ಹೆಣ್ಣ ಮಕ್ಕಳ ಸಾಧನೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ

KannadaprabhaNewsNetwork |  
Published : Nov 16, 2025, 01:15 AM IST
ಸಿಕೆಬಿ-1 ನಗರ ಹೊರವಲಯದ  ಬಿಜಿಎಸ್ಐಎಂಎಸ್ ಕಾಲೇಜಿನಲ್ಲಿ,   ಎರ್ಫಡಿಸಿದ್ದ ಟ್ಯಾಲೆಂಟ್ ಹಂಟ್-2025 ಕಾರ್ಯಕ್ರಮದಲ್ಲಿ ಮಂಗಳಾನಾಥ ಸ್ವಾಮೀಜಿ  ಮಾತನಾಡಿದರು | Kannada Prabha

ಸಾರಾಂಶ

ನಮ್ಮ ಸಂಸ್ಕೃತಿಯಲ್ಲೂ ಕೂಡ ಹೆಣ್ಣು ನಾನಾ ರಂಗದಲ್ಲಿ ಕೆಲಸ ಕೈ ಗೊಂಡಿದ್ದಾಳೆ. ರಾಣಿಯಾಗಿ, ಸೇನಾನಿಯಾಗಿ, ರಾಜಕಾರಣಿಯಾಗಿ, ಅಧಿಕಾರಿಯಾಗಿ ಸಾಧನೆ ಮಾಡಿದ್ದರೂ ಎಂದೂ ತನ್ನತನ ಮರೆಯದೇ ಅವಳು ತನ್ನ ಸ್ವಂತ ಕರ್ತವ್ಯಗಳಿಂದ ವಿಮುಖಳಾಗಿಲ್ಲ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹೆಣ್ಣಿಗೆ ಶ್ರೇಷ್ಠ ಹಾಗೂ ಪವಿತ್ರ ಸ್ಥಾನ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇಂದಿನ ದಿನಗಳಲ್ಲಿ ಎಲ್ಲ ರಂಗಗಳಲ್ಲಿ ಹೆಣ್ಣು ಮಕ್ಕಳೇ ಮುಂದೆ ಬರುತ್ತಿದ್ದು, ಅವರಿಗೆ ಸರಿಯಾದ ರೀತಿಯ ಮಾರ್ಗದರ್ಶನ ಮತ್ತು ಪ್ರೋತ್ಸಾಹ ದೊರೆತಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳಾನಾಥಸ್ವಾಮೀಜಿ ತಿಳಿಸಿದರು.

ನಗರ ಹೊರವಲಯದ ಬಿಜಿಎಸ್ಐಎಂಎಸ್ ಕಾಲೇಜಿನಲ್ಲಿ, ಶನಿವಾರ ಏರ್ಪಡಿಸಿದ್ದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಟ್ಯಾಲೆಂಟ್ ಹಂಟ್-2025 ರ ಅಡಿ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಪದಬಂಧ ,ಪೋಸ್ಟರ್ ಮೇಕಿಂಗ್, ಕೊಲಾಜ್ ಮೇಕಿಂಗ್, ಬ್ರಾಂಡ್ ರಂಗೋಲಿ ಹಾಗೂ ಸೆಮಿನಾರ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಸ್ತ್ರೀಗೆ ಪೂಜ್ಯನೀಯ ಸ್ಥಾನ

ನಮ್ಮ ಸಂಸ್ಕೃತಿಯಲ್ಲೂ ಕೂಡ ಹೆಣ್ಣು ನಾನಾ ರಂಗದಲ್ಲಿ ಕೆಲಸ ಕೈ ಗೊಂಡಿದ್ದಾಳೆ. ರಾಣಿಯಾಗಿ, ಸೇನಾನಿಯಾಗಿ, ರಾಜಕಾರಣಿಯಾಗಿ, ಅಧಿಕಾರಿಯಾಗಿ ಸಾಧನೆ ಮಾಡಿದ್ದರೂ ಎಂದೂ ತನ್ನತನ ಮರೆಯದೇ ಅವಳು ತನ್ನ ಸ್ವಂತ ಕರ್ತವ್ಯಗಳಿಂದ ವಿಮುಖಳಾಗಿಲ್ಲ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹೆಣ್ಣಿಗೆ ಶ್ರೇಷ್ಠ ಹಾಗೂ ಪವಿತ್ರ ಸ್ಥಾನ ನೀಡಲಾಗಿದೆ. ಇಲ್ಲಿನ ಹಿರಿಮೆ ಎಂದರೆ ಸ್ತ್ರೀಯರನ್ನು ಪೂಜ್ಯ ಭಾವನೆಯಿಂದ ಕಂಡಿರುವುದು ಎಂದು ಶ್ರೀಗಳು ಹೇಳಿದರು.

