ನಿರಂತರ ಮಳೆ: ಕುಮಾರಧಾರಾ, ನೇತ್ರಾವತಿ ನದಿಗಳಲ್ಲಿ ಭಾರಿ ಹರಿವು

KannadaprabhaNewsNetwork | Published : Jul 16, 2024 12:34 AM

ಸಾರಾಂಶ

ದ.ಕ. ಜಿಲ್ಲೆಯ ಜೀವ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳಲ್ಲಿನ ಸೋಮವಾರ ಸಂಜೆ ನೀರಿನ ಹರಿವಿನಲ್ಲಿ ಹೆಚ್ಚಳ ಕಂಡು ಬಂದಿದ್ದು, ನೀರಿನ ಮಟ್ಟವು ೨೭.೫ ಮೀಟರ್ ದಾಖಲಾಗಿದೆ. ಆದಾಗ್ಯೂ ಅಪಾಯದ ಮಟ್ಟಕ್ಕಿಂತ ೪ ಮೀಟರ್ ಕೆಳಗೆ ನೀರಿನ ಹರಿವು ಇದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಜಿಲ್ಲೆಯ ಜೀವ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳಲ್ಲಿನ ಸೋಮವಾರ ಸಂಜೆ ನೀರಿನ ಹರಿವಿನಲ್ಲಿ ಹೆಚ್ಚಳ ಕಂಡು ಬಂದಿದ್ದು, ನೀರಿನ ಮಟ್ಟವು ೨೭.೫ ಮೀಟರ್ ದಾಖಲಾಗಿದೆ. ಆದಾಗ್ಯೂ ಅಪಾಯದ ಮಟ್ಟಕ್ಕಿಂತ ೪ ಮೀಟರ್ ಕೆಳಗೆ ನೀರಿನ ಹರಿವು ಇದೆ. ಕುಮಾರಧಾರಾ ಮತ್ತು ನೇತ್ರಾವತಿ ಎರಡೂ ನದಿ ಸಂಗಮ ಸ್ಥಾನದ ಬಳಿಯಲ್ಲಿ ಶಂಭೂರು ಡ್ಯಾಂನವರು ಅಳವಡಿಸದಿರುವ ಅಳತೆ ಮಾಪನದಲ್ಲಿ ದಾಖಲಾಗಿರುವ ಪ್ರಕಾರ ಸೋಮವಾರ ಸಂಜೆಯ ಹೊತ್ತಿನಲ್ಲಿ ನದಿ ಸಮುದ್ರ ಮಟ್ಠದಿಂದ ೨೭.೫ ಮೀಟರ್ ಎತ್ತರದಲ್ಲಿ ಹರಿಯುತ್ತಿರುವುದು ಕಂಡು ಬಂದಿದೆ. ಇಲ್ಲಿನ ಅಪಾಯದ ೩೧.೫ ಮೀಟರ್ ಆಗಿರುತ್ತದೆ. ಸೋಮವಾರ ಬೆಳಗ್ಗಿನಿಂದ ಕುಮಾರಧಾರಾ ನದಿಯಲ್ಲಿ ಏರಿಕೆ ಆಗುತ್ತಲೇ ಇದ್ದು, ಪ್ರವಾಹದ ರೀತಿಯಲ್ಲಿ ಹರಿದು ಬರುತ್ತಿದೆ. ನೇತ್ರಾವತಿ ನದಿಯಲ್ಲಿ ನೀರಿನ ಪ್ರವಾಹ ತುಸು ಕಡಿಮೆ ಇದ್ದು, ಮಧ್ಯಾಹ್ನದ ಬಳಿಕ ನಿಧಾನವಾಗಿ ಏರಿಕೆ ಆಗುತ್ತಿರುವುದು ಕಂಡು ಬಂದಿದೆ. ನದಿ ಪಾತ್ರದಲ್ಲಿರುವ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸ್ನಾನಘಟ್ಟದ ೩೬ ಮೆಟ್ಟಿಲುಗಳ ಪೈಕಿ ಸಂಜೆಯ ಹೊತ್ತಿಗೆ ೨೩ ಮೆಟ್ಟಿಲು ಮುಳುಗಡೆಯಾಗಿತ್ತು. ೧೩ ಮೆಟ್ಟಿಲು ಕಾಣುತ್ತಿತ್ತು.

ನದಿ ನೀರಿನ ಹರಿವಿನಲ್ಲಿ ಹೆಚ್ಚಳ ಕಾಣಿಸಿದ ಹಿನ್ನೆಲೆಯಲ್ಲಿ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿನ ಕೃಷಿ ಭೂಮಿಗಳು ಜಲಾವೃತಗೊಂಡಿವೆ.

ಬಂಟ್ವಾಳ ತಾಲೂಕಿನಾದ್ಯಂತ ಸೋಮವಾರ ಭಾರಿ ಮಳೆಯಾಗಿದ್ದು, ಹಲವೆಡೆ ಹಾನಿ ಸಂಭವಿಸಿದ್ದು, ನೇತ್ರಾವತಿ ನದಿ‌ ಮೈತುಂಬಿ ಹರಿಯುತ್ತಿದೆ. ಸೋಮವಾರ ಬೆಳಗ್ಗೆ 3.1 ಮೀಟರ್ ನಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿ‌ ನೀರಿನ‌ ಮಟ್ಟ ಸಂಜೆ‌ ವೇಳೆಗೆ 6 ಮೀಟರ್ ದಾಟಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆಡಳಿತ ನದಿಪಾತ್ರದ ಜನರಿಗೆ ಎಚ್ಚರಿಕೆ‌ ನೀಡಿದ್ದಾರೆ.ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ಸುಬ್ಬ ಪಾಟಾಳಿ ಎಂಬವರ ವಾಸ್ತವ್ಯದ ಮನೆಗೆ ತೆಂಗಿನ ಮರ ಬಿದ್ದು ತೀವ್ರ ಹಾನಿಯಾಗಿದೆ. ಅಮ್ಟಾಡಿ ಗ್ರಾಮದ ಕಲಾಯಿಕೋಡಿ ಎಂಬಲ್ಲಿ ಚಂದ್ರಶೇಖರ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.

Share this article