ನೊಳಂಬ ಸಮುದಾಯದ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯ

KannadaprabhaNewsNetwork |  
Published : May 15, 2026, 01:15 AM IST
9999 | Kannada Prabha

ಸಾರಾಂಶ

ನೊಳಂಬ ಸಮುದಾಯದ ಚರಿತ್ರೆ ಮತ್ತು ಸಂಸ್ಕೃತಿ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುವ ಅಗತ್ಯವಿದೆ ಎಂದು ತಿಪಟೂರು ಶಾಸಕ ಕೆ. ಷಡಕ್ಷರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುನೊಳಂಬ ಸಮುದಾಯದ ಚರಿತ್ರೆ ಮತ್ತು ಸಂಸ್ಕೃತಿ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುವ ಅಗತ್ಯವಿದೆ ಎಂದು ತಿಪಟೂರು ಶಾಸಕ ಕೆ. ಷಡಕ್ಷರಿ ಅಭಿಪ್ರಾಯ ವ್ಯಕ್ತಪಡಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ಡಾ. ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ತುಮಕೂರು ವಿವಿ ಮತ್ತು ಬೆಂಗಳೂರಿನ ನೊಳಂಬ ಲಿಂಗಾಯತ ಸಂಘದ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ನೊಳಂಬ ಸಂಸ್ಕೃತಿ ಅಧ್ಯಯನ ಪೀಠದ ಉದ್ಘಾಟನಾ ಕಾರ್ಯಕ್ರಮ ಹಾಗೂ ನೊಳಂಬ ಸಂಸ್ಕೃತಿ ಸಂಪದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೊಳಂಬರ ಚರಿತ್ರೆ, ಸಂಸ್ಕೃತಿಯ ಹಾಗೂ ಸಮುದಾಯದ ಇತಿಹಾಸದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ಜನರಿಗೆ ತಲುಪಿಸುವ ಕಾರ್ಯ ಅತ್ಯಗತ್ಯ ಎಂದ ಅವರು, ನೊಳಂಬರ ಇತಿಹಾಸದ ಬಗ್ಗೆ ಇಂದಿನ ಪೀಳಿಗೆಗೆ ಮಾತ್ರವಲ್ಲದೆ ಸ್ವತಃ ಸಮುದಾಯದವರಿಗೂ ಹೆಚ್ಚಿನ ಅರಿವಿಲ್ಲದಿರುವುದು ವಿಷಾದನೀಯ ಸಂಗತಿ ಎಂದರು.

