡೋಮಟ್ಟಿ ಡಾ. ಗುರು ಬಸವ ಸ್ವಾಮೀಜಿ ಸೂಳೆಕೆರೆ ಸಂರಕ್ಷಣೆ ಮಾಡುವಂತೆ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸುತ್ತಿರುವುದು. | Kannada Prabha

ಸಾರಾಂಶ

ಏಷ್ಯಾದ ಎರಡನೇ ಅತಿ ದೊಡ್ಡ ಕೆರೆಯಾದ, ಚನ್ನಗಿರಿ ತಾಲೂಕಿನ ಸೂಳೆಕೆರೆ ಒತ್ತುವರಿ ತೆರವುಗೊಳಿಸಿ, ಮುಳುಗಡೆಯಾದ ರೈತರ ಜಮೀನುಗಳಿಗೆ ಇನ್ನು 2 ತಿಂಗಳಲ್ಲಿ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಲೋಕಾಯುಕ್ತ ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಖಡ್ಗ ಸಂಘ ಮತ್ತು ಸೂಳಕೆರೆ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ ಎಚ್ಚರಿಸಿದ್ದಾರೆ.

- ಲೋಕಾಯುಕ್ತರೇಕೆ ಸ್ವಯಂಪ್ರೇರಿತ ದೂರು ದಾಖಲಿಸಿಲ್ಲ?: ಪಾಂಡೋಮಟ್ಟಿ ಶ್ರೀ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಏಷ್ಯಾದ ಎರಡನೇ ಅತಿ ದೊಡ್ಡ ಕೆರೆಯಾದ, ಚನ್ನಗಿರಿ ತಾಲೂಕಿನ ಸೂಳೆಕೆರೆ ಒತ್ತುವರಿ ತೆರವುಗೊಳಿಸಿ, ಮುಳುಗಡೆಯಾದ ರೈತರ ಜಮೀನುಗಳಿಗೆ ಇನ್ನು 2 ತಿಂಗಳಲ್ಲಿ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಲೋಕಾಯುಕ್ತ ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಖಡ್ಗ ಸಂಘ ಮತ್ತು ಸೂಳಕೆರೆ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ ಎಚ್ಚರಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಳೆಕೆರೆ ಒತ್ತುವರಿ ತೆರವುಗೊಳಿಸುವಂತೆ 5 ವರ್ಷದಿಂದಲೂ ಲೋಕಾಯುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೂ, ಲೋಕಾಯುಕ್ತರ ಬಳಿ ಯಾವುದೇ ಮಾಹಿತಿ ಇಲ್ಲದಿರುವುದು ಬೇಸರದ ಸಂಗತಿ ಎಂದರು.

ಕ್ವಾರಿ, ಗುಡ್ಡದಲ್ಲಿ ಅಕ್ರಮ ಚಟುವಟಿಕೆ ನಡೆದಿದ್ದು ತಮ್ಮ ಗಮನಕ್ಕೆ ಬಂದಿದೆಯೆಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಲೋಕಾಯುಕ್ತರಿಗೆ ಆಸಕ್ತಿ ಇದೆ. ಆದರೆ, ಐದು ವರ್ಷದಿಂದ ಅದೇ ಲೋಕಾಯುಕ್ತ ನ್ಯಾಯಾಲಯದಲ್ಲಿ ಸೂಳೆಕೆರೆ ಒತ್ತುವರಿ ತೆರವು ಕುರಿತಂತೆ ಇರುವ ದೂರಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈವರೆಗೂ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯಿಂದ ಯಾರೊಬ್ಬರೂ ಸೂಳೆಕೆರೆ ಒತ್ತುವರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸದಿರುವುದು ಸಾಕಷ್ಟು ಅಚ್ಚರಿ ಹುಟ್ಟುಹಾಕಿದೆ ಎಂದು ಶ್ರೀಗಳು ಹೇಳಿದರು.

