ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಈ ನಡುವೆ ಚೆಲುವರಾಜ್ ಅವರು ಪ್ರಭಾರ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲು ಕಚೇರಿಗೆ ತೆರಳಿದ ವೇಳೆ ಎಚ್.ಆರ್.ಸುರೇಶ್ ಅವರು ತಮ್ಮ ಕುರ್ಚಿಯನ್ನು ಬಿಟ್ಟು ಕೊಡದೇ ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದಾಗಿ ಉಪನಿರ್ದೇಶಕರ ಕಚೇರಿಯಲ್ಲಿ ಇಬ್ಬರು ಹಾಜರಾಗಿ ಕರ್ತವ್ಯ ನಿರ್ವಹಿಸಿದ ಘಟನೆ ನಡೆಯಿತು.
ನ.26 ರಂದು ಚೆಲುವರಾಜು ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪನಿರ್ದೇಶಕರನ್ನಾಗಿ ನೇಮಕ ಮಾಡಿದ್ದು ಹಾಲಿ ಡಿಡಿ ಎಚ್.ಆರ್.ಸುರೇಶ್ ಅವರನ್ನು ಇಲಾಖೆಯ ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಖಾಲಿ ಇರುವ ಉಪನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವಾಲಯದ ಸರ್ಕಾರದ ಉಪಕಾರ್ಯದರ್ಶಿ ರಂಗನಾಥ ಆದೇಶ ಹೊರಡಿಸಿದ್ದಾರೆ.ವರ್ಗಾವಣೆಗೊಂಡರು ಸುರೇಶ್ ಅವರು ಚೆಲುವರಾಜು ಅವರಿಗೆ ಕುರ್ಚಿ ಬಿಟ್ಟು ಕೊಡದೇ ಸತಾಯಿಸುತ್ತಿದ್ದಾರೆ. ಅಲ್ಲದೇ ಕೆಎಟಿ ಮೊರೆ ಹೋಗಿದ್ದು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಕೆಎಟಿ ನಿರ್ದೇಶನ ನೀಡಿದೆ. ಗುರುವಾರವೂ ಸಹ ಉಪನಿರ್ದೇಶಕರ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ಹಾಜರಾಗುವ ಮೂಲಕ ಕರ್ತವ್ಯ ನಿರ್ವಹಿಸಿದರು.
ಎಚ್.ಆರ್.ಸುರೇಶ್ ಅವರ ಮೇಲೆ ದೂರುಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.