ನಾಲ್ಕೇ ದಿನಕ್ಕೆ ಇಪ್ಪತ್ಮೂರು ಲಕ್ಷಕ್ಕೂ ಹೆಚ್ಚು ಜನರ ಭೇಟಿ..!

KannadaprabhaNewsNetwork |  
Published : Sep 17, 2025, 01:06 AM IST
16ಡಿಡಬ್ಲೂಡಿ4,4ಎ ಹಾಗೂ 5ಧಾರವಾಡ ಕೃಷಿ ಮೇಳಕ್ಕೆ ಕೊನೆ ದಿನ ಮಂಗಳವಾರ ಆಗಮಿಸಿದ್ದ ಜನಸ್ತೋಮ | Kannada Prabha

ಸಾರಾಂಶ

ಮೊದಲ ದಿನವೇ ಟ್ರಾಕ್ಟರ್‌ ಬಿದ್ದು ಓರ್ವ ಮೃತಪಟ್ಟ ದುರ್ಘಟನೆ ಹೊರತು ಪಡಿಸಿ ಮೇಳವು ನಾಲ್ಕು ದಿನಗಳ ಕಾಲ ಸುಸೂತ್ರವಾಗಿ ನಡೆಯಿತು.

ಧಾರವಾಡ: ಪೌಷ್ಟಿಕ ಆಹಾರ ಭದ್ರತೆಗೆ ಸಾಂಪ್ರದಾಯಿಕ ತಳಿಗಳು ಹಾಗೂ ಮಣ್ಣು ಆರೋಗ್ಯ ತಾಂತ್ರಿಕತೆಗಳ ಘೋಷವಾಕ್ಯದ ಅಡಿ ಇಲ್ಲಿಯ ಕೃಷಿ ವಿಶ್ವವಿದ್ಯಾಲಯವು ತನ್ನ ಆವರಣದಲ್ಲಿ ಕಳೆದ ಸೆ. 13 ರಿಂದ ನಡೆಸಿದ ನಾಲ್ಕು ದಿನಗಳ ರೈತರ ಜಾತ್ರೆ ಸಮಾಪ್ತಿಗೊಂಡಿದೆ.

ಮೊದಲ ದಿನವೇ ಟ್ರಾಕ್ಟರ್‌ ಬಿದ್ದು ಓರ್ವ ಮೃತಪಟ್ಟ ದುರ್ಘಟನೆ ಹೊರತು ಪಡಿಸಿ ಮೇಳವು ನಾಲ್ಕು ದಿನಗಳ ಕಾಲ ಸುಸೂತ್ರವಾಗಿ ನಡೆಯಿತು. ಮೇಳದ 2ನೇ ದಿನ ಬೀಜಮೇಳಕ್ಕೆ ರಾಜ್ಯಪಾಲರು ಚಾಲನೆ ನೀಡಿ, ಆಧುನಿಕ ಕೃಷಿಗೆ ನಾವು ಹೊರಳಿದರೂ ಕೃಷಿ ಉತ್ಪಾದಕತೆಯಲ್ಲಿ ಇನ್ನೂ ಹಿಂದಿದ್ದು, ಕೃಷಿಯಲ್ಲಿ ಯುವಕರು ಹಾಗೂ ಮಹಿಳೆಯರು ಸಕ್ರೀಯವಾಗಿ ಪಾಲ್ಗೊಳ್ಳಲು ಸಲಹೆ ನೀಡಿದರು.

ಇನ್ನು 3ನೇ ದಿನ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡ ಮೇಳದಲ್ಲಿ ಕೃಷಿ ವಿಶ್ವವಿದ್ಯಾಲಯದ ಸಂಶೋಧನೆಯು ರೈತರಿಗೆ ಸಮರ್ಪಕವಾಗಿ ಮುಟ್ಟಲಿ ಎನ್ನುವುದರ ಜತೆಗೆ ಹಸಿರು ಕ್ರಾಂತಿ ವೇಳೆ ಇದ್ದ ಆಹಾರ ಉತ್ಪಾದನೆ ಈಗ ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಕೃಷಿ ಸಚಿವರು, ವಿಪ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸಂತೋಷ ಲಾಡ್ ಹಾಗೂ ಅನೇಕರಿದ್ದರು.

ರೈತರಿಂದ ರೈತರಿಗಾಗಿ: ಇನ್ನೂ, ಧಾರವಾಡ, ಹಾವೇರಿ, ಉತ್ತರ ಕನ್ನಡ, ವಿಜಯಪೂರ, ಬಾಗಲಕೋಟ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿಯನ್ನು ಮೇಳದಲ್ಲಿ ಪ್ರದಾನ ಮಾಡಲಾಯಿತು. ರೈತರಿಂದ ರೈತರಿಗಾಗಿ ಕಾರ್ಯಕ್ರಮ ಮೂಲಕ ರೈತರ ಸಾಧನೆಗಳನ್ನು ರೈತರಿಗೆ ತಿಳಿಸಲಾಯಿತು. ಕೃಷಿ ತಜ್ಞರೊಂದಿಗೆ ಸಮಾಲೋಚನೆ, ಕೃಷಿ ನವ ಉದ್ಯಮಗಳ ಪ್ರದರ್ಶನ, ರೈತರ ಆವಿಷ್ಕಾರಗಳು, ವಿಶೇಷ ರೈತರೊಂದಿಗೆ ಸಂವಾದ ಸೇರಿದಂತೆ ಹತ್ತಾರು ಚಟುವಟಿಕೆಗಳನ್ನು ಮೇಳದಲ್ಲಿ ಮಾಡಲಾಯಿತು.

ಸುಮಾರು 700ಕ್ಕೂ ಹೆಚ್ಚು ವಿವಿಧ ಮಳಿಗೆಗಳಿಗೆ ನಿತ್ಯ ಲಕ್ಷಾಂತರ ಜನ ರೈತರು, ಕೃಷಿ ಆಸಕ್ತರು ಭೇಟಿ ಮಾಡಿ ತಮಗೆ ಬೇಕಾದ ತಾಂತ್ರಿಕತೆಗಳ ಬಗ್ಗೆ ಮಾಹಿತಿ ಪಡೆದರು. ಈ ವರ್ಷವೂ ಫಲಪುಷ್ಪ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ, ಜಾನುವಾರು ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನಗಳು ಸೇರಿದಂತೆ ಸಾಂಪ್ರದಾಯಿಕ ತಳಿಗಳ ಪ್ರಾಮುಖ್ಯತೆ ಹಾಗೂ ಸಂರಕ್ಷಣೆ ಬಗ್ಗೆಯೂ ಜನರಿಗೆ ತಿಳುವಳಿಕೆ ನೀಡಲಾಯಿತು. ವಿವಿಧ ಕಂಪನಿಗಳ ಹೈಬ್ರೀಡ್‌ ಬೀಜಗಳ ಬದಲು ರೈತರೇ ಉತ್ಪಾದನೆ ಮಾಡಿದ ಬೀಜಗಳನ್ನು ಬಿತ್ತುವ ಮೂಲಕ ಸ್ವಾವಲಂಬನೆ ಪಡೆಯಲು ರೈತರಿಗೆ ಗೋಷ್ಠಿಗಳಲ್ಲಿ ತಿಳಿ ಹೇಳಲಾಯಿತು.

ಮೇಳದಲ್ಲಿ ಬರೀ ಕೃಷಿ ಮಾತ್ರವಲ್ಲದೇ ಜನಸಾಮಾನ್ಯರಿಗೂ ಮೇಳ ಅನುಕೂಲವಾಯಿತು. ಕೃಷಿ ಪರಿಕರವಲ್ಲದೇ ಬಟ್ಟೆ, ತಿಂಡಿ- ತನಿಸುಗಳ ಮಳಿಗೆಗಳು, ಬಟ್ಟೆ, ಆಲಂಕಾರಿಕ ವಸ್ತುಗಳು, ಆಹಾರ ಮೇಳಗಳು ಸಹ ಜನರನ್ನು ಬಹುವಾಗಿ ಆಕರ್ಷಿಸಿದವು. ಸಣ್ಣ -ಪುಟ್ಟ ವ್ಯಾಪಾರಿಗಳಿಗೆ ಮೇಳ ತುಂಬ ಆದಾಯ ಮಾಡಿಕೊಟ್ಟಿತು. ರೊಟ್ಟಿ ಊಟದ ಮಳಿಗೆಗಳು ಉತ್ತಮ ಲಾಭ ಪಡೆದವು. ಜತೆಗೆ ನಾನಾ ಭಾಗದಿಂದ ಬಂದ ಲಕ್ಷಾಂತರ ಜನರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಗದ್ದಲ -ಗೊಂದಲ, ಗಲಾಟೆಗಳು ಉಂಟಾಗದಂತೆ ಟ್ರಾಫಿಕ್‌ ಹಾಗೂ ಸಿವಿಲ್‌ ಪೊಲೀಸರು ತೀವ್ರ ಪರದಾಡಬೇಕಾಯಿತು.