ನೀರಾವರಿ ನಿಗಮ ಹಾಗೂ ಜಿಲ್ಲಾಧಿಕಾರಿ, ಲೋಕಾಯುಕ್ತ ಸಂಸ್ಥೆಯ ನೇತೃತ್ವದಲ್ಲಿ 2020ರಲ್ಲಿ ₹11 ಲಕ್ಷಗಳನ್ನು ಖರ್ಚು ಮಾಡಿ, ಖಾಸಗಿ ಏಜೆನ್ಸಿ ಮೂಲಕ ಸೂಳೆಕೆರೆಯನ್ನು ಎಚ್ಎಸ್‌ಎಲ್‌ ಸರ್ವೇ ಮಾಡಿಸಲಾಗಿತ್ತು. ಆದರೆ, ಇಂದಿನವರೆಗೂ ಸೂಳೆಕೆರೆಯ ಜಾಗ ಹದ್ದುಬಸ್ತು ಮಾಡುವ ಕೆಲಸ ಮಾಡಿಲ್ಲ. ₹11 ಲಕ್ಷ ವೆಚ್ಚದಲ್ಲಿ ಕೈಗೊಂಡ ಸರ್ವೇ ಕಾರ್ಯ ಏನಾಯಿತು ಎಂಬ ಬಗ್ಗೆ ಜನರಿಗೆ ಮಾಹಿತಿ ನೀಡಿಲ್ಲ. ಸೂಳೆಕೆರೆ ಸಂರಕ್ಷಣೆ ಮಾಡಬೇಕಾದ ಇಲಾಖೆಗಳು, ಅಧಿಕಾರಿಗಳೇ ಕೆರೆಯನ್ನು ನುಂಗಲು ಹೊರಟಿದ್ದು ಖಂಡನೀಯ ಎಂದು ಪಾಂಡೋಮಟ್ಟಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿ ಅಧ್ಯಕ್ಷ ಬಿ.ಆರ್.ರಘು, ಖಡ್ಗ ಸಂಘದ ಅಧ್ಯಕ್ಷ ಬಿ.ಚಂದ್ರಹಾಸ, ನಿರ್ದೇಶಕರಾದ ಷಣ್ಮುಖಯ್ಯ, ಕುಬೇಂದ್ರ ಸ್ವಾಮಿ, ಸುನಿಲ್ ಇತರರು ಇದ್ದರು.

- - -

(ಬಾಕ್ಸ್‌) * 210 ಅಲ್ಲ, ಸಾವಿರಾರು ಎಕರೆ ಒತ್ತುವರಿ ಉಪ ಲೋಕಾಯುಕ್ತರು ಸೂಳೆಕೆರೆಗೆ ಸೇರಿದ ಕೇವಲ 210 ಎಕರೆ ಒತ್ತುವರಿ ಎನ್ನುತ್ತಾರೆ. ಆದರೆ, ವಾಸ್ತವದಲ್ಲಿ ಸಾವಿರಾರು ಎಕರೆ ಒತ್ತುವರಿಯಾದ ಮಾಹಿತಿ ಇದೆ. ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳೇ ಸುಮಾರು 900ರಿಂದ 1 ಸಾವಿರ ಎಕರೆಯಷ್ಟು ಸೂಳೆಕರೆ ಜಾಗ ಒತ್ತುವರಿ ಆಗಿದೆ ಎನ್ನುತ್ತಾರೆ. ಕಂದಾಯ ಇಲಾಖೆಯು ಸುಮಾರು 1200 ಎಕರೆಯಷ್ಟು ಸೂಳೆಕೆರೆ ಜಾಗ ಒತ್ತುವರಿ ಮಾಡಲಾಗಿದೆ ಎನ್ನುತ್ತದೆ. ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು? ಇಂತಹ ಗೊಂದಲದ ಹೇಳಿಕೆಗಳ ಮೂಲಕ ಜನರ ಮಧ್ಯೆ ದ್ವೇಷದ ವಾತಾವರಣ ಸೃಷ್ಠಿ ಮಾಡುವ ಕೆಲಸವಾಗುತ್ತಿದೆ. ಐತಿಹಾಸಿಕ ಸೂಳೆಕೆರೆ ಒತ್ತುವರಿ ತೆರವುಗೊಳಿಸುವ ಕೆಲಸವನ್ನು ಮೊದಲು ಮಾಡಲಿ ಎಂದು ಡಾ.ಗುರುಬಸವ ಸ್ವಾಮೀಜಿ ತಾಕೀತು ಮಾಡಿದರು.

- - -

-29ಕೆಡಿವಿಜಿ8:

ಚನ್ನಗಿರಿ ತಾಲೂಕಿನ ಐತಿಹಾಸಿಕ ಸೂಳೆಕೆರೆ ಒತ್ತುವರಿ ತೆರವುಗೊಳಿಸಿ, ಕೆರೆ ಸಂರಕ್ಷಣೆ ಮಾಡುವಂತೆ ದಾವಣಗೆರೆಯಲ್ಲಿ ಮಂಗಳವಾರ ಪಾಂಡೋಮಟ್ಟಿ ಡಾ. ಗುರುಬಸವ ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದರು.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್