ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿರ್ಮಾಣವಾಗುತ್ತಿರುವ ಬಿಡದಿ ಟೌನ್ ಶಿಪ್ ಯೋಜನೆಯಿಂದ ದಲಿತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆದ್ದರಿಂದ ವದಂತಿಗಳಿಗೆ ದಲಿತರು ಕಿವಿಗೊಡಬಾರದು ಎಂದು ಪ್ರಾಧಿಕಾರದ ಸದಸ್ಯ ಎನ್.ನರಸಿಂಹಯ್ಯ ತಿಳಿಸಿದರು.
ಬಿಡದಿ ಹೋಬಳಿಯ ಅಂಚೀಪುರ ಗ್ರಾಮದಲ್ಲಿ ದಲಿತರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಹೋರಾಟಗಾರರು ದಲಿತರನ್ನು ಒಕ್ಕಲೆಬ್ಬಿಸಿ ಬರಿಗೈಯಲ್ಲಿ ಕಳುಹಿಸುತ್ತಾರೆ ಎಂದೆಲ್ಲಾ ಹೇಳುತ್ತಿದ್ದಾರೆ. ಇದೆಲ್ಲಾ ಶುದ್ಧ ಸುಳ್ಳಾಗಿದ್ದು ಯಾವುದೇ ಕಾರಣಕ್ಕೂ ಈ ಮಾತನ್ನು ನಂಬಬೇಡಿ. ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಿಗೆ ನಗರ ಪ್ರದೇಶಕ್ಕೆ ಸರಿಸಮಾನವಾದ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.ಅಂಚೀಪುರ ಗ್ರಾಮದಲ್ಲಿ ಬಹುತೇಕ ಎಲ್ಲರೂ ಜಮೀನು ಅನುಭೋಗದಲ್ಲಿ ಮಾತ್ರ ಇದ್ದಾರೆ. ಅವರ ಬಳಿ ಹಕ್ಕುಪತ್ರ, ಪೋಡಿ ಸೇರಿದಂತೆ ಯಾವುದೇ ದಾಖಲಾತಿ ಇಲ್ಲ. ಜೊತೆಗೆ ಭೂಸ್ವಾಧೀನ ಪ್ರಕ್ರಿಯೇಯು ಸಂಪೂರ್ಣ ಪೇಪರ್ ಲೇಸ್ ಆಗಿದೆ. ಪರಿಹಾರಕ್ಕೆ ಯಾವುದೇ ದಾಖಲಾತಿಗಳ ಅವಶ್ಯಕತೆ ಇಲ್ಲ. ಅನುಭೋಗದಲ್ಲಿದರಿಗೆ ಪರಿಹಾರ ಕೊಡಲಾಗುತ್ತಿದೆ. ಜೊತೆಗೆ ಪರಿಹಾರದ ಹಣವೂ ಒಂದೇ ರೀತಿ ಯಲ್ಲಿದ್ದು ಯಾವುದೇ ವ್ಯತ್ಯಾಸ ಹಾಗೂ ತಾರತಮ್ಯ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಈ ಯೋಜನೆಯಿಂದ ದಲಿತರು ಹೊಂದಿರುವ ಭೂಮಿಗೆ ಪ್ರಸ್ತುತ ರಿಯಲ್ ಎಸ್ಟೇಟ್ ಮಾರಾಟಗಾರರು ಪಿಟಿಸಿಎಲ್ ಕಾಯಿದೆಯನ್ನು ಮುಂದಿಟ್ಟುಕೊಂಡು ಕಡಿಮೆ ಬೆಲೆಗೆ ಭೂಮಿಯನ್ನು ಖರೀದಿಮಾಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ದಲಿತರಿಗೆ ವಂಚನೆ ಮಾಡುತ್ತಿದ್ದಾರೆ. ಇನ್ನು ಕೆಲ ದಲಿತರು ಸಂಕಷ್ಟದ ಸಮಯದಲ್ಲಿ ಭೂಮಿಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.ಆದರೆ, ಭೂಸ್ವಾಧೀನವಾದಲ್ಲಿ ಇತರ ರೈತರಿಗೆ ಸಿಗುವ ರೀತಿ ದಲಿತರಿಗೂ ಸಮಾನವಾಗಿ ಪರಿಹಾರ ಸಿಗಲಿದೆ ಎಂದು ಹೇಳಿದರು.ಹಣ ಬೇಡ ಎನ್ನುವ ರೈತರು ಯೋಜನೆ ವ್ಯಾಪ್ತಿಯಲ್ಲಿ ಸಹಭಾಗಿತ್ವ ವಹಿಸಲು ಅವಕಾಶವಿದೆ. ಪರಿಹಾರದ ಹಣ ಬೇಡ ಎನ್ನುವ ರೈತರಿಗೆ ನಮ್ಮ ಪ್ರಾಧಿಕಾರ ಶೇ.50 ರಷ್ಟು ಅಭಿವೃದ್ಧಿ ಪಡಿಸಿದ ಭೂಮಿಯನ್ನು ನೀಡಲಿದೆ. ಯೋಜನೆ ಪ್ರಾರಂಭವಾದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗಲಿದೆ. ಸ್ಥಳೀಯ ಯುವ ಜನರಿಗೆ ಬೇಕಾಗಿರುವ ತರಬೇತಿಯನ್ನು ನಮ್ಮ ಪ್ರಾಧಿಕಾರದ ವತಿಯಿಂದಲೇ ನೀಡಲಾಗುವುದು ಎಂದು ನರಸಿಂಹಯ್ಯ ತಿಳಿಸಿದರು.
ತಾಪಂ ಮಾಜಿ ಸದಸ್ಯ ಜಯಚಂದ್ರ ಮಾತನಾಡಿ, ಅಂಚೀಪುರ ಗ್ರಾಮದಲ್ಲಿ ವಾಸಿಸುತ್ತಿರುವರಿಗೆ ಇದುವರೆಗೆ ಹಕ್ಕುದಾಖಲೆ ಇಲ್ಲ. ಇಡೀ ಗ್ರಾಮ ಕಂದಾಯ ಭೂಮಿಯಾಗಿ ಉಳಿದಿದೆ. ಈ ಸಮಸ್ಯೆಯನ್ನು ಪರಿಹರಿಸಬೇಕು. ಜಿಬಿಡಿಎ ರೈತರಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಪ್ರಾಧಿಕಾರವೇ ಸಿದ್ದಪಡಿಸುತ್ತಿರುವುದು ಸಂತಸ ಕೆಲಸವಾಗಿದೆ. ಹಾಗೆಯೇ ಹೊಸ ಸ್ಮಾರ್ಟ್ ಸಿಟಿಯಲ್ಲಿ ಬೃಹತ್ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.ದಲಿತ ಮುಖಂಡರಾದ ರಮೇಶ್‌ಕುಮಾರ್, ಲಿಂಗರಾಜು, ಮಂಜುನಾಥ್, ಲಕ್ಷ್ಮಿಪತಿ, ದೇವರಾಜು, ಮಹದೇವಮ್ಮ, ಧನಲಕ್ಷ್ಮಿ ಗ್ರಾಪಂ ಮಾಜಿ ಅಧ್ಯಕ್ಷ ರವಿ, ಹಿರಿಯ ಮುಖಂಡರಾದ ಬೋರಯ್ಯ,ಬಸವರಾಜು, ಅಂಚೀಪುರ ಲಿಂಗಪ್ಪ ಇದ್ದರು.
12ಕೆಆರ್ ಎಂಎನ್ 7.ಜೆಪಿಜಿಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎನ್.ನರಸಿಂಹಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.