ನೈತಿಕ ಪೊಲೀಸ್ ಗಿರಿ: ಇಬ್ಬರ ಬಂಧನ

KannadaprabhaNewsNetwork |  
Published : Jun 10, 2025, 02:38 AM ISTUpdated : Jun 10, 2025, 02:39 AM IST

ಸಾರಾಂಶ

ಯುವಕನೊಬ್ಬ ತನ್ನ ಹಿಂಬದಿಯಲ್ಲಿ ಬುರ್ಕಾ ಧರಿಸಿದ ಯುವತಿಯನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಬಿಡದಿಯ ಭೈರಮಂಗಲ ಕ್ರಾಸ್ ಸಮೀಪದ ರಂಗೇಗೌಡನದೊಡ್ಡಿ ಬಳಿ ಮೂವರು ಆಸಾಮಿಗಳು ಬೈಕ್ ತಡೆದು ನಿಲ್ಲಿಸಿದ್ದರು.

ರಾಮನಗರ:

ಬೈಕ್‍ನಲ್ಲಿ ಹೋಗುತ್ತಿದ್ದ ಅಪರಿಚಿತ ಯುವಕ ಯುವತಿಯನ್ನು ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ ತೋರಿದ ಆರೋಪದ ಮೇಲೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಬಿಡದಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಬೆಂಗಳೂರು ಮೈಸೂರು ಹಳೇಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ಯುವಕನೊಬ್ಬ ತನ್ನ ಹಿಂಬದಿಯಲ್ಲಿ ಬುರ್ಕಾ ಧರಿಸಿದ ಯುವತಿಯನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಬಿಡದಿಯ ಭೈರಮಂಗಲ ಕ್ರಾಸ್ ಸಮೀಪದ ರಂಗೇಗೌಡನದೊಡ್ಡಿ ಬಳಿ ಮೂವರು ಆಸಾಮಿಗಳು ಬೈಕ್ ತಡೆದು ನಿಲ್ಲಿಸಿ ಯುವಕನಿಗೆ ಧಮಕಿ ಹಾಕಿದ್ದಲ್ಲದೆ ಯುವತಿಗೆ ನಾನಾ ಪ್ರಶ್ನೆಗಳನ್ನು ಕೇಳುವ ಮೂಲಕ ಯುವತಿಯನ್ನು ಸಾರ್ವಜನಿಕವಾಗಿ ಮಾನಹಾನಿ ಮಾಡುವ ರೀತಿಯಲ್ಲಿ ಪ್ರಯತ್ನಿಸಿರುವುದು ಕಂಡುಬಂದಿದೆ.

ಅಪರಿಚಿತ ಯುವಕ ಯುವತಿಯನ್ನು ತಡೆದು ನೈತಿಕ ಪೊಲೀಸ್‍ಗಿರಿ ತೋರಿಸಿರುವ ವಿಡಿಯೋ ದೃಶ್ಯವನ್ನು ಯಾಸಿನ್ ರಜಾಕ್ ಎಂಬಾತ ತನ್ನ ಫೇಸ್‍ಬುಕ್ ಖಾತೆಯಲ್ಲಿ ಅಪ್‍ಲೋಡ್ ಮಾಡಿದ್ದನು. ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮಾಹಿತಿ ಸಂಗ್ರಹ ಕರ್ತವ್ಯದಲಿದ್ದ ಬಿಡದಿ ಠಾಣೆಯ ಪೇದೆ ಅಭಿಷೇಕ್‍ರವರು ಭಾನುವಾರ ಬೆಳಿಗ್ಗೆ ಸದರಿ ವಿಡಿಯೋ ದೃಶ್ಯವನ್ನು ಕಂಡು ಠಾಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ಮೂಲದ ಯಾಸಿನ್ ರಜಾಕ್, ರಾಮನಗರದ ಅಕ್ಮಲ್ ಪಾಷ ಮತ್ತು ಮಕ್ಸುದ್ ಎಂಬುವರೆ ಆರೋಪಿಗಳು. ಬೈಕ್‍ನಲ್ಲಿ ಹೋಗುತ್ತಿದ್ದ ಯುವಕ ಯುವತಿಯನ್ನು ತಡೆದು ಎಲ್ಲಿಗೆ ಹೋಗುತ್ತಿದ್ದೀರಿ? ಯಾವ ಊರು? ಏ..ನಿಂತ್ಕೋ ಇಲ್ಲೆ.. ನಿನಗೂ ಇವನಿಗೂ ಏನು ಸಂಬಂಧ? ಬುರ್ಕಾ ತೊಟ್ಟು ಈ ಹುಡುಗನ ಜೊತೆ ಏಕೆ ಹೋಗುತ್ತಿರುವೆ? ನಿಮ್ಮಪ್ಪ ಯಾರು? ಅವರ ಫೋನ್ ನಂಬರ್ ಕೊಡು ಎಂದು ಯುವತಿಯನ್ನು ನಾನಾ ರೀತಿಯಲ್ಲಿ ಪ್ರಶ್ನಿಸಿರುವುದು. ಹಾಗೆಯೇ ಜತೆಗಿದ್ದ ಯುವಕನಿಗೂ ಧಮಕಿ ಹಾಕಿರುವುದು ವಿಡಿಯೋ ದೃಶ್ಯದಲ್ಲಿ ಸೆರೆಯಾಗಿದೆ.ಸಾರ್ವಜನಿಕ ರಸ್ತೆಯಲ್ಲಿ ಅಡ್ಡಗಟ್ಟಿ ತಡೆದು ಅಪರಿಚಿತ ಯುವತಿಗೆ ಮಾನಹಾನಿ ಆಗುವ ರೀತಿಯಲ್ಲಿ ಮಾತನಾಡುವ ಜತೆಗೆ ವಿಡಿಯೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗಿ ಕೋಮುಗಲಭೆಗೆ ಉತ್ತೇಜನ ನೀಡಿದಂತಾಗಿದೆ ಎಂಬುದಾಗಿ ಪರಿಗಣಿಸಿ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್‍ಲೋಡ್ ಮಾಡಿರುವ ಆರೋಪಿ ಮದ್ದೂರು ಮೂಲದ ಯಾಸಿನ್ ರಜಾಕ್ ಎಂಬಾತನನ್ನು ಶೀಘ್ರ ವಶಕ್ಕೆ ಪಡೆಯಲಾಗುವುದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಹಾಗೂ ಪ್ರಚೋದನೆ ನೀಡುವಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

-------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು
ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