ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ರಾಮಕೃಷ್ಣ ಮಿಷನ್‌ನ ‘ಸ್ವಚ್ಛ ಮಂಗಳೂರು’ ಅಭಿಯಾನದ 2ನೇ ಆವೃತ್ತಿಯ 11ನೇ ತಿಂಗಳ ಸ್ವಚ್ಛತಾ ಅಭಿಯಾನ ಭಾನುವಾರ ಬೆಳಗ್ಗೆ 7.30ಕ್ಕೆ ವಾಮಂಜೂರು ಪರಿಸರದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಪಚ್ಚನಾಡಿಯ ಖಾಲಿ ಜಾಗದಲ್ಲಿ ಸುಮಾರು 400ಕ್ಕೂ ಅಧಿಕ ಗಿಡಗಳನ್ನು ನೆಡಲಾಯಿತು.ಮಂಗಳ ಸಮೂಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ತಂಡವು ಎಸ್.ಡಿ.ಎಂ. ಮಂಗಳಜ್ಯೋತಿ ಸಂಯುಕ್ತ ಶಾಲೆಯ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಸ್ಯಾನಿಟರಿ ಪ್ಯಾಡ್, ಗಾಜಿನ ಬಾಟಲಿಗಳು, ಪ್ಲಾಸ್ಟಿಕ್ ಬಾಟಲಿಗಳು ಮುಂತಾದ ಸುಮಾರು 3 ಟನ್‌ನಷ್ಟು ತ್ಯಾಜ್ಯವನ್ನು ತೆರವುಗೊಳಿಸಿ ಪರಿಸರ ಸ್ವಚ್ಛಗೊಳಿಸಿದರು. ಸ್ವಯಂ ಸೇವಕರಾದ ಕಮಲಾಕ್ಷ ಪೈ, ದಾಮೋದರ್ ನಾಯಕ್, ಡಾ. ಕೃಷ್ಣ ಶರಣ್, ಸೌರಾಜ್ ಮಂಗಳೂರು, ಯೋಗೀಶ್ ಕಾಯರ್ತಡ್ಕ, ಅವಿನಾಶ್ ಅಂಚನ್, ಅಚಲ್, ವಿಜೇಶ್ ದೇವಾಡಿಗ, ಮುಕೇಶ್ ಆಳ್ವ, ಸಚಿನ್ ಶೆಟ್ಟಿ ನಲ್ಲೂರು, ಸಜಿತ್, ಮಂಗಳಾ ಕಾಲೇಜ್ ಆಫ್ ನರ್ಸಿಂಗ್ ಆಂಡ್ ಅಲೈಡ್ ಹೆಲ್ತ್ ಸೈನ್ಸ್‌ನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಮಿಥುನ್ ವೇಣುಗೋಪಾಲ್, ಪ್ರಾಧ್ಯಾಪಕರಾದ ಶ್ರುತಿ ಹಾಗೂ ಸಿಲ್ಫಿಲಿಟಿ ನೇತೃತ್ವದಲ್ಲಿ ಈ ಕಾರ್ಯ ನೆರವೇರಿತು.
400 ಗಿಡಗಳ ಹಸಿರು ಹೊದಿಕೆ:ಮಂಗಳೂರು ರಾಮಕೃಷ್ಣ ಮಿಷನ್ ಹಾಗೂ ವನ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಪಚ್ಚನಾಡಿಯ ಖಾಲಿ ಜಾಗದಲ್ಲಿ ಸುಮಾರು 400ರಷ್ಟು ಗಿಡಗಳನ್ನು ನೆಡುವ ಕಾರ್ಯಕ್ಕೆ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ, ಮೈಸೂರಿನ ರಾಮಕೃಷ್ಣ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸ್ವಾಮಿ ಮಹಾಮೇಧಾನಂದಜಿ, ಜೆಪ್ಪು ಸಂತ ಜೋಸೆಫ್ ಸೆಮಿನರಿಯ ಧರ್ಮಗುರು ಫಾ. ರೆನಾಲ್ಡ್ ಸೆರಾವೋ, ಮಂಗಳೂರು ವಿವಿ ಕ್ರಿಶ್ಚಿಯನ್ ಪೀಠದ ಮುಖ್ಯಸ್ಥ ಫಾ.ಐವನ್ ಡಿಸೋಜ ಹಾಗೂ ಮಂಗಳೂರಿನ ಎಸ್.ಡಿ.ಎಂ. ವ್ಯವಹಾರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ದೇವರಾಜ್ ಚಾಲನೆ ನೀಡಿದರು. ವನ ಚಾರಿಟೇಬಲ್ ಟ್ರಸ್ಟ್‌ನ ಜೀತ್ ಮಿಲನ್ ರೋಚ್, ಮಹೇಶ್, ಪುರುಷೋತ್ತಮ್, ಗಣೇಶ್, ಹರಿಣಿ, ಪ್ರಥಮ್ ನೇತೃತ್ವದಲ್ಲಿ ಜೆಪ್ಪು ಸಂತ ಜೋಸೆಫ್ ಸೆಮಿನರಿಯ ಸದಸ್ಯರ ತಂಡ ಹಾಗೂ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಜಯೇಶ್, ರಾಕೇಶ್‌ಕೃಷ್ಣ ಹಾಗೂ ನಿತ್ಯಾಲ್ ಮಾರ್ಗದರ್ಶನದಲ್ಲಿ ಗಿಡಗಳನ್ನು ನೆಡಲಾಯಿತು.ಪ್ರಕೃತಿಗೆ ಕೃತಜ್ಞರಾಗಿರೋಣ:
ಇದಕ್ಕೂ ಮೊದಲು ಮಾತನಾಡಿದ ಮೈಸೂರಿನ ರಾಮಕೃಷ್ಣ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸ್ವಾಮಿ ಮಹಾಮೇಧಾನಂದಜಿ, ನಾವು ಮಾಡುವ ಯಾವುದೇ ಕೆಲಸ ನಮ್ಮನ್ನು ಉನ್ನತಿಗೆ ಕೊಂಡೊಯ್ಯಬೇಕು ಹಾಗೂ ಸಮಾಜಕ್ಕೆ ಸಹಕಾರಿಯಾಗಬೇಕು ಎಂಬುದು ನಮ್ಮ ನೆಲದ ಚಿಂತನೆ. ನಾವಿಂದು ಏನಾಗಿದ್ದೇವೋ ಅದು ಪ್ರಕೃತಿ ಕೊಡುಗೆ ಮತ್ತು ಅದಕ್ಕೆ ನಾವು ಕೃತಜ್ಞರಾಗಿರಬೇಕು. ನಾವು ಪ್ರಕೃತಿಯಿಂದ ಅದೆಷ್ಟೋ ಸಂಪನ್ಮೂಲಗಳನ್ನು ಪಡೆದುಕೊಂಡಿದ್ದೇವೆ. ಪೂಜ್ಯ ಭಾವದಿಂದ ಅದನ್ನು ಪ್ರಕೃತಿಗೆ ಹಿಂತಿರುಗಿಸಬೇಕು ಎಂದು ಹೇಳಿದರು.ಜೆಪ್ಪು ಸಂತ ಜೋಸೆಫ್ ಸೆಮಿನರಿಯ ಧರ್ಮಗುರು ಫಾ. ರೆನಾಲ್ಡ್ ಸೆರಾವೋ ಮಾತನಾಡಿ, ರಾಮಕೃಷ್ಣ ಮಿಷನ್ ನಡೆಸುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ. ಈ ಕಾರ್ಯದಲ್ಲಿ ಕೈಜೋಡಿಸಲು ನಮಗೆ ಅವಕಾಶ ದೊರೆತಿರುವುದು ಸಂಸತವಾಗುತ್ತಿದೆ. ಸ್ವಚ್ಛತೆಯ ಕೆಲಸ ಎಂದರೆ ಅದು ದೇವರ ಕೆಲಸ ಮತ್ತು ಜವಾಬ್ದಾರಿಯುತ ನಾಗರಿಕರಾಗಿ ನಮ್ಮಕರ್ತವ್ಯ ಎಂದು ಹೇಳಿದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಇದ್ದರು.