ಕಲ್ಲುದೇವನಹಳ್ಳಿ, ಬುರುಗುಂಟೆ, ಹೆತ್ತಗೋನಹಳ್ಳಿ, ತೆಂಗಿನಭಾಗ, ಟಿ.ಚನ್ನಾಪುರ ಸೇರಿದಂತೆ ಈ ಮಾರ್ಗದ ಹಲವು ಗ್ರಾಮಗಳಿಂದ ವ್ಯಾಸಂಗಕ್ಕಾಗಿ ಪ್ರತಿನಿತ್ಯ ನಾಗಮಂಗಲ ಪಟ್ಟಣಕ್ಕೆ ಬರುವ ನೂರಾರು ವಿದ್ಯಾರ್ಥಿಗಳು ಮತ್ತು ರೈತರು ಹಾಗೂ ರೈತ ಮಹಿಳೆಯರ ಅನುಕೂಲಕ್ಕಾಗಿ ಈ ಮಾರ್ಗದಲ್ಲಿ ಹೊಸ ಸಾರಿಗೆ ಬಸ್ ಸಂಚಾರ ಆರಂಭಿಸಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಗ್ರಾಮೀಣ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶ್ರಮಿಕರು ಹಾಗೂ ಜನಸಮಾನ್ಯರ ಅನುಕೂಲಕ್ಕಾಗಿ ಹೊಸ ಮಾರ್ಗದಲ್ಲಿ ಸಾರಿಗೆ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ ತಿಳಿಸಿದರು.
ತಾಲೂಕಿನ ಕಲ್ಲುದೇವನಹಳ್ಳಿಯಲ್ಲಿ ಹೊಸ ಮಾರ್ಗದ ಸಾರಿಗೆ ಬಸ್ ಸಂಚಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ನಾಗಮಂಗಲ ಘಟಕದ 70 ಸಾರಿಗೆ ಬಸ್‌ಗಳಲ್ಲಿ ಪ್ರತಿನಿತ್ಯ ಸುಮಾರು 20 ಸಾವಿರಕ್ಕೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದರು.
ತಾಲೂಕಿನ ಕಲ್ಲುದೇವನಹಳ್ಳಿ, ಬುರುಗುಂಟೆ, ಹೆತ್ತಗೋನಹಳ್ಳಿ, ತೆಂಗಿನಭಾಗ, ಟಿ.ಚನ್ನಾಪುರ ಸೇರಿದಂತೆ ಈ ಮಾರ್ಗದ ಹಲವು ಗ್ರಾಮಗಳಿಂದ ವ್ಯಾಸಂಗಕ್ಕಾಗಿ ಪ್ರತಿನಿತ್ಯ ನಾಗಮಂಗಲ ಪಟ್ಟಣಕ್ಕೆ ಬರುವ ನೂರಾರು ವಿದ್ಯಾರ್ಥಿಗಳು ಮತ್ತು ರೈತರು ಹಾಗೂ ರೈತ ಮಹಿಳೆಯರ ಅನುಕೂಲಕ್ಕಾಗಿ ಈ ಮಾರ್ಗದಲ್ಲಿ ಹೊಸ ಸಾರಿಗೆ ಬಸ್ ಸಂಚಾರ ಆರಂಭಿಸುವಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಿತಿ ಸದಸ್ಯರು ಗಮನ ಸೆಳೆದಿದ್ದರು. ವಿದ್ಯಾರ್ಥಿಗಳ ಹಾಗೂ ಜನರ ಅನುಕೂಲಕ್ಕಾಗಿ ಈ ಮಾರ್ಗದಲ್ಲಿ ಹೊಸದಾಗಿ ಸಾರಿಗೆ ಬಸ್ ಸಂಚಾರ ಆರಂಭಿಸಲಾಗಿದೆ ಎಂದರು.
ಸಮಿತಿ ಸದಸ್ಯೆ ನೀಲಾ ಮೂರ್ತಿ ಮಾತನಾಡಿ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಈ ಮಾರ್ಗದಲ್ಲಿ ಸಾರಿಗೆ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು, ಜನರು ಸೇವೆ ಬಳಸಿಕೊಳ್ಳಬೇಕು ಎಂದರು.
ನಂತರ ಈ ಮಾರ್ಗದಲ್ಲಿ ಹೊಸದಾಗಿ ಸಂಚಾರ ಆರಂಭಿಸಿ ಗ್ರಾಮಕ್ಕೆ ಬಂದ ಸಾರಿಗೆ ಬಸ್‌ಗೆ ಬುರುಡುಗುಂಟೆ, ಹೆತ್ತಗೋನಹಳ್ಳಿ ಮತ್ತು ತೆಂಗಿನಭಾಗ ಗ್ರಾಮಸ್ಥರು ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಗ್ಯಾರಂಟಿ ಜಿಲ್ಲಾ ಸಮಿತಿ ಸದಸ್ಯ ಕೊಣನೂರು ಹನುಮಂತು, ತಾಲೂಕು ಸಮಿತಿ ಸದಸ್ಯರಾದ ಗೀತಾ ರಾಜು, ಧನರಾಜ್, ಶರತ್, ಕೆಎಸ್‌ಆರ್‌ಟಿಸಿ ನಾಗಮಂಗಲ ಘಟಕದ ಡಿಪೋ ವ್ಯವಸ್ಥಾಪಕ ಮಹೇಶ್, ಗ್ರಾಪಂ ಮಾಜಿ ಸದಸ್ಯ ಶಿವಣ್ಣ, ಮುಖಂಡರಾದ ಪಾಪಣ್ಣ, ಮುದ್ದೇಗೌಡ, ಮೋಹನ್, ಸತೀಶ್, ಇಜ್ಜಲಘಟ್ಟ ಲೋಕೇಶ್, ಗೀತಾ ದಾಸೇಗೌಡ, ಎನ್.ಕೆ.ವಸಂತಮಣಿ ಸೇರಿದಂತೆ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.