ವಿಚಾರ ಸಂಕಿರಣದ ಮೂಲಕ ಹೊಸ ಸಂಶೋಧನೆಗಳು ಮತ್ತು ಆವಿಷ್ಕಾರಗಳು ಬೆಳಕಿಗೆ ಬರಬೇಕು. ಸಂಶೋಧನೆಯ ಫಲಿತಾಂಶಗಳನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ಬಳಸಿಕೊಳ್ಳಬೇಕು. ನೊಳಂಬ ಸಮುದಾಯವು ಸುಮಾರು 30ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಒಂದು ಬಲಿಷ್ಠ ಸಮುದಾಯವಾಗಿದೆ. ಈ ಸಮುದಾಯದಿಂದ ಈ ಹಿಂದೆ ಟಿ.ಎಂ. ಮಂಜುನಾಥ್ ಅವರು ಪ್ರಥಮವಾಗಿ ಮಂತ್ರಿಯಾಗಿದ್ದರು. ನಂತರ ಮಾಧುಸ್ವಾಮಿ ಅವರು ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜಕೀಯದಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದರೂ, ಸಮಾಜಕ್ಕೆ ಕೊಡುಗೆ ನೀಡುವುದು ಮುಖ್ಯ ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಉತ್ತಮ ಪರಿಸರದಲ್ಲಿ ಇಂತಹ ಅರ್ಥಪೂರ್ಣ ವಿಚಾರಗಳು ಚರ್ಚೆಯಾಗುತ್ತಿರುವುದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದ ಅವರು, ನೊಳಂಬ ಸಂಸ್ಕೃತಿ ಅಧ್ಯಯನ ಪೀಠಕ್ಕೆ 5 ಲಕ್ಷ ರು. ನೀಡುವುದಾಗಿ ಭರವಸೆ ನೀಡಿದರು.ಅಧ್ಯಯನ ಪೀಠದ ಪ್ರೇರಣಾ ಲಾಂಛನ ಅನಾವರಣಗೊಳಿಸಿದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ನಮ್ಮ ಸಂಸ್ಕೃತಿ ಮತ್ತು ಇತಿಹಾಸವನ್ನು ಮರೆತು ಬದುಕುತ್ತಿದ್ದೇವೆ. ಇತಿಹಾಸ ಗೊತ್ತಿಲ್ಲದವನು ವಿಜ್ಞಾನ ಓದಲು ಸಾಧ್ಯವಿಲ್ಲ. ಹಾಗಾಗಿ, ನಮ್ಮ ಮಕ್ಕಳಿಗೆ ನಾವು ಯಾರು ಮತ್ತು ನಮ್ಮ ಇತಿಹಾಸವೇನು ಎಂಬ ಅರಿವು ಮೂಡಿಸುವ ನಿಟ್ಟಿನಲ್ಲಿ ನೊಳಂಬ ಅಧ್ಯಯನ ಪೀಠವು ಮಹತ್ವದ ಪಾತ್ರ ವಹಿಸಲಿದೆ ಎಂದರು.ಈ ಅಧ್ಯಯನ ಪೀಠವು ವಿಶ್ವವಿದ್ಯಾನಿಲಯ ಸ್ವಯಂ ಪ್ರೇರಿತವಾಗಿ ಕೈಗೊಂಡ ಕಾರ್ಯವಲ್ಲ. ಬದಲಿಗೆ, ಪರಶಿವಮೂರ್ತಿ ಹಾಗೂ ಯೋಗೇಶ್ವರಪ್ಪ ಅವರಂತಹ ಶಿಕ್ಷಣ ತಜ್ಞರ ನಿರಂತರ ಕಾಳಜಿಯ ಫಲವಾಗಿದೆ. ನಾನು ಸಚಿವನಾಗಿದ್ದ ಅವಧಿಯಲ್ಲಿ ಈ ಇಬ್ಬರು ಗಣ್ಯರು ಪೀಠದ ಅವಶ್ಯಕತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು ಎಂದು ಹೇಳಿದರು. ತುಮಕೂರು ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ನೊಳಂಬರ ಇತಿಹಾಸ ಎಷ್ಟು ವ್ಯಾಪಕವಾಗಿತ್ತು ಎಂಬುದು ಯೋಗೇಶ್ವರಪ್ಪನವರ ಪುಸ್ತಕ ಓದಿದ ಮೇಲೆ ಅರಿವಿಗೆ ಬರುತ್ತಿದೆ. ಈ ಅರಿವನ್ನು ಜನಸಾಮಾನ್ಯರಿಗೆ ತಲುಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ನಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗಾಗಿ ದಾಖಲಿಸುವ (ಡಾಕ್ಯುಮೆಂಟರಿ) ಕಾರ್ಯ ತುರ್ತಾಗಿ ಆಗಬೇಕಿದೆ ಎಂದರು.ತುಮಕೂರು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ.ವಿ. ಪರಶಿವಮೂರ್ತಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷ ಬಿ.ಕೆ. ಚಂದ್ರಶೇಖರ್, ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಆರ್. ಪಾಟೀಲ್, ತುಮಕೂರು ವಿವಿ ಸಲಹಾ ಸಮಿತಿ ಸದಸ್ಯ ಹಾಗೂ ನಿಕಟಪೂರ್ವ ಸಿಂಡಿಕೇಟ್ ಸದಸ್ಯ ಟಿ.ಎಸ್. ಸುನಿಲ್ ಪ್ರಸಾದ್, ಬೇಲೂರು ಮಾಜಿ ಶಾಸಕ ಲಿಂಗೇಶ್, ವಿವಿಯ ನೊಳಂಬ ಸಂಸ್ಕೃತಿ ಅಧ್ಯಯನ ಪೀಠದ ನಿರ್ದೇಶಕ ಡಾ. ನೀಲಕಂಠ ಎನ್.ಟಿ. ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

4.50 ಲಕ್ಷ ಸಾಲಕ್ಕೆ 6 ಎಕರೆ ಭೂಮಿ ಹರಾಜು ಹಾಕಿದ ಬ್ಯಾಂಕ್‌
ಚೆಕ್‌ ಡ್ಯಾಂ ನಿರ್ಮಾಣಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಚಾಲನೆ