ಹುಬ್ಬಳ್ಳಿ:
ಹು-ಧಾ ಮಹಾನಗರದಲ್ಲಿ ಕಳೆದ ಎರಡು ವರ್ಷದಲ್ಲಿ 230ಕ್ಕೂ ಹೆಚ್ಚು ಕೊಲೆ ಪ್ರಕರಣ ದಾಖಲಾಗಿವೆ. ಹಳೆಯ ವೈಷಮ್ಯ, ಹಣಕಾಸಿನ ವಿಷಯ, ಕೌಟುಂಬಿಕ ಹಿನ್ನೆಲೆಯಲ್ಲಿ ಕೊಲೆ ಯತ್ನ ನಡೆದಿದೆ. ಈ ಕೃತ್ಯದಲ್ಲಿ ಹೊಸದಾಗಿ ಅಪರಾಧ ಮಾಡಿದವರೇ ಹೆಚ್ಚಾಗಿದ್ದಾರೆ ಎಂದು ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.ಇಲ್ಲಿಯ ಕಾರವಾರ ರಸ್ತೆಯ ಹಳೆಯ ಸಿಎಆರ್ ಮೈದಾನದಲ್ಲಿ ಬುಧವಾರ ಹು-ಧಾ ಮಹಾನಗರದಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ರೌಡಿಗಳ ಪರೇಡ್ ನಡೆಸುವ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು, ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಸಾರ್ವಜನಿಕ ಸ್ಥಳದಲ್ಲಿ ನಡೆದ ಕೃತ್ಯಗಳಿಗೆ ಸಂಬಂಧಿಸಿದಂತೆ 900ಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದೆ. ಅದರಲ್ಲಿ ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಇನ್ನೂ ಕೆಲವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎರಡು ದಿನಗಳಿಂದ ಪೂರ್ವ ತಯಾರಿ 350ಕ್ಕೂ ಹೆಚ್ಚು ಜನರನ್ನು ಕರೆಯಿಸಿ ಪರೇಡ್ ಮಾಡಿ ಅಗತ್ಯ ದಾಖಲೆ ಸಂಗ್ರಹಿಸಲಾಗಿದೆ. ಮಹಿಳೆಯರು, ಅಪ್ತಾಪ್ತರು ಕೂಡ ಇದ್ದಾರೆ ಎಂದು ಮಾಹಿತಿ ನೀಡಿದರು.ಈಚೆಗೆ ಮಂಟೂರ ರಸ್ತೆಯಲ್ಲಿ ನಡೆದ ಮಲ್ಲಿಕ್ ಜಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ಬಂಧಿಸಲಾಗಿದೆ. ಇಬ್ಬರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಶೀಘ್ರವೇ ಅವರ ಹೆಸರು ಬಹಿರಂಗಪಡಿಸಲಾಗುವುದು ಎಂದರು.
ಈ ವೇಳೆ ಡಿಸಿಪಿಗಳಾದ ರವೀಶ್ ಸಿ.ಆರ್, ಮಹನಿಂಗ ನಂದಗಾವಿ, ಎಸಿಪಿ ಶಿವಪ್ರಕಾಶ ನಾಯ್ಕ ಸೇರಿದಂತೆ ವಿವಿಧ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಉಪಸ್ಥಿತರಿದ್ದರು.26 ರೌಡಿಶೀಟರ್ ಗಡಿಪಾರು
ಈ ವಾರದಲ್ಲಿ ಇಬ್ಬರನ್ನು ಗೂಂಡಾ ಕಾಯ್ದೆಯಡಿ ಬೇರೆ ಜಿಲ್ಲೆಯ ಕಾರಾಗೃಹಕ್ಕೆ ಕಳುಹಿಸಿದ್ದು, 26 ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ. ಈ ವರ್ಷದಲ್ಲಿ ಒಟ್ಟು 6 ಗೂಂಡಾ ಕಾಯ್ದೆ, 132 ರೌಡಿಶೀಟರ್ ಗಡಿಪಾರು ಮಾಡಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾಹಿತಿ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಹಳೇಹುಬ್ಬಳ್ಳಿ ಹೆಗ್ಗೇರಿಯ ರೆಹಮತ್ ಧಾರವಾಡ(33) ಎಂಬುವನು ಒಟ್ಟು 27 ಪ್ರಕರಣದಲ್ಲಿ ಭಾಗಿಯಾಗಿದ್ದು, ಈತನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಹಾಗೂ ಹಳೇಹುಬ್ಬಳ್ಳಿ ಸದರಸೋಫಾದ ಮಹ್ಮದ್ ರಫಿಕ್ ಬಾರವಾಲೆ(28) ಇವನು 13 ಪ್ರಕಣದಲ್ಲಿ ಭಾಗಿಯಾಗಿದ್ದು, ಈತನನ್ನು ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಕಳಹಿಸಲಾಗಿದೆ ಎಂದರು. ಆಯುಕ್ತಾಲಯ ವ್ಯಾಪ್ತಿಯ 1,700 ರೌಡಿಗಳಲ್ಲಿ 500 ಮಂದಿ ಹೆಸರನ್ನು ಸನ್ನಡತೆ, ಅನಾರೋಗ್ಯ, ವಯಸ್ಸಿನ ಆಧಾರದ ಮೇಲೆ ರೌಡಿ ಪಟ್ಟಿಯಿಂದ ತೆಗೆಯಲಾಗಿದೆ. ಹೆಚ್ಚುವರಿಯಾಗಿ 108 ಮಂದಿಯನ್ನು ಸೇರ್ಪಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.