ಎಲ್ಲ ನಾರಿಯರು ಪೂಜಿಸಲ್ಪಡುತಾರೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿದೆ. ನಮ್ಮಲ್ಲಿ ತಾಯಿಯನ್ನು ಸ್ವರ್ಗಕ್ಕಿಂತಲೂ ಮಿಗಿಲು ಎಂದು ಆರಾಧಿಸುತ್ತೇವೆ. ಜನಪದದಲ್ಲಿ ಮಾತೆಗಿಂತ ಬಂಧುಗಳಿಲ್ಲ ಎಂದಿದ್ದಾರೆ. ಆದರೆ ಅವಳ ಸಂಬಂಧ ಬಾಂಧವ್ಯಗಳಿಗಿಂತಲೂ ಮಿಗಿಲಾದುದು ಎಂದರು.

ಮಕ್ಕಳ ಸಂತೋಷ ತಾಯಿಗೆ ತೃಪ್ತಿ

ತಾಯಿ ತನ್ನ ಮಕ್ಕಳ ಸಂತೋಷದಲ್ಲೇ ತಾನು ತೃಪ್ತಿ ಪಟ್ಟುಕೊಳ್ಳುವಂತಹವಳು. ತಾಯಿಯ ಮಮತೆ ಪ್ರೀತಿ ವಾತ್ಸಲ್ಯ ಯಾವುದೇ ವಸ್ತುವಿಗೂ ಕೂಡ ಸರಿಸಾಟಿಯಾಗಲಾರದು. ಹಿಂದೂ ಸಂಸ್ಕೃತಿ ಅನೇಕ ಏಳು ಬೀಳುಗಳನ್ನು ಎದುರಿಸಿ, ಕ್ರೂರ ದಬ್ಬಾಳಿಕೆಗೆ ಸಿಕ್ಕಿ ನರಳಿದ್ದರೂ, ಇಂದು ಕೂಡ ಅದು ತನ್ನ ಸತ್ವವನ್ನು ಉಳಿಸಿಕೊಂಡು ಅಚ್ಚಳಿಯದೆ ಬೆಳಗುತ್ತಿರುವುದು ಈ ಮಣ್ಣಿನ ಹಣ್ಣು ಉಳಿಸಿಕೊಂಡು ಬಂದಿರುವ ತಾಳ್ಮೆ, ಸಹನಾ ಗುಣಗಳಿಂದ ಎಂದು ಹೇಳಿದರು.

ತಾನು ನೊಂದರೂ ಇತರ ಕಷ್ಟ ಪಡುವ ಜೀವಿಗಳಲ್ಲಿ ಅನುಕಂಪಪಡುವ ಅವಳ ಗುಣ ಎಂದಿಗೂ ಆದರಣೀಯ. ಇಂದೂ ಕೂಡ ವಿದೇಶಿಯರು ನಮ್ಮ ಸಂಸ್ಕೃತಿಯನ್ನು ಜ್ಞಾನಕ್ಕಾಗಿ, ಮನೋಸ್ಥೈರ್ಯಕ್ಕಾಗಿ, ಶಾಂತಿಗಾಗಿ ಮತ್ತು ಹೆಣ್ಣಿನ ಸಹನಾಗುಣಕ್ಕಾಗಿ ಗೌರವಿಸುತ್ತಾರೆ ಎಂದು ತಿಳಿಸಿದರು.

ಆಕರ್ಷಣೆಗೆ ಒಳಗಾಗದಿರಿ

ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ, ನಂಬಿಕೆ ಬೆಳೆಯುತ್ತವೆ. ಯೌವನ ಸಮಯದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಯಾವುದೇ ತರಹದ ಆಕರ್ಷಣೆಗೆ ಒಳಗಾಗಿ ತಪ್ಪು ಹಾದಿ ಹಿಡಿಯದೇ, ವಿದ್ಯಾಬ್ಯಾಸದತ್ತ ಗಮನಹರಿಸಿ, ಜೀವನದ ತಾತ್ಪರ್ಯ ಅರಿತುಕೊಂಡು ಮನೆಗೆ-ಊರಿಗೆ, ಮುಖ್ಯವಾಗಿ ಪೋಷಕರಿಗೆ ಕೀರ್ತಿ ತರುವ ಹಾಗೆ ಉತ್ತಮ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ , ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹಾಗೂ ನೆರೆಯ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆ ಸೇರಿದಂತೆ 90 ಕಾಲೇಜುಗಳಿಂದ 1500 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ನೆರೆಯ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಶಿಕ್ಷಣ ತಜ್ಞ ಡಾ.ಈಶ್ವರ್ ರೆಡ್ಡಿ, ಬಿಜಿಎಸ್ ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎನ್. ಶಿವರಾಮರೆಡ್ಡಿ, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಆರ್.ವೆಂಕಟೇಶ್ ಬಾಬುರವರು ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ನೀಡಿದರು.

PREV

Recommended Stories

ಡಾ. ವಿ.ಎಸ್.ವಿ. ಪ್ರಸಾದರ ಸಮಾಜ ಸೇವೆ ಅವಿಸ್ಮರಣೀಯ
ಮಕ್ಕಳು ದೇಶದ ಆಸ್ತಿ: ಆಹಾರ ಸಚಿವ ಮುನಿಯಪ್ಪ