ಗಜೇಂದ್ರಗಡ: ದೇಶದ ಭವಿಷ್ಯದ ಶಕ್ತಿಯಾಗಿರುವ ವಿದ್ಯಾರ್ಥಿ ಸಮೂಹಕ್ಕೆ ಯಾವ ದೃಷ್ಟಿಕೋನದಿಂದ ನೋಡಿದರೂ ಶಿಕ್ಷಕರು ಮಾದರಿಯಾದರೆ ಮಾತ್ರ ವಿದ್ಯಾರ್ಥಿಗಳಲ್ಲಿ ನೈತಿಕತೆ ಮೂಡಲು ಸಾಧ್ಯ ಎಂದು ಹುಲಕೋಟಿ ಡಾ. ಅರ್ಜುನ ಗೊಳಸಂಗಿ ಹೇಳಿದರು.
ಸ್ಥಳೀಯ ಎಸ್.ಎಂ. ಭೂಮರಡ್ಡಿ ಪದವಿ ಪೂರ್ವ ಕಾಲೇಜಿನ ಸೋಮವಾರ ನಡೆದ ೨೦೨೪-೨೫ನೇ ಸಾಲಿನ ಸಾಹಿತ್ಯಿಕ, ಸಾಂಸ್ಕೃತಿಕ, ಕ್ರೀಡೆ ಹಾಗೂ ಎನ್‌ಎಸ್‌ಎಸ್ ಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಮಯಪಾಲನೆ, ಶಿಸ್ತು ಹಾಗೂ ಸಂಯಮದ ಪಾಠಗಳ ಜತೆಗೆ ಆಚಾರ, ವಿಚಾರ ಮತ್ತು ಸಂಸ್ಕೃತಿಯ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ಶಿಕ್ಷಕರು ಹಾಗೂ ಉಪನ್ಯಾಸಕರು ಅವುಗಳನ್ನು ಮೊದಲು ಅಳವಡಿಸಿಕೊಳ್ಳಲು ಮುಂದಾಗಬೇಕು. ಅಂದಾಗ ವಿದ್ಯಾರ್ಥಿಗಳಿಗೆ ಮೊದಲ ಮಾದರಿ ವ್ಯಕ್ತಿಯಾಗಿ ಬೋಧಕ ಸಿಬ್ಬಂದಿ ನಿಲ್ಲುತ್ತಾರೆ. ಹೀಗಾಗಿ ಶಿಕ್ಷಕರು ತೆರೆದ ಪುಸ್ತಕದಂತಿರಬೇಕು ಎಂದರು.ಗವಿವಿ ಸಂಘದ ಆಡಳಿತಾಧಿಕಾರಿ ಪ್ರಶಾಂತ ಶಿವಪ್ಪಗೌಡರ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಪಠ್ಯದ ಜತೆಗೆ ಕ್ರೀಡೆ, ಎನ್‌ಎಸ್‌ಎಸ್ ಸೇರಿ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗಲಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಜೆ.ಬಿ. ಗುಡಿಮನಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲುವು ಸಾಧಿಸಲು ನಿರಂತರ ಅಭ್ಯಾಸದ ಜತೆಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವ ಗುಣವನ್ನು ಮೈಗೂಡಿಸಿಕೊಂಡರೆ ಪ್ರತಿ ಹಂತದಲ್ಲೂ ದೊರಕುವ ಸೋಲು, ಗೆಲುವಿನ ಅನುಭವ ವಿದ್ಯಾರ್ಥಿಗಳನ್ನು ಗಟ್ಟಿಗೊಳಿಸುತ್ತವೆ. ಹೀಗಾಗಿ ಪ್ರತಿ ಪರೀಕ್ಷೆಗಳನ್ನು ಸಂಭ್ರಮದಂತೆ ಮತ್ತು ನಿರ್ಣಾಯಕ ಎನ್ನುವಂತೆ ತಯಾರಿ ನಡೆಸಬೇಕು. ಅಂದಾಗ ಮಾತ್ರ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯ ಎಂದರು.ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎನ್. ಶಿವರಡ್ಡಿ ಮಾತನಾಡಿದರು. ಈ ವೇಳೆ ೨೦೨೩-೨೪ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಸಾಧನೆ ಮಾಡಿದ ಉಪನ್ಯಾಸಕರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಸೌಂದರ್ಯ ನಿಂಬಲಗುಂದಿ, ಕಾರ್ತಿಕ್ ಬಿ.ಎನ್., ಉಪನ್ಯಾಸಕರಾದ ಎ.ಎಸ್. ವಡ್ಡರ, ಎಸ್.ಎನ್. ವಾಲಿಕಾರ, ಎಸ್.ಕೆ. ಕಟ್ಟಿಮನಿ, ಎಂ.ಎಲ್. ಕ್ವಾಟಿ, ವಿ.ಎಂ. ಜೂಚನಿ ಹಾಗೂ ಮಂಜುನಾಥ ನಾಗರಾಳ, ಶ್ರೀಕಾಂತ ಪೂಜಾರ, ಸುನೀಲ್ ಬಡ್ಡಿವಡ್ಡರ ಇದ್ದರು.