ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಾಮಾಜಿಕ ಬದ್ಧತೆಯಿಟ್ಟುಕೊಂಡು ಜನಪರವಾಗಿ ನಡೆಸುವ ಚಳವಳಿಗಳಿಗೆ ಸದಾ ನಮ್ಮ ಬೆಂಬಲ ಇರುತ್ತದೆ. ಸಂವಿಧಾನ, ಕಾನೂನು ಮೀರಿದ ನಡವಳಿಕೆಗಳಿಗೆ ಯಾವತ್ತೂ ಸಹಕಾರ ನೀಡುವುದಿಲ್ಲವೆಂದು ಮಾದಾರ ಗುರುಪೀಠದ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.ಇಲ್ಲಿನ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಚಿತ್ರದುರ್ಗದ ವಿಜಯ ಸೇನೆ ಸಂಘಟನೆ ಹಮ್ಮಿಕೊಂಡಿದ್ದ ಕನ್ನಡ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನಪದ ಹಾಡುಗಾರ ಮಳವಳ್ಳಿಯ ಡಾ.ಮಹಾದೇವ ಸ್ವಾಮಿ ಅವರಿಗೆ ರಾಜವೀರ ಮದಕರಿ ನಾಯಕ ಪ್ರಶಸ್ತಿ ಹಾಗೂ ತುಮಕೂರಿನ ಖ್ಯಾತ ಲೇಖಕಿ ಬಾ.ಹ. ರಮಾಕುಮಾರಿ ಅವರಿಗೆ ವೀರ ವನಿತೆ ಒನಕೆ ಓಬವ್ವ ಪ್ರಶಸ್ತಿ ಪ್ರದಾನ ಮಾಡಿ ಶ್ರೀಗಳು ಮಾತನಾಡಿದರು.
ಸಮಾಜದ ಕೆಲಸ ಮಾಡುವ ವೇಳೆ ಎದುರಾಗುವ ಯಾವುದೇ ಟೀಕೆ, ಟಿಪ್ಪಣಿ ಬಗೆಗಿನ ಸಂಗತಿಗಳಿಗೆ ತಲೆ ಕೆಡಿಸಿಕೊಳ್ಳದೆ ಮುನ್ನುಗ್ಗಿ ಕೆಲಸ ಮಾಡಬೇಕು. ಜನಪರ ಮತ್ತು ಸಂವಿಧಾನದ ಅಡಿಯಲ್ಲಿ ನಡೆಯುವ ಚಳುವಳಿಗಳಿಗೆ ನಮ್ಮ ಬೆಂಬಲವಿದೆ. ಚಿತ್ರದುರ್ಗದಲ್ಲಿ ವಿಜಯ ಸೇನೆ ನಿಜಕ್ಕೂ ಉತ್ತಮ ಉದ್ದೇಶ, ಗುರಿಯಿಟ್ಟುಕೊಂಡು ಕೆಲಸ ಮಾಡುತ್ತಿದೆ. ಅದರ ಸಾರಥ್ಯವಹಿಸಿರುವ ಕೆ.ಟಿ.ಶಿವಕುಮಾರ್ ಅವರಿಗೆ ಈ ನೆಲದ ಬಗ್ಗೆ ಕಾಳಜಿ, ಬದ್ಧತೆಯಿದೆ. ಒಮ್ಮೊಮ್ಮೆ ಸಿಕ್ಕಾಗ ಕಾನೂನು, ಸಂವಿಧಾನದ ಬಗ್ಗೆ ತಿಳಿ ಹೇಳಿರುವುದಾಗಿಯೂ ಶ್ರೀಗಳು ನುಡಿದರು.ಸಮಾಜದಲ್ಲಿ ಮಠಮಾನ್ಯಗಳು ಮಾಡಬೇಕಾದ ಕೆಲಸ ಕಾರ್ಯಗಳನ್ನು ಕೆಲವು ಸಂದರ್ಭಗಳಲ್ಲಿ ಸಂಘಟನೆಗಳು ಮಾಡುತ್ತವೆ. ಅದಕ್ಕೆ ಜನರು, ಮಠಾಧೀಶರು ಮಾತ್ರವಲ್ಲಇಡೀ ಸಮೂಹವೇ ಬೆಂಬಲಕ್ಕೆ ನಿಲ್ಲಬೇಕಾಗುತ್ತದೆ. ಇಲ್ಲಿ ಕಾಯಕವನ್ನೇ ನಂಬಿದ್ದವರಿಗೆ ಗೌರವ ಸಿಕ್ಕಿದೆ. ಸಾಧಕರಿಗೂ ಗುರ್ತಿಸಿ ಮನ್ನಣೆ ನೀಡಲಾಗಿದೆ ಎಂದು ಸ್ವಾಮೀಜಿ ಶ್ಲಾಘಿಸಿದರು.
