ಸಿ.ಸಿದ್ದರಾಜು, ಮಾದಹಳ್ಳಿ
ಭಾರತೀಯ ಸಂಸ್ಕೃತಿ, ಧಾರ್ಮಿಕತೆ ಹಾಗೂ ಭಾವೈಕ್ಯತೆ ಮೂಡಿಸುವ ದಿಸೆಯಲ್ಲಿ ಪಟ್ಟಣದಲ್ಲಿ ನಡೆಯುತ್ತಿರುವ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವಕ್ಕೆ ಕಳೆದ ಮೂರು ದಿನಗಳಲ್ಲೇ 2 ಲಕ್ಷಕ್ಕೂ ಹೆಚ್ಚು ಮಂದಿ ಸಾಕ್ಷಿಯಾಗಿದ್ದಾರೆ.
ಶಾಂತಿ ಕಾಲೇಜು ಮುಂಭಾಗದ 33 ಎಕರೆ ಪ್ರದೇಶದ ವಿಸ್ತಾರದ ಜಾಗದಲ್ಲಿ ಆಯೋಜಿಸಿರುವ ಜಯಂತ್ಯುತ್ಸವಕ್ಕೆ ಮಂಡ್ಯ ಜಿಲ್ಲೆಯ ಮಳವಳ್ಳಿ, ಪಾಂಡವಪುರ ಸೇರಿದಂತೆ 7 ತಾಲೂಕುಗಳ ಭಕ್ತರು, ಮೈಸೂರು, ಚಾಮರಾಜನಗರ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ತಂಡೋಪತಂಡವಾಗಿ ಆಗಮಿಸಿ ಶ್ರೀ ಶಿವರಾತ್ರೀಶ್ವರರ ಉತ್ಸವಕ್ಕೆ ನಮಿಸಿ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಐತಿಹಾಸಿಕ, ಧಾರ್ಮಿಕ ಕ್ಷೇತ್ರ ಹಾಗೂ ಬೊಪ್ಪೇಗೌಡನಪುರದ ಶ್ರೀ ಮಂಟೇಸ್ವಾಮಿ ಪುಣ್ಯಕ್ಷೇತ್ರದಲ್ಲಿ ಮೊದಲ ಬಾರಿ ಜಯಂತ್ಯುತ್ಸವ ಆಚರಿಸುತ್ತಿರುವುದರಿಂದ ಪಕ್ಷಾತೀತ, ಜ್ಯಾತ್ಯತೀತವಾಗಿ ಸ್ಥಳೀಯರು ಉತ್ತಮ ಬೆಂಬಲ ನೀಡುತ್ತಿರುವುದರಿಂದ ಯಾವುದೇ ಕೊರತೆಯಾಗದಂತೆ ಅತ್ಯಂತ ವ್ಯವಸ್ಥಿತವಾಗಿ , ಯಶಸ್ವಿಯಾಗಿ ಜರುಗುತ್ತಿದೆ.
ಪ್ರತಿನಿತ್ಯ ದಾಸೋಹ ಸಿದ್ಧಪಡಿಸಿದ ತಂಡ ಪರಿಶೀಲನೆ ನಡೆಸಿದ ನಂತರ ಭಕ್ತರಿಗೆ ಬಡಿಸಲಾಗುತ್ತಿದೆ. ಮೊದಲ ದಿನದಿಂದ ವಿವಿಧ ರೀತಿಯ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಆಹಾರ ಸಮಿತಿ ಸದಸ್ಯರು, ಅಡುಗೆ ಸಿಬ್ಬಂದಿಗಳು ಅಗಲು ರಾತ್ರಿ ಎನ್ನದೆ ದುಡಿದು ಭಕ್ತರ ಹಸಿವನ್ನು ನೀಗಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಜಯಂತ್ಯುತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರುತ್ತಿರುವ ಭಕ್ತರಿಗೆ ವ್ಯವಸ್ಥಿತ, ಸಾರೋಪಾದಿಯಲ್ಲಿ ದಾಸೋಹ ನಡೆಸಲಾಗುತ್ತಿದೆ. ಇನ್ನೂ ಮೂರು ದಿನಗಳ ಕಾಲ ಜಯಂತ್ಯುತ್ಸವ ಇರಲಿದ್ದು 5 ಲಕ್ಷಕ್ಕೂ ಹೆಚ್ಚಿನ ಮಂದಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಜಯಂತ್ಯುತ್ಸವದ ವೈಭವವನ್ನು ಹೆಚ್ಚಿಸಲು ಸುತ್ತೂರು ಮಠ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ತೆರೆದಿರುವ 130ಕ್ಕೂ ಹೆಚ್ಚು ವಸ್ತುಪ್ರದರ್ಶನ ಮಳಿಗೆಗಳು ಭಕ್ತರು, ಜನಸಾಮಾನ್ಯರ ಗಮನ ಸೆಳೆಯುತ್ತಿವೆ. ಭೂಮಿ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ರಾಸಾಯನಿಕ ಮುಕ್ತ, ಸಂಪೂರ್ಣ ಸಾವಯವ ಕೃಷಿ ಕುರಿತ ಮಾಹಿತಿ ಜನರನ್ನು ಆಕರ್ಷಿಸುತ್ತಿದೆ. ಮತ್ತೊಂದೆಡೆ ಕೃಷಿ ಇಲಾಖೆ ಜಲಾನಯನ ಕಾರ್ಯಕ್ರಮದ ಚಿತ್ರಣ ಅದ್ಬುತವಾಗಿದೆ. ಇಳಿಜಾರಿನ ಪ್ರದೇಶದಲ್ಲಿ ನೀರು ಉಳಿಕೆ ಜೊತೆಗೆ ಭೂಮಿ ಸಂರಕ್ಷಣೆಗೆ ಆದ್ಯತೆ ನೀಡಲು ಕೃಷಿ ಇಲಾಖೆ ಯೋಜನೆಗಳನ್ನು ಜನರಿಗೆ ತೋರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.
ಸುತ್ತೂರು ಮಠದ ಪೀಠಾಧೀಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತದ ಸಹಕಾರದಲ್ಲಿ ವೇದಿಕೆ ಕಾರ್ಯಕ್ರಮಗಳಲ್ಲಿ ದಿನನಿತ್ಯ ವಿವಿಧ ವಿಚಾರ ಸಂಕಿರಣಗಳು, ಭಾರತೀಯ ಸಂಸ್ಕೃತಿ, ಧಾರ್ಮಿಕ ಹಾಗೂ ಭಾವೈಕ್ಯತೆಯನ್ನು ಭಕ್ತರು, ಯುವಜನರಿಗೆ ತಿಳಿಸುವ ಕಾರ್ಯಕ್ರಮಗಳು ಉಪಯುಕ್ತವಾಗಿವೆ.