ಆಡಳಿತ, ವಿಪಕ್ಷ ಶಾಸಕರ ವಾಕ್ಸಮರ

KannadaprabhaNewsNetwork | Published : Apr 30, 2025 2:04 AM

ಸಾರಾಂಶ

ಶಿವಮೊಗ್ಗ: ವಿಧಾನಭೆಯಲ್ಲಿ ಅಮಾನತ್ತುಗೊಂಡ ಶಾಸಕರು ಕೆಡಿಪಿ ಸಭೆಯಲ್ಲಿ ಭಾಗವಹಿಸಬಹುದೇ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಎತ್ತಿದ ಪ್ರಶ್ನೆ ಭಾರಿ ವಿವಾದಕ್ಕೆ ಕಾರಣಯಿತು. ಇದರಿಂದ ಸಭೆ ಗದ್ದಲ, ವಾಗ್ವಾದಕ್ಕೆ ಕಾರಣವಾಯಿತು.

ಶಿವಮೊಗ್ಗ: ವಿಧಾನಭೆಯಲ್ಲಿ ಅಮಾನತ್ತುಗೊಂಡ ಶಾಸಕರು ಕೆಡಿಪಿ ಸಭೆಯಲ್ಲಿ ಭಾಗವಹಿಸಬಹುದೇ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಎತ್ತಿದ ಪ್ರಶ್ನೆ ಭಾರಿ ವಿವಾದಕ್ಕೆ ಕಾರಣಯಿತು. ಇದರಿಂದ ಸಭೆ ಗದ್ದಲ, ವಾಗ್ವಾದಕ್ಕೆ ಕಾರಣವಾಯಿತು.

ಮಂಗಳವಾರ ನಗರದ ಜಿ.ಪಂ ಸಭಾಂಗಣದಲ್ಲಿ ಸಚಿವ ಮಧುಬಂಗಾರಪ್ಪ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಈ ವೇಳೆ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಅವರು, ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ವಿಧಾನಸಭೆ ಕಲಾಪದ ವೇಳೆ ಅಮಾನತುಗೊಂಡಿದ್ದಾರೆ. ಇವರು ಕೆಡಿಪಿ ಸಭೆಯಲ್ಲಿ ಭಾಗವಹಿಸಬಹುದೇ ಎಂದು ಅಧ್ಯಕ್ಷರನ್ನು ಕೇಳಿದರು.

ಈ ವೇಳೆ ಕೆರಳಿದ ಶಾಸಕ ಎನ್‌.ಎನ್‌.ಚನ್ನಬಸಪ್ಪ ನನಗೆ ಮೀಟಿಂಗ್ ನೋಟಿಸ್ ಕಳಿಸಿರುವ ಕಾರಣಕ್ಕೆ ಸಭೆಗೆ ಬಂದಿದ್ದೇನೆ. ಇದನ್ನು ಪ್ರಶ್ನಿಸಲು ನೀವ್ಯಾರು, ಕುಳಿತ್ಕೋಳ್ಳಮ್ಮಾ ಎಂದು ಬಲ್ಕೀಶ್ ಭಾನು ವಿರುದ್ಧ ಕೆಂಡಾಮಂಡಲರಾದರು.

ಅಪಮಾನ ಸಹಿಸಲ್ಲ, ಹೇಗೆ ಬೇಕಾದರೆ ಹಾಗೆ ಮಾತನಾಡಬಹುದಾ, ಯಾವ ಸಭೆಗೆ ಹೋಗಬೇಕು, ಹೋಗಬಾರದು ಎಂಬುದು ನನಗೆ ಗೊತ್ತಿದೆ. ನಿಮ್ಮಿಂದ ಹೇಳಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಪರಸ್ಪರ ವಾಗ್ವಾದ ನಡೆಸಿದರು.

ವಾಗ್ವಾದ ತಾರಕ್ಕೇರುತ್ತಿದ್ದಂತೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಮಧ್ಯಪ್ರವೇಶಿ, ಮಹಿಳೆಯರ ಬಗ್ಗೆ ಅಗೌರವ ಸಲ್ಲದು. ಏಕ ವಚನ ಬಳಸೋದು ಸರಿಯಲ್ಲ, ನೀವು ಅಮಾನತ್ತು ಆಗಿದ್ದಕ್ಕೆ ಕೇಳಿದ್ದಾರೆ. ನಿಮ್ಮ ಆರ್ಭಟಕ್ಕೆ ಬಗ್ಗಲ್ಲ ಎಂದು ಗಟ್ಟಿಧ್ವನಿಯಲ್ಲಿ ಹೇಳಿದರು.

ಬಳಿಕ ನನಗೆ ಅಪಮಾನವಾಗಿದೆ ಎಂದು ಶಾಸಕ ಚನ್ನಬಸಪ್ಪ ಸಭೆಯನ್ನು ಬಹಿಷ್ಕರಿಸಿ ಹೊರಡಲು ಮುಂದಾದರು. ಈ ವೇಳೆ ಸಚಿವ ಮಧು ಬಂಗಾರಪ್ಪ ಮಧ್ಯ ಪ್ರವೇಶಿಸಿ ಸಮಾಧಾನಿಸಲು ಪ್ರಯತ್ನಿಸಿದರು. ಈ ಹಂತದಲ್ಲಿ ಮತ್ತೆ ಸಚಿವ ಮಧು ಬಂಗಾರಪ್ಪ, ಶಾಸಕ ಚನ್ನಬಸಪ್ಪ ನಡುವೆ ವಾಗ್ವಾದ ನಡೆಯಿತು. ನಂತರ ಶಾಸಕರನ್ನು ಸಭೆಗೆ ಆಹ್ವಾನಿಸುವಂತೆ ನಾನೇ ತಿಳಿಸಿದ್ದೇ ಎಂದು ಬಲ್ಕೀಶ್ ಬಾನು ಹಾಗೂ ಚನ್ನಬಸಪ್ಪರನ್ನು ಸಮಾಧಾನಪಡಿಸಿದರು.