ಕೃಷಿಯಲ್ಲಿನ ಆಧುನಿಕ ತಂತ್ರಜ್ಞಾನ, ಅನ್ವೇಷಣೆ ಮತ್ತು ರೈತರ ಸಮಸ್ಯೆಗಳಿಗೆ ಪರಿಹಾರವನ್ನು ಅಲ್ಪ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ರೈತರನ್ನು ತಲುಪಿಸುವುದೇ ಈ ಮೇಳದ ಉದ್ದೇಶ. ಈ ಹಿನ್ನೆಲೆಯಲ್ಲಿ ಈ ಬಾರಿ ನಾಲ್ಕೇ ದಿನಗಳಿಗೆ ಬರೋಬ್ಬರಿ 23.74 ಲಕ್ಷ ಜನರು ಭೇಟಿ ನೀಡಿದ್ದು ದಾಖಲೆ ಹೌದು. 700ಕ್ಕೂ ಹೆಚ್ಚು ಮಳಿಗೆ ಹಾಕಿದ್ದು, ರೈತರಿಂದ, ಕೃಷಿ ಆಸಕ್ತರಿಂದ ಮೇಳದ ಬಗ್ಗೆ ಉತ್ತಮ ಸ್ಪಂದನೆ ದೊರೆತಿದ್ದು, ಒಟ್ಟಾರೆ ಮೇಳ ಯಶಸ್ವಿಯಾಗಿದೆ ಎಂದು ಕೃಷಿ ವಿವಿ ಕುಲಪತಿ ಡಾ. ಪಿ.ಎಲ್‌. ಪಾಟೀಲ ಹೇಳಿದರು.

23.74 ಲಕ್ಷ ಜನರ ಭೇಟಿ: ಕೃಷಿ ವಿವಿ ಅಧಿಕೃತವಾಗಿ ನೀಡಿರುವ ಪ್ರಕಟಣೆ ಪ್ರಕಾರ, ಮೇಳದ ಮೊದಲ ದಿನ ಶನಿವಾರ 3.65 ಲಕ್ಷ, 2ನೇ ದಿನ ಭಾನುವಾರ 7.74 ಲಕ್ಷ ಜನರು, ಸೋಮವಾರ 8.6 ಲಕ್ಷ ಜನರು ಹಾಗೂ ಕೊನೆ ದಿನ ಮಂಗಳವಾರ 3.75 ಲಕ್ಷ ಜನ ಸೇರಿ ಒಟ್ಟಾರೆ ನಾಲ್ಕು ದಿನಗಳಲ್ಲಿ 23.74 ಲಕ್ಷ ಜನರು ಭೇಟಿ ನೀಡಿದ್ದಾರೆ.

ಕೋಟಿ ಮೊತ್ತದ ಬೀಜ ಮಾರಾಟ: 13ರಂದು ₹21.78 ಮೌಲ್ಯದ 271 ಕ್ವಿಂಟಾಲ್‌ ಬಿತ್ತನೆ ಬೀಜ, ಸೆ. 14ರಂದು ₹25.55 ಲಕ್ಷ ಮೌಲ್ಯದ 265 ಕ್ವಿಂಟಾಲ್‌ ಬೀಜಗಳು, ಸೆ. 15ರಂದು ₹29.73 ಮೌಲ್ಯದ 325 ಕ್ವಿಂಟಾಲ್‌ ಹಾಗೂ ಕೊನೆಯ ದಿನ ₹24.68 ಮೌಲ್ಯದ 278 ಕ್ವಿಂಟಾಲ್‌ ಬಿತ್ತನೆ ಬೀಜ ಒಟ್ಟಾರೆ ನಾಲ್ಕು ದಿನಗಳಿಗೆ ₹1.1 ಕೋಟಿ ಮೌಲ್ಯದ 1141 ಕ್ವಿಂಟಾಲ್‌ ಬಿತ್ತನೆ ಬೀಜಗಳು ಮಾರಾಟವಾಗಿವೆ ಎಂದು ಕೃಷಿ ವಿವಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಂಗಭದ್ರಾ ಸಂರಕ್ಷಣೆಗೆ ಜನಾಂದೋಲನ ಅವಶ್ಯಕ: ಬಸವರಾಜ ಪಾಟೀಲ್
ದೇಶಕ್ಕೆ ಅನ್ನ ಕೊಡುವ ರೈತನನ್ನು ಗೌರವದಿಂದ ಕಾಣಿ