ಕೋಟೆನಾಡಿನ ರಾಜಕೀಯ ಸುಪುತ್ರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾದ್ಯಕ್ಷ ಬಿ.ಎನ್.ಚಂದ್ರಪ್ಪ, ಸಮಾಜದಲ್ಲಿ ಅನೇಕ ಸಾಧಕರುಗಳನ್ನು ಗುರುತಿಸಿ ಇಂತಹ ಸಾರ್ವಜನಿಕರ ಸಮ್ಮುಖದಲ್ಲಿ ಗೌರವಿಸುವುದು ನಿಜಕ್ಕೂ ಶ್ಲಾಘನೀಯ ವಿಚಾರ ಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಕೆ.ರವಿಶಂಕರರೆಡ್ಡಿ, ಇದೇ ಸಂದರ್ಭದಲ್ಲಿಕೋಟೆ ನಾಡಿನ ಶಿಕ್ಷಣ ಕ್ರಾಂತಿಕಾರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಬರದ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಶಿಕ್ಷಣ ಕುಂಠಿತವಾಗಿದೆ. ಇದು ಶೋಷಿತರು, ದಲಿತರು, ಬಡವರು ವಾಸಿಸುವ ನಾಡು. ಇಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗಬೇಕು ಎಂಬುದು ನನ್ನಂತಹ ಅನೇಕರ ಹಂಬಲವೂ ಇದೆ ಎಂದರು.
ಕಳೆದ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಈ ಬಾರಿಯ ಪರೀಕ್ಷೆಯಲ್ಲಿಯೂ ಚಿತ್ರದುರ್ಗ ಜಿಲ್ಲೆ ದಾಖಲೆಯ ಫಲಿತಾಂಶ ತನ್ನದಾಗಿಸಿಕೊಳ್ಳಲಿದ್ದು, ಅದಕ್ಕಾಗಿ ಇಲಾಖೆಯು ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದರುಇದೇ ಸಂದರ್ಭದಲ್ಲಿ ವಿವಿಧ ಕಾಯಕಗಳಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡಿರುವ ದಾರುಕಾ ಬಡಾವಣೆಯ ಅಶೋಕ್‍ಕುಮಾರ್, ರಾಜಣ್ಣ, ಎನ್.ಶ್ರೀನಿವಾಸ್, ಕೃಷ್ಣಮೂರ್ತಿ,ಜಗದೀಶ್, ನಿಂಗರಾಜ್‍ಅವರಿಗೆ ವಿಶೇಷವಾಗಿ ಗೌರವಿಸಲಾಯಿತು. ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್, ಮೇಘ ಗಂಗಾಧರ ನಾಯ್ಕ, ಕರುನಾಡ ವಿಜಯ ಸೇನೆ ಸಂಘಟನೆಯ ಪ್ರಮುಖರಾದ ಕೆ.ಆರ್.ಸಚ್ಚಿದಾನಂದ್, ಶಿವಪುತ್ರ ಗಾಣದಾಳ್,ಮಹೇಶ್, ಸೋಮಣ್ಣ, ನಗರಸಭೆ ಸದಸ್ಯಚಂದ್ರಶೇಖರ್, ಕರುನಾಡ ವಿಜಯ ಸೇನೆ ಮಹಿಳಾ ಘಟಕದಅಧ್ಯಕ್ಷೆ ವೀಣಾಗೌರಣ್ಣ ಉಪಸ್ಥಿತರಿದ್ದರು.