- ದಾವಿವಿ, ಮೈವಿವಿ, ಯುನಿಸೆಫ್ ಸಹಯೋಗದಲ್ಲಿ ಎರಡು ದಿನಗಳ ಕಾರ್ಯಾಗಾರದಲ್ಲಿ ಡಾ.ಶ್ರೀಧರ್ ಮ್ಯಾವಂಕಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಹನ ಸಂಚಾರ ದಿನೇದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ರಸ್ತೆ ಸುರಕ್ಷತೆ ಪ್ರಮುಖ ಚಿಂತನೆಯ ವಿಷಯವಾಗಿದೆ ಎಂದು ಯುನಿಸೆಫ್ ವೈದ್ಯಕೀಯ ಸಲಹೆಗಾರ ಡಾ.ಶ್ರೀಧರ ಮ್ಯಾವಂಕಿ ಹೇಳಿದರು.ಗುರುವಾರ ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಮೈಸೂರು ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಯುನಿಸೆಫ್ ಸಹಯೋಗದೊಂದಿಗೆ ಏರ್ಪಡಿಸಿದ್ದ ಎರಡು ದಿನಗಳ ಮಕ್ಕಳ ಸಮಸ್ಯೆ ವರದಿಗಾರಿಕೆ ಕುರಿತು ಪತ್ರಕರ್ತರ ಪುನರ್‌ಮನನ ಕಾರ್ಯಾಗಾರದಲ್ಲಿ ಮಕ್ಕಳು ಮತ್ತು ರಸ್ತೆ ಸುರಕ್ಷತೆ ವಿಷಯವಾಗಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ಮಕ್ಕಳ ಪ್ರಮಾಣ ಆತಂಕಕಾರಿ ಮಟ್ಟದಲ್ಲಿದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಕೂರಿಸುವುದು, ಪಾದಚಾರಿ ಮಾರ್ಗವನ್ನು ಬಳಸದೇ ರಸ್ತೆ ದಾಟಿಸುವುದು, ಶಾಲೆಗಳ ಮುಂದೆ ವೇಗ ನಿಯಂತ್ರಣದ ಕೊರತೆ ಇವು ಪ್ರಮುಖ ಸಮಸ್ಯೆಗಳಾಗಿವೆ ಎಂದು ಹೇಳಿದರು.
ಮಕ್ಕಳ ಭವಿಷ್ಯ ಸುರಕ್ಷಿತವಾಗಿ ಇರಬೇಕಾದರೆ, ರಸ್ತೆ ಸುರಕ್ಷತೆ ಕೇವಲ ನಿಯಮವಲ್ಲ, ಅದು ಸಾಮಾಜಿಕ ಹೊಣೆಗಾರಿಕೆಯಾಗಿ ಪರಿಗಣಿಸಬೇಕಾಗಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಶಾಲೆಗಳ ಸಮೀಪ ಸ್ಪೀಡ್ ಬ್ರೇಕರ್‌ಗಳು, ಜೀಬ್ರಾ ಕ್ರಾಸಿಂಗ್, ಸೂಚನಾ ಫಲಕಗಳು ಮತ್ತು ಟ್ರಾಫಿಕ್ ವಾರ್ಡನ್‌ಗಳ ನಿಯೋಜನೆಗೆ ಆದ್ಯತೆ ನೀಡಬೇಕಿದೆ. ಸಾರ್ವಜನಿಕರ ಸಹಕಾರದಿಂದ ಮಾತ್ರ ಮಕ್ಕಳಿಗೆ ಸುರಕ್ಷಿತ ರಸ್ತೆ ಪರಿಸರವನ್ನು ನಿರ್ಮಿಸಲು ಸಾಧ್ಯ ಎಂದರು.
ವರದಿಗಾರರು ವಿಶ್ವಾಸಾರ್ಹ ದತ್ತಾಂಶ ಮೂಲಗಳನ್ನು ಅವಲಂಬಿಸಬೇಕು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ, ಯುನಿಸೆಫ್, ಎನ್‌ಸಿಆರ್‌ಬಿ, ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳ ವರದಿಗಳು ಪ್ರಮುಖ ಮೂಲಗಳಾಗಿವೆ. ಜೊತೆಗೆ ಸ್ಥಳೀಯ ಆಡಳಿತ, ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಎನ್‌ಜಿಓಗಳ ಮಾಹಿತಿಯೂ ಉಪಯುಕ್ತವಾಗುತ್ತದೆ ಎಂದು ಹೇಳಿದರು.
- - -
ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಮೈಸೂರು ವಿವಿ ಸಹಭಾಗಿತ್ವದಲ್ಲಿ ಯುನಿಸೆಫ್ ಸಹಯೋಗದೊಂದಿಗೆ ಪತ್ರಕರ್ತರ ಕಾರ್ಯಾಗಾರ ನಡೆಯಿತು. ಶಿಬಿರಾರ್ಥಿಗಳು ಭಾಗವಹಿಸಿದ್ದರು.