ನಾನು ಯಾರದೋ ಕೃಪೆಯಿಂದ

ಎಂಎಲ್‌ಸಿ ಆದವನಲ್ಲ: ಚನ್ನಬಸಪ್ಪ

ಶಿವಮೊಗ್ಗ: ನಾನು ಯಾರದೋ ಕೃಪೆಯಿಂದ ಎಂಎಲ್‌ಸಿ ಆದವನಲ್ಲ. ಜನರ ಭರವಸೆಯಿಂದ, ವಿಶ್ವಾಸದಿಂದ, ಅವರು ನನಗೆ ನೀಡಿದ ಮತಗಳ ಪವಿತ್ರತೆಯಿಂದ ನಾನು ಈ ಸ್ಥಾನಕ್ಕೆ ಶಾಸಕನಾಗಿ ಬಂದಿದ್ದೇನೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿರುಗೇಟು ನೀಡಿದ್ದಾರೆ.

ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿನ ಘಟನೆ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೆಡಿಪಿ ಸಭೆಯಲ್ಲಿ ನಡೆದ ಘಟನೆ ಜನಪ್ರತಿನಿಧಿಗಳ ಪ್ರತಿಷ್ಠೆಗೆ ಧಕ್ಕೆ ತರುವಂತದ್ದು. ಸಭೆಯಲ್ಲಿ ಭಾಗವಹಿಸಿದ್ದ ಜ್ಞಾನದ ಕೊರತೆ ಇರುವಂತಹ ಎಂಎಲ್‌ಸಿ ಬಲ್ಕೀಶ್ ಬಾನು ಅವರು, ಚುನಾವಣೆಯ ಮೂಲಕ ಆಯ್ಕೆಯಾಗಿರುವ ಜನಪ್ರತಿನಿಧಿಗೆ ತೋರಿದ ಅಗೌರವ ದುರದೃಷ್ಟಕರ. ಇದು ಕೇವಲ ವೈಯಕ್ತಿಕ ಸ್ಥರದ ಪ್ರಶ್ನೆಯಲ್ಲ, ಇದು ಪ್ರಜಾಪ್ರಭುತ್ವದ ಗೌರವವನ್ನೇ ಕುಗ್ಗಿಸುವ ಪ್ರಯತ್ನವಾಗಿದೆ ಎಂದಿದ್ದಾರೆ.

ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಯ ನಿಯಮ ೩೪೮ರ ಪ್ರಕಾರ ೬ ತಿಂಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತುಗೊಳಿಸಲಾಗಿದೆ. ಆದರೆ ಈ ನಿಯಮಗಳ ಬಗ್ಗೆ ಪೂರ್ಣ ಜ್ಞಾನವಿಲ್ಲದ ಸ್ಥಿತಿಯಲ್ಲಿ, ಬಲ್ಕೀಶ್ ಬಾನು ಮಾತನಾಡುವುದು, ಓರ್ವ ಚುನಾಯಿತ ಪ್ರತಿನಿಧಿಯ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ. ಜೊತೆಗೆ ಇದಕ್ಕೆ ಕುಮ್ಮಕ್ಕು ನೀಡಿರುವ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಅವರದ್ದು ಮೂರ್ಖತನದ ಪರಮಾವಧಿಯಾಗಿದೆ ಎಂದು ಟೀಕಿಸಿದ್ದಾರೆ.

ಪ್ರತಿನಿಧಿತ್ವ ಎನ್ನುವುದು ಕೇವಲ ಸ್ಥಾನ ಅಥವಾ ಅಧಿಕಾರವಲ್ಲ, ಅದು ಜನರ ಆಶಯಗಳ ಪ್ರತಿಬಿಂಬವಾಗಿದೆ. ಎಲ್ಲಿ ಒಂದು ಚುನಾವಣೆಯ ಮೂಲಕ ಆಯ್ಕೆಯಾದ ಪ್ರತಿನಿಧಿಯನ್ನು ನಿರ್ಲಕ್ಷಿಸಲಾಗುತ್ತದೋ, ಅಲ್ಲಿಗೆ ಪ್ರಜಾಪ್ರಭುತ್ವದ ಮೌಲ್ಯಗಳು ನಿರ್ಲಕ್ಷಿಸಿದಂತೆ. ಇಂತಹ ಸಾಮಾನ್ಯ ಜ್ಞಾನವಿಲ್ಲದ ಹೇಳಿಕೆಗಳು ತಡೆ ಇಲ್ಲದೆ ಬಿಡುವಂತಿಲ್ಲ. ಜನಪ್ರತಿನಿಧಿಗಳ ಸ್ಥಾನಮಾನ ಹಾಗೂ ಪ್ರಜಾಪ್ರಭುತ್ವದ ಗೌರವ ಉಳಿಸಿಕೊಳ್ಳುವುದು ನನ್ನ ಮತ್ತು ಎಲ್ಲರ ಕರ್ತವ್ಯ ಆಗಿದೆ ಎಂದು ಹೇಳಿದ್ದಾರೆ.

Share this article