ಸಂಕೇಶ್ವರ ಪುರಸಭೆಯಲ್ಲಿ ಮತ್ತೆ ಕೇಸರಿ ಆಡಳಿತ ?

KannadaprabhaNewsNetwork | Published : Aug 12, 2024 1:11 AM

ಸಾರಾಂಶ

ಸಂಕೇಶ್ವರ ಪುರಸಭೆಗೆ ಕೊನೆಗೂ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಗೆ ಯೋಗ ಕೂಡಿ ಬಂದಿದೆ. ಉಳಿದ ಅವಧಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದ ಬೆನ್ನೆಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಆನಂದ ಭಮ್ಮನ್ನವರ

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಹದಿನೈದು ತಿಂಗಳಿನಿಂದ ಮೀಸಲಾತಿ ನಿರೀಕ್ಷೆಯಲ್ಲಿದ್ದ ಪಟ್ಟಣದ ಪುರಸಭೆಗೆ ಕೊನೆಗೂ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಗೆ ಯೋಗ ಕೂಡಿ ಬಂದಿದೆ. ಉಳಿದ ಅವಧಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದ ಬೆನ್ನೆಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮೀಸಲಾಗಿದೆ. ಕಳೆದ ಒಂದೂವರೆ ವರ್ಷ ಅಧ್ಯಕ್ಷರಿಲ್ಲದೆ ಪುರಸಭೆ ಸದಸ್ಯರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿತ್ತು. ಒಂದಿಲ್ಲೊಂದು ನೆಪ ಇಟ್ಟುಕೊಂಡು ಸರ್ಕಾರ ಮೀಸಲಾತಿ ಮುಂದೂಡತ್ತಲೇ ಬಂದಿತ್ತು. ಚುನಾಯಿತರಾಗಿ ಬಂದಿದ್ದರೂ ಅಧಿಕಾರಿಗಳ ಕೈಯಲ್ಲಿ ಅಧಿಕಾರ ಇದ್ದಿದ್ದರಿಂದ ವಾರ್ಡ ಜನರ ಸಮಸ್ಯೆಗೆ ಸ್ಪಂದಿಸಲಾಗದೇ ಸದಸ್ಅಯರು ಸಹಾಯಕ ಸ್ಥಿತಿ ಅನುಭವಿಸುತ್ತಿದ್ದರು. ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳು ಯಾವಾಗ ಯೋಗ ಕೂಡಿ ಬರುವುದೋ ಎಂಬ ಚಡಪಡಿಕೆಯಲ್ಲಿದ್ದರು.

ಗದ್ದುಗೆ ಉಳಿಸಿಕೊಳ್ಳುವುದೇ ಬಿಜೆಪಿ:

23 ಸದಸ್ಯ ಬಲದ ಪುರಸಭೆಯಲ್ಲಿ ಸದ್ಯ 12 ಬಿಜೆಪಿ, 9 ಕಾಂಗ್ರೆಸ್‌, ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಪುರಸಭೆಗೆ ಚುನಾವಣೆ ಫಲಿತಾಂಶ ಬಂದಾಗ ಕಾಂಗ್ರೆಸ್‌ ಪುಟಿದೆದ್ದು, 11 ಸ್ಥಾನ ಪಡೆದು ಬಿಜೆಪಿಯೊಂದಿಗೆ ಸಮಬಲ ಸಾಧಿಸಿತ್ತು. ಆದರೆ, ದಿ.ಉಮೇಶ ಕತ್ತಿ ತಂತ್ರಗಾರಿಯಿಂದ ಪಕ್ಷೇತರ ಅಭ್ಯರ್ಥಿಯನ್ನು ಸೆಳೆದು ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡುವ ಮೂಲಕ ಅಧಿಕಾರ ಹಿಡಿದಿತ್ತು. ನಂತರದಲ್ಲಿ ಓರ್ವ ಕಾಂಗ್ರೆಸ್ ಸದಸ್ಯನ ನಿಧನರಾಗಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದು ಬಿಜೆಪಿ ಜಯ ಸಾಧಿಸಿದ್ದರಿಂದ ಬಿಜೆಪಿ ಬಲ 12ಕ್ಕೇರಿದರೆ, ಕಾಂಗ್ರೆಸ್‌ 10ಕ್ಕೆ ಕುಸಿದಿತ್ತು. ನಂತರದಲ್ಲಿ ಮತ್ತೊಬ್ಬ ಸದಸ್ಯ ನಿಧನರಾಗಿದ್ದರಿಂದ ಕಾಂಗ್ರೆಸ್‌ ಬಲ 9ಕ್ಕೆ ಕುಸಿದಿದೆ.

ಪುರಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ಪ್ರಥಮ ಅವಧಿಯಲ್ಲಿ ಪಕ್ಷೇತರ ಸದಸ್ಯನ ಬೆಂಬಲದಿಂದ ಅಧ್ಯಕ್ಷೆಯಾಗಿ ಬಿಜೆಪಿಯ ಸೀಮಾ ಹತನೂರ, ಪಕ್ಷೇತರ ಸದಸ್ಯ ಅಜಿತ ಕರಜಗಿ ಉಪಾಧ್ಯಕ್ಷರಾಗಿ ಆಡಳಿತ ನಡೆಸಿದ್ದರು.

ಬಿಜೆಪಿ ಭದ್ರ ಕೋಟೆ ಭೇದಿಸುವುದೇ ಕಾಂಗ್ರೆಸ್ !

ಹುಕ್ಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸಂಕೇಶ್ವರ ಪುರಸಭೆ ಕಳೆದ ಹಲವು ವರ್ಷಗಳಿಂದ ಕತ್ತಿ ಸಹೋದರರ ಹಿಡಿತದಲ್ಲಿದ್ದು, ಕತ್ತಿ ಬೆಂಬಲಿಗರೇ ಅಧಿಕಾರ ಚುಕ್ಕಾಣಿ ಹಿಡಿಯುತ್ತಾ ಬಂದಿದ್ದಾರೆ. ಬಿಜೆಪಿಗೆ ಸ್ಪಷ್ಟ ಬಹುಮತವಿರುವುದರಿಂದ ಈ ಬಾರಿಯೂ ಬಿಜೆಪಿಯವರೇ ಅಧ್ಯಕ್ಷ-ಉಪಾಧ್ಯಕ್ಷರಾಗುವ ಸಾಧ್ಯತೆಗಳು ಹೆಚ್ಚಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸು ಮಾಡಿದರೆ ಈ ಬಾರಿ ಕಮಲ ಕೋಟೆ ಭೇದಿಸುವುದು ದೊಡ್ಡ ಸವಾಲೇನೂ ಅಲ್ಲ.

ಸದ್ಯದ ಮಟ್ಟಿಗೆ ಬಿಜೆಪಿ ಮತ್ತೆ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರುವುದರಿಂದ ಬಿಜೆಪಿಯ ಮನೋರಮಾ ಸುಗತೆ, ವಿದ್ಯಾಶ್ರೀ ಬಾಂಬರೆ, ಸುಚಿತಾ ಪರೀಟ ಪೈಪೋಟಿಯಲ್ಲಿದ್ದಾರೆ. ನಿರ್ಗಮಿತ ಅಧ್ಯಕ್ಷೆ ಸೀಮಾ ಹತನೂರೆ ಕೂಡ ಮತ್ತೊಂದು ಅವಧಿಗೆ ಹುದ್ದೆಗೇರಲು ಕಣ್ಣಿಟ್ಟಿದ್ದಾರೆ. ಹಿಂದುಗಳಿದ ವರ್ಗ ಅ ದಲ್ಲಿ ವಿವೇಕ ಕ್ವಳ್ಳಿ, ಸಚಿನ ಭೋಪಳೆ ಉಪಾಧ್ಯಕ್ಷ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ.ಮ್ಯಾಜಿಕ್‌ ನಿರೀಕ್ಷೆಯಲ್ಲಿ ಕಾಂಗ್ರೆಸ್‌:

