ಚಿತ್ರದುರ್ಗ: ಬಲ್ಕಿಸ್ ಬಾನು ಪ್ರಕರಣದ ತೀರ್ಪು ನ್ಯಾಯಾಂಗದ ಮೇಲೆ ಹೆಚ್ಚು ವಿಶ್ವಾಸ ಮೂಡುವಂತೆ ಮಾಡಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಬಿ.ಕೆ.ರಹಮತ್‍ವುಲ್ಲಾ ಹೇಳಿದರು.
ಕಲೆ, ಸಾಹಿತ್ಯ, ನೃತ್ಯ, ಜಾನಪದ ಚಟುವಟಿಕೆ ಕಡಿಮೆಯಾಗುತ್ತಿರುವುದರಿಂದ ಸರ್ಕಾರ ಪ್ರೋತ್ಸಾಹ ನೀಡಬೇಕು. ಪ್ರಪಂಚದಲ್ಲಿ ಮೊದಲು ಮನುಷ್ಯ ಜನ್ಮತಾಳಿದಾಗ ವ್ಯಾಜ್ಯ, ಅರಾಜಕತೆ ಉಂಟಾಯಿತು. ಆಗ ಮುಖಂಡರು, ಧರ್ಮಗುರುಗಳು ಪೂಜೆ, ಪುನಸ್ಕಾರದ ಮೂಲಕ ಸಮಾಜ ಸುಧಾರಣಗೆ ಶ್ರಮಿಸಿದರು. ಇತ್ತೀಚಿನ ದಿನಗಳಲ್ಲಿ ಹಿಂದಿನ ಕಾಲದ ಕಲೆಗಳು ನಶಿಸುತ್ತಿವೆ. ಡಾ.ರಾಜ್‍ಕುಮಾರ್ ಅವರ ಕಾಲದಲ್ಲಿನ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿತ್ತು. ಈಗ ಮುಂಗಾರು ಮಳೆ, ಚೆಲುವಿನ ಚಿತ್ತಾರದಂತ ಚಿತ್ರಗಳು ಮೂಡಿ ಬರುತ್ತಿವೆ. ಪೋಕ್ಸೋ ಕೇಸ್‍ಗಳು ಜಾಸ್ತಿಯಾಗುತ್ತಿದೆ. ಎಲ್ಲರೂ ಮೊಬೈಲ್ ಲೋಕದಲ್ಲಿ ಮುಳುಗಿದ್ದಾರೆಂದು ವಿಷಾದಿಸಿದರು.
ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, 11ನೇ ಶತಮಾನ ಕಲ್ಯಾಣ ಚಾಲುಕ್ಯರ ಕಾಲದಲ್ಲಿಯೇ ಚಿತ್ರದುರ್ಗದಲ್ಲಿ 7 ಸುತ್ತಿನ ಕೋಟೆಯಿತ್ತು. ಕೋಟೆಯನ್ನು ಬಲಾಢ್ಯಗೊಳಿಸಿದವರು ಪಾಳೆಯಗಾರರು. ಹಿರೇಗುಂಟನೂರು, ಹುಲ್ಲೂರಿನಲ್ಲಿರುವ ಶಾಸನದಲ್ಲಿ ಸುಳಿವು ಸಿಕ್ಕಿದೆ. ಮತ್ತಿ ತಿಮ್ಮಣ್ಣ ನಾಯಕ ಚಿತ್ರದುರ್ಗ ಪಾಳೆಯಗಾರರ ಮೂಲ ಪುರುಷ ಎನ್ನುವ ಮಾಹಿತಿ ನೀಡಿದರು.ಆರು ಮದಕೇರಿ ನಾಯಕರು ಚಿತ್ರದುರ್ಗದ ಕೋಟೆಯನ್ನು ಆಳಿದ್ದಾರೆ. ಚಿತ್ರದುರ್ಗ ಕೋಟೆಯ ರಚನೆ ನಿರಂತರವಾಗಿ ಸಾಗಿತ್ತು. ಪಾಳೆಯಗಾರರ ಕಾಲದಲ್ಲಿ ಬೇರೆ ಬೇರೆ ಕಡೆ ಅನೇಕ ಕೋಟೆಗಳನ್ನು ಕಟ್ಟಲಾಗಿದೆ. ಆಲಘಟ್ಟದ ಕೋಟೆ, ಸಿದ್ದಯ್ಯನ ಕೋಟೆ ವ್ಯವಸ್ಥಿತವಾಗಿ ನೋಡಿಕೊಳ್ಳಲು ಕಿಲ್ಲೆದಾರರುಗಳನ್ನು ನೇಮಿಸಲಾಗಿತ್ತು. ಚಿತ್ರದುರ್ಗದ ಕೋಟೆ ಅತ್ಯಂತ ಮುಖ್ಯವಾದುದು. ಅದರಂತೆ ಅಂಕಲಿಮಠ, ದವಳಪ್ಪನಗುಡ್ಡ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರು.