40 ಬೇಡಿಕೆ ಈಡೇರಿಕೆಗೆ ಜಿಲ್ಲಾಧಿಕಾರಿಗೆ ಮನವಿ
ತಾಲೂಕು ಹಳೇಬೀಡು ಹೋಬಳಿಯ ಐದಲ್ಲ ಕಾವಲು ಸರ್ವೆ ನಂಬರ್‌ನಲ್ಲಿ ಎರಡೂವರೆ ಸಾವಿರ ಎಕರೆ ಸರ್ಕಾರಿ ಜಮೀನಿದ್ದು ಅದನ್ನು ೬೫೦ ರೈತರು ಹತ್ತಾರು ವರ್ಷಗಳಿಂದ ರೈತರು ಉಳುಮೆ ಮಾಡುತ್ತಿದ್ದಾರೆ. ಈಗ ಅರಣ್ಯ ಇಲಾಖೆಯವರು ಜಮೀನ್ ತಮಗೆ ಸೇರಿದ್ದು ಎಂದು ನೋಟಿಸ್ ಕೊಟ್ಟು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಬಗರ್ ಹುಕುಂ ಕೃಷಿ ಭೂಮಿಯ ಸಾಗುವಳಿ ಮಂಜೂರಾತಿ ಆದೇಶ ಪತ್ರಗಳನ್ನು ತುರ್ತಾಗಿ ನೀಡಬೇಕು ಎಂಬುದು ಸೇರಿದಂತೆ ಒಟ್ಟು ೪೦ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಕನ್ನಕಂಚೇನಹಳ್ಳಿ ಪ್ರಸನ್ನಕುಮಾರ್ ತಿಳಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರೈತರಿಗೆ ತಮ್ಮ ಕೃಷಿ ಜಮೀನಿಗೆ ಅಗತ್ಯವಿರುವ ರಸಗೊಬ್ಬರವನ್ನು ಕಡಿಮೆ ಬೆಲೆಗೆ ಸಿಗುವಂತೆ ಮಾಡಬೇಕು, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು, ಅತಿವೃಷ್ಟಿಯಿಂದಾಗಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಶೀಘ್ರವೇ ಪರಿಹಾರ ಹಣ ನೀಡಬೇಕು, ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಹೇಳಿದರು.ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡಲು ಸಮರ್ಪಕವಾದ ರಸ್ತೆಗಳ ಕೊರತೆ ಇದ್ದು, ಈ ನಿಟ್ಟಿನಲ್ಲಿ ಸಮರ್ಪಕ ರಸ್ತೆಗಳ ನಿರ್ಮಾಣ ಮಾಡಬೇಕು, ತೆಂಗಿನ ಮರಗಳನ್ನು ರೋಗ ಬಾಧೆಯಿಂದ ವಿಮುಕ್ತಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ, ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ವಾಸಿಸಲು ಯೋಗ್ಯವಾದ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು, ‘ಅಧಿಕಾರಿಗಳ ನಡೆ ಹಳ್ಳಿ ಕಡೆ’ ಎಂಬ ಕಾರ್ಯಕ್ರಮವನ್ನು ಈಚೆಗೆ ಸರ್ಕಾರ ಹಮ್ಮಿಕೊಂಡಿತ್ತು, ಆದರೆ ಸರ್ಕಾರದ ಯಾವ ಇಲಾಖೆಯ ಅಧಿಕಾರಿಗಳು ಇಲ್ಲಿಯವರೆಗೂ ಹಳ್ಳಿ ಕಡೆ ಬಂದಿಲ್ಲ, ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಾ.೧೪ ರಂದು ಬೆಳಿಗ್ಗೆ ನಗರದಿಂದ ಹೊರಡುವ ಪಾದಯಾತ್ರೆಯು ನೇರವಾಗಿ ತಾಲೂಕು ಕಚೇರಿ ತಲುಪಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಹಾರನಹಳ್ಳಿ ಕೋಡಿಮಠ, ಬೆಲ್ಲವತ್ತಳ್ಳಿ ಮಾರ್ಗವಾಗಿ ಸಾಗುವ ಪಾದಯಾತ್ರೆಯು ದುದ್ದ ಗ್ರಾಮದಲ್ಲಿ ವಾಸ್ತವ್ಯ ಹೂಡುತ್ತದೆ. ಮಾ.೧೫ ರಂದು ಪಾದಯಾತ್ರೆ ಚಿಕ್ಕಕಡಲೂರು ದೊಡ್ಡಪುರ ಮಾರ್ಗವಾಗಿ ನೇರವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.