ಬಹುಮತ ಇಲ್ಲದಿದ್ದರೂ ಕಾಂಗ್ರೆಸ್‌ ಜಿಲ್ಲಾ ಉಸ್ತುವಾರಿ ಸಚಿವರು ಮ್ಯಾಜಿಕ್‌ ಮಾಡುವ ನಿರೀಕ್ಷೆಯಲ್ಲಿ ಸದಸ್ಯರಿದ್ದಾರೆ. ಕಾಂಗ್ರೆಸ್‌ ನಲ್ಲಿ ಸವಿತಾ ನಷ್ಠಿ, ಶೇವಂತಾ ಕಬ್ಬೂರಿ, ಸಂಗೀತಾ ಕೋಳಿ, ಪಾರ್ವತಿ ನಾಯಿಕ, ರಿಜ್ವಾನ್‌ ರಾಂಪೂರೆ, ಲತಾ ಮರಡಿ ಅಧ್ಯಕ್ಷರಾಗುವ ಅರ್ಹತೆ ಹೊಂದಿದ್ದಾರೆ. ಹಿಂದುಳಿದ ಅ ವರ್ಗಕ್ಕೆಮೀಸಲಿರುವ ಉಪಾಧ್ಯಕ್ಷ ಸ್ಥಾನಕ್ಕೆ ಡಾ.ಜಯಪ್ರಕಾಶ ಕರಜಗಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ:

ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ತಮ್ಮದೆ ಆದ ಲೆಕ್ಕಾಚಾರದಲ್ಲಿ ತಂತ್ರ ಹೆಣೆಯುತ್ತಿದ್ದಾರೆ. ಬಿಜೆಪಿಗೆ ಅಗತ್ಯ ಸಂಖ್ಯಾಬಲ ಇರುವುದು, ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಚ್ಚಾಟದ ಪರಿಣಾಮ ಕೇಸರಿ ಪಾಳಯದ ದಾರಿ ಸುಗಮವಾಗಿದೆ ಎಂಬ ಮಾತು ಕೇಳಿಬರುತ್ತಿವೆ. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಡಾ.ಜಯಪ್ರಕಾಶ ಕರಜಗಿ ಸ್ಪರ್ಧೆ ಮಾಡಿದರೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಪಕ್ಷೇತರ ಸದಸ್ಯ ಡಾ.ಕರಜಗಿ ಅವರ ಸಂಬಂಧಿಯಾಗಿದ್ದು, ಇನ್ನಿಬ್ಬರು ಬಿಜೆಪಿ ಸದಸ್ಯರು ಉತ್ತಮ ಒಡನಾಟ ಹೊಂದಿರುವುದರಿಂದ ಉಪಾಧ್ಯಕ್ಷ ಸ್ಥಾನ ಬಿಜೆಪಿ ಕೈತಪ್ಪಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

---ಕೋಟ್‌---

-ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಕಾಂಕ್ಷಿಗಳ ಸಭೆ ನಡೆಸಲಾಗುವುದು. ಒಮ್ಮತದ ಅಭ್ಯರ್ಥಿಗಳ ಆಯ್ಕೆಗೆ ಪ್ರಯತ್ನಿಸಲಾಗುವುದು. ಈ ಬಾರಿ ಸಂಕೇಶ್ವರ ಪುರಸಭೆ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ಎಲ್ಲ ತಯಾರಿ ನಡೆಸಿದ್ದೇವೆ.

ಎ.ಬಿ‌. ಪಾಟೀಲ ಮಾಜಿ ಸಚಿವರು, ಕಾಂಗ್ರೆಸ್ ಹಿರಿಯ ಮುಖಂಡರು.

